

ಮೈಸೂರು: ಪ್ರವಾಸಿಗರ ಮನರಂಜನೆಗಾಗಿ ‘ಫನ್ ಫೇರ್ ಎಕ್ಸಿಬಿಷನ್’ ನಗರದ ದಸರಾ ವಸ್ತುಪ್ರದರ್ಶನದ ಆವರಣದಲ್ಲಿ ಮೇ 9ರಿಂದ ಜೂ.22ರವರೆಗೆ ಹಮ್ಮಿಕೊಳ್ಳಲಾಗಿದೆ.
ದಸರಾ ವಸ್ತುಪ್ರದರ್ಶನದ ಆವರಣದಲ್ಲಿ ವರ್ಷವಿಡೀ ವಿವಿಧ ವಸ್ತುಪ್ರದರ್ಶನ ಸೇರಿದಂತೆ ವಿವಿಧ ಚಟುವಟಿಕೆ ನಡೆಸಬೇಕೆಂಬ ಉದ್ದೇಶ ಇದೆ. ಅದರ ಭಾಗವಾಗಿ ಈ ‘ಮೋಜಿನ ಜಾತ್ರೆ’ ವಸ್ತುಪ್ರದರ್ಶನ ಏರ್ಪಡಿಸಲಾಗಿದೆ.
ಬೆಂಗಳೂರಿನ ಇಂಡಿಯನ್ ಕನ್‌ಸ್ಯೂಮರ್ಸ್ ಎಂಟರ್‌ಟ್ರೈನರ್ ಸಂಸ್ಥೆ ಮತ್ತು ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಸಹಯೋಗದಲ್ಲಿ 40 ದಿನಗಳ ಕಾಲ ಇದು ನಡೆಯಲಿದೆ ಎಂದು ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿವಿಧ ಮಳಿಗೆ ಒಳಗೊಂಡಂತೆ ಜನರಿಗೆ ಮನರಂಜನೆ ನೀಡಲು ಜಾಯಿಂಟ್ ವ್ಹೀಲ್ ಸೇರಿದಂತೆ ವಿವಿಧ ಆಟಿಕೆ(ಅಮ್ಯೂಸ್‌ಮೆಂಟ್ ಪಾಕ್)ಗಳನ್ನು ಫನ್ ಫೇರ್ ಸಂಸ್ಥೆ ಅಳವಡಿಸಿದೆ. ನಿತ್ಯ ಮಧ್ಯಾಹ್ನ 3ರಿಂದ ರಾತ್ರಿ 9ರವರೆಗೂ ಸಾರ್ವಜನಿಕರು ವಸ್ತುಪ್ರದರ್ಶನ ವೀಕ್ಷಿಸಬಹುದಾಗಿದೆ. ವಯಸ್ಕರಿಗೆ 50 ರೂ., ಮಕ್ಕಳಿಗೆ 30 ರೂ. ಪ್ರವೇಶ ಶುಲ್ಕ ನಿಗದಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರಮುಖ ಆಕರ್ಷಣೆಯಾಗಿ 120 ಅಡಿ ಉದ್ದ, 30 ಅಡಿ ಎತ್ತರದಿಂದ ಬೀಳುವಂತೆ ಅಮೆರಿಕದ ನಯಾಗರ್ ಫಾಲ್ಸ್ ಮಾದರಿಯನ್ನು ನಿರ್ಮಿಸಲಾಗಿದೆ. ಹಲವು ವಿಶೇಷತೆಗಳೊಂದಿಗೆ ನಡೆಯುವ ವಸ್ತುಪ್ರದರ್ಶನದಿಂದ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರಕ್ಕೆ 34 ಲಕ್ಷ ರೂ. ಬಾಡಿಗೆ ರೂಪದಲ್ಲಿ ಆದಾಯ ಲಭಿಸಿದೆ ಎಂದು ತಿಳಿಸಿದರು.
ಬೇಸಿಗೆ ರಜೆ ಹಿನ್ನೆಲೆಯಲ್ಲಿ ಮೈಸೂರಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದು, ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಸಂಜೆ ವೇಳೆ ಈ ವಸ್ತುಪ್ರದರ್ಶನ ಮನರಂಜನೆ ಒದಗಿಸಲಿದೆ ಎಂದು ಹೇಳಿದರು.
ದಸರಾ ವಸ್ತು ಪ್ರದರ್ಶನ ಆವರಣದ ‘ಎ’ ಬ್ಲಾಕ್‌ನಲ್ಲಿರುವ ಮಳಿಗೆಗಳನ್ನು 9.5 ಕೋಟಿ ರೂ. ವೆಚ್ಚದಲ್ಲಿ ಹಳೆಬೀಡು ಶೈಲಿಯಲ್ಲಿ ನಿರ್ಮಿಸುವುದಕ್ಕೆ ಈಗಾಗಲೇ ಅನುಮತಿ ದೊರೆತಿದೆ. ಟೆಂಡರ್ ಪ್ರಕ್ರಿಯೆ ನಡೆಸಲಾಗಿತ್ತು. ಆದರೆ ತಾಂತ್ರಿಕ ದೋಷದಿಂದಾಗಿ ಟೆಂಡರ್ ಪ್ರಕ್ರಿಯೆ ರದ್ದು ಮಾಡಲಾಗಿದೆ. ಮತ್ತೊಮ್ಮೆ ಟೆಂಡರ್ ಕರೆಯಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ವಸ್ತುಪ್ರದರ್ಶನದ ಆವರಣದಲ್ಲಿರುವ ನೀರಿನ ಕಾರಂಜಿಗಳಿಗೆ ಹೊಸ ರೂಪ ನೀಡಬೇಕಾಗಿದೆ. ಸುಸಜ್ಜಿತ ಹಾಗೂ ಆಕರ್ಷಣೀಯವಾಗಿ ನೀರಿನ ಕಾರಂಜಿಯನ್ನು 9.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು. ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೀಘ್ರವೇ ಕಾಮಗಾರಿ ಶುರುವಾಗಲಿದೆ ಎಂದು ಮಾಹಿತಿ ನೀಡಿದರು.
‘ಎ’ ಬ್ಲಾಕ್ ಮಳಿಗೆ ನಿರ್ಮಾಣ ಹಾಗೂ ನೀರಿನ ಕಾರಂಜಿ ನಿರ್ಮಾಣ ಕಾಮಗಾರಿ ಸೆ.21ರೊಳಗೆ ಪೂರ್ಣಗೊಳ್ಳಲಿದ್ದು, ದಸರಾ ವೇಳೆಗೆ ಹೊಸ ಕಾರಂಜಿಗಳು ಎಲ್ಲರನ್ನು ರಂಜಿಸಲಿವೆ ಎಂದು ತಿಳಿಸಿದರು.
ವಸ್ತುಪ್ರದರ್ಶನ ಆವರಣದಲ್ಲಿ 3.5 ಕೋಟಿ ರೂ. ವೆಚ್ಚದಲ್ಲಿ ದುಬೈ ಮಾದರಿಯಲ್ಲಿ ಬೋಟಿಂಗ್ ಪಾಯಿಂಟ್ ನಿರ್ಮಿಸಲು ಉದ್ದೇಶಿಸಲಾಗಿದೆ. ಅದಕ್ಕಾಗಿ ಪ್ರಸ್ತಾವನೆ ತಯಾರಿಸಿ ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ.
ಇದಕ್ಕೆ ಅನುಮತಿ ದೊರೆತ ನಂತರ 100 ಅಡಿ ಅಗಲ, 210 ಅಡಿ ಉದ್ದದ ಬೋಟಿಂಗ್ ಪಾಯಿಂಟ್ ನಿರ್ಮಿಸಲಾಗುತ್ತದೆ. ಅದರ ಸುತ್ತಲೂ ಲೇಸರ್ ಶೋ ಇರುತ್ತದೆ. ಬೋಟಿಂಗ್ ಪಾಯಿಂಟ್ ಪೂರ್ಣಗೊಂಡರೆ ವಸ್ತುಪ್ರದರ್ಶನ ಸಂಜೆ ವೇಳೆ ಸದಾ ಚಟುವಟಿಕೆಯಿಂದ ಕೂಡಿರುತ್ತದೆ ಎಂದು ಹೇಳಿದರು.