ಮೈಸೂರು: ನಗರದ ಕುರಿಮಂಡಿ ಕಸಾಯಿಖಾನೆಯಿಂದ ಸುತ್ತಮುತ್ತಲ ಪ್ರದೇಶದಲ್ಲಿ ಅನೈರ್ಮಲ್ಯ ಕಾಡುತ್ತಿದ್ದು, ಒಂದು ವಾರದಲ್ಲಿ ಸರಿಪಡಿಸದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಸೇವಾ ಚಿಲುಮೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಕಾರ್ತಿಕ್ ಮರಿಯಪ್ಪ ಹೇಳಿದರು.
ಕೆಸರೆ ಎರಡನೇ ಹಂತದ ಅಂಬೇಡ್ಕರ್‌ನಗರದಲ್ಲಿರುವ ಕುರಿಮಂಡಿ ಕಸಾಯಿಖಾನೆಯಿಂದಾಗಿ ಸುತ್ತಮುತ್ತಲ ನಿವಾಸಿಗಳಿಗೆ ತೀವ್ರ ಸಮಸ್ಯೆ ಉಂಟಾಗುತ್ತಿದ್ದು, ಅದನ್ನು ಸ್ಥಳಾಂತರಿಸುವಂತೆ ಜನಪ್ರತಿನಿಧಿಗಳು, ಪಾಲಿಕೆ ಅಧಿಕಾರಿಗಳಿಗೆ ಸಾಕಷ್ಟು ಮನವಿ ಮಾಡಿದರೂ ಸ್ಪಂದನೆ ದೊರೆತಿಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಕುರಿಮಂಡಿಯಲ್ಲಿ ಕಡಿಯುವ ಪ್ರಾಣಿಗಳ ತ್ಯಾಜ್ಯ ಹಾಗೂ ಅಲ್ಲಿಂದ ಬರುವ ಕೆಟ್ಟವಾಸನೆ ಸುತ್ತಮುತ್ತಲ ನಿವಾಸಿಗಳ ಅನಾರೋಗ್ಯಕ್ಕೆ ಕಾರಣವಾಗಿದೆ. ಕಸಾಯಿಖಾನೆ ತ್ಯಾಜ್ಯದಿಂದಾಗಿ ಸಾಂಕ್ರಾಮಿಕ ರೋಗ ಕಾಣಿಸಿಕೊಂಡಲ್ಲಿ ಅದಕ್ಕೆ ಸಂಬಂಧಿಸಿದವರೇ ಹೊಣೆಯಾಗಬೇಕಾಗುತ್ತದೆ. ಸ್ಥಳೀಯ ಪಾಲಿಕೆ ಸದಸ್ಯರು, ಶಾಸಕರು ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಹೀಗಾಗಿ ವಾರದೊಳಗೆ ಸಮಸ್ಯೆ ಬಗೆಹರಿಸದಿದ್ದಲ್ಲಿ ಕುರಿಮಂಡಿ ಎದುರು ಆಮರಣಾಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.
ಟ್ರಸ್ಟ್ ಪದಾಧಿಕಾರಿಗಳಾದ ಸಂಜಯ್, ಚಂದ್ರು, ರಮೇಶ್, ದೊರೆಯಣ್ಣ,, ಮಣಿಯಣ್ಣ ಇತರರು ಇದ್ದರು.