

ಮೈಸೂರು: ನಾನು ಹಾಗೂ ನನ್ನ ಕುಟುಂಬ ಅಪಘಾತಕ್ಕೀಡಾದ ಸಂದರ್ಭದಲ್ಲಿ ಇಲ್ಲಿಯ ಜನರು ತೋರಿದ ಪ್ರೀತಿ ಮರೆಯಲು ಸಾಧ್ಯವಿಲ್ಲ. ಎಲ್ಲರ ಪ್ರೀತಿಯಿಂದ ಕರ್ನಾಟಕದಲ್ಲಿಯೂ ನಮ್ಮ ಪರಿವಾರ ಇದೆ ಎನ್ನುವ ಭಾವನೆ ಮೂಡಿದೆ. ಎಲ್ಲರ ಪ್ರೀತಿಗೆ ಕೃತಜ್ಞನಾಗಿದ್ದೇನೆ ಎಂದು ಪ್ರಧಾನಿ ನರೇಂದ್ರಮೋದಿ ಅವರ ಸಹೋದರ ಪ್ರಹ್ಲಾದ್ ದಾಮೋದರ್ ಮೋದಿ ಹೇಳಿದರು.
ಕುಟುಂಬದೊಂದಿಗೆ ಬಂಡೀಪುರಕ್ಕೆ ತೆರಳುತ್ತಿದ್ದಾಗ ಮೈಸೂರು ತಾಲೂಕು ಕಡಕೊಳ ಬಳಿ ಸಂಭವಿಸಿದ ಅಪಘಾತದಿಂದ ಸಣ್ಣ ಪ್ರಮಾಣದಲ್ಲಿ ಗಾಯಗೊಂಡು ನಗರದ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿರುವ ಅವರು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
ನಾವು ಪ್ರಯಾಣಿಸುತ್ತಿದ್ದ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆಯಿತು. ಸದ್ಯ ಘಟನೆಯಲ್ಲಿ ಯಾರಿಗೂ ತೊಂದರೆ ಆಗಲಿಲ್ಲ. ಗ್ರಾಮಸ್ಥರು, ಕಮಾಂಡೋಗಳು, ಪೊಲೀಸ್ ಸಿಬ್ಬಂದಿ ಬೇಗ ಆಸ್ಪತ್ರೆಗೆ ದಾಖಲಿಸಿದರು. ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿ ಕಾಳಜಿ, ಪ್ರೀತಿಯಿಂದ ನೋಡಿಕೊಂಡರು. ಕರ್ನಾಟಕ ಸರ್ಕಾರ ಅಧಿಕಾರಿಗಳು, ವಿವಿಧ ಮುಖಂಡರು, ಶಾಸಕರು, ಪ್ರತಿಪಕ್ಷದವರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಇದು ರಾಜ್ಯದಲ್ಲಿಯೂ ನಮ್ಮ ಕುಟುಂಬವಿದೆ ಎನ್ನುವ ಭಾವನೆ ಮೂಡಿದೆ ಎಂದು ಅಭಿಮಾನ ವ್ಯಕ್ತಪಡಿಸಿದರು.
ದೇವರ ಕೃಪೆಯಿಂದ ಪಾರಾಗಿದ್ದೇವೆ: ಎರಡು ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದೆವು. ಒಂದು ಕಾರಿನಲ್ಲಿ ನಾನು, ಮಗ, ಸೊಸೆ, ಮೊಮ್ಮಗ ಇದ್ದೆವು. ಮತ್ತೊಂದು ಕಾರಿನಲ್ಲಿ ಮಗಳು, ಅಳಿಯ ಮತ್ತು ಕುಟುಂಬದವರು ಇದ್ದರು. ನನ್ನ ಸ್ನೇಹಿತ ಬೆಂಗಳೂರಿನ ರಾಜಶೇಖರ್ ಅವರಿಂದ ಕಾರು ಪಡೆದುಕೊಂಡಿದ್ದೆವು. ಬೆಂಗಾವಲು ಪಡೆ ಇದ್ದುದ್ದರಿಂದ ಕಾರು ಅತಿವೇಗವಾಗಿ ಹೋಗಲು ಸಾಧ್ಯವೇ ಇಲ್ಲ. ಏನೋ ಅಚಾನಕ್ಕಾಗಿ ಅಪಘಾತ ನಡೆದು ಹೋಯಿತು. ಇದರಲ್ಲಿ ಚಾಲಕನದು ಏನೂ ತಪ್ಪಿಲ್ಲ. ಎಲ್ಲವೂ ವಿಧಿ ಲಿಖಿತ. ದೇವರ ಕೃಪೆಯಿಂದ ನಾವೆಲ್ಲರೂ ಪಾರಾಗಿದ್ದೇವೆ ಎಂದರು.
ಆಸ್ಪತ್ರೆಯಲ್ಲಿ ಎಲ್ಲರೂ ಕಾಳಜಿ ತೋರಿದರು. ಗುರುಗಳ ಬಳಿ ನಾವು ಹೋಗುತ್ತಿದ್ದೆವು. ಆದರೆ ಅಪಘಾತವಾಗಿ ಆಸ್ಪತ್ರೆಯಲ್ಲಿ ಇದ್ದಾಗ ಗುರುಗಳೇ (ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ)ನಮ್ಮಲ್ಲಿಗೆ ಬಂದು ಆರೋಗ್ಯ ವಿಚಾರಿಸಿ ಶೀಘ್ರ ಗುಣಮುಖವಾಗುವಂತೆ ಆಶೀರ್ವಾದ ಮಾಡಿರುವುದು ಸುಯೋಗ ಎಂದು ಹೇಳಿದರು.
ಅಪಘಾತ ಸುದ್ದಿ ತಿಳಿದು ಪ್ರಧಾನಿ ನರೇಂದ್ರಮೋದಿ ದೂರವಾಣಿ ಮೂಲಕ ಆರೋಗ್ಯ ವಿಚಾರಿಸಿದ್ದಾರೆ. ಎಲ್ಲರೂ ಚೇತರಿಸಿಕೊಂಡಿದ್ದು, ಯಾರಿಗೂ ತೊಂದರೆ ಆಗಿಲ್ಲ ಎಂದು ಹೇಳಿದ್ದೇನೆ. ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕ ಗುಜರಾತ್‌ಗೆ ತೆರಳುತ್ತೇವೆ ಎಂದರು.
ಜೆಎಸ್‌ಎಸ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಸಿ.ಪಿ.ಮಧು ಮಾತನಾಡಿ, ಅಪಘಾತವಾದ ಕಾರಿನಲ್ಲಿ ಚಾಲಕ ಸೇರಿ ಐವರು ಇದ್ದರು. ಪ್ರಹ್ಲಾದ್ ಮೋದಿ, ಮಗ, ಸೊಸೆಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಮೊಮ್ಮಗನಿಗೆ ಎಡಗಾಲಿನ ಮೂಳೆ ಮುರಿದಿತ್ತು. ಸಿಮೆಂಟ್ ಪ್ಲಾಸ್ಟಿಂಗ್ ಮಾಡಲಾಗಿದೆ. ಎಲ್ಲರೂ ಆರೋಗ್ಯವಾಗಿದ್ದು, ಮತ್ತೊಮ್ಮೆ ಎಲ್ಲರ ಆರೋಗ್ಯ ಪರಿಶೀಲಿಸಿ ಆಸ್ಪತ್ರೆಯಿಂದ ಕಳುಹಿಸಿಕೊಡಲಾಗುವುದು ಎಂದು ತಿಳಿಸಿದರು.
ಶಾಸಕ ಎಸ್.ಎ.ರಾಮದಾಸ್, ಜೆಎಸ್‌ಎಸ್ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಬಸವನಗೌಡಪ್ಪ ಇದ್ದರು.
ಸೀಟ್ ಬೆಲ್ಟ್ ಜೀವ ಉಳಿಸಿತು!
ಕಾರು ಅಪಘಾತವಾದರೂ ಎಲ್ಲರೂ ಸೀಟ್ ಬೆಲ್ಟ್ ಹಾಕಿದ್ದರಿಂದ ಏರ್‌ಬ್ಯಾಗ್ ಓಪನ್ ಆಗಿ ಎಲ್ಲರ ಜೀವ ಉಳಿಯಿತು ಎಂದು ಪ್ರಹ್ಲಾದ ದಾಮೋದರ್ ಮೋದಿ ಹೇಳಿದರು.
ನಾವೆಲ್ಲರೂ ಸೀಟ್ ಬೆಲ್ಟ್ ಧರಿಸಿದ್ದರಿಂದ ಅಪಾಯದಿಂದ ಪಾರಾಗಿದ್ದೇವೆ. ಹಾಗಾಗಿ ಕಾರಿನಲ್ಲಿ ಹೋಗುವ ಪ್ರತಿಯೊಬ್ಬರೂ ಸೀಟ್ ಬೆಲ್ಟ್ ಧರಿಸಿ ಪ್ರಯಾಣ ಮಾಡುವಂತೆ ಸಲಹೆ ನೀಡಿದರು.