

ಆರ್.ಕೃಷ್ಣ ಮೈಸೂರು
ಕಳೆದ 20 ವರ್ಷಗಳಿಂದ ನಗರದ ವಿದ್ಯಾರಣ್ಯಪುರಂನ ಸೂಯೇಜ್ ಫಾರ್ಮ್‌ನಲ್ಲಿ ಕಾಡುತ್ತಿರುವ ಕಸ ಸಮಸ್ಯೆಗೆ ಈಗ ಮುಕ್ತಿ ನೀಡುವ ಕಾರ್ಯಕ್ಕೆ ಚಾಲನೆ ದೊರಕಿದೆ. ಗುಡ್ಡದಂತೆ ಬೆಳೆದು ನಿಂತಿದ್ದ ಕಸದ ರಾಶಿಯನ್ನು ಕರಗಿಸುವ ಕಾರ್ಯ ಈಗಾಗಲೇ ಆರಂಭಗೊಂಡಿದ್ದು, ಇನ್ನು ಕೆಲ ತಿಂಗಳಲ್ಲಿ ಕಸಕ್ಕೆ ಮುಕ್ತಿ ದೊರೆಯಲಿದೆ.
ಇದರಿಂದ ಹಲವಾರು ವರ್ಷಗಳಿಂದ ಕಸದ ಸಮಸ್ಯೆ, ದುರ್ವಾಸನೆಯಿಂದ ನರಕಯಾತನೆ ಅನುಭವಿಸುತ್ತಿದ್ದ ವಿದ್ಯಾರಣ್ಯಪುರಂ, ಜೆ.ಪಿ.ನಗರ ಸೇರಿದಂತೆ ಸುತ್ತಮುತ್ತಲ ಪ್ರದೇಶದ ಜನರಿಗೆ ನೆಮ್ಮದಿ ದೊರೆಯಲಿದೆ. ಗುಜರಾತ್ ಮೂಲದ ಕಂಪನಿಯೊಂದಕ್ಕೆ ಕಸ ವಿಲೇವಾರಿ ಜವಾಬ್ದಾರಿ ನೀಡಲಾಗಿದ್ದು, ಕಸವನ್ನು ಕರಗಿಸಿ ಗೊಬ್ಬರ ಸೇರಿದಂತೆ ನಾನಾ ವಸ್ತುಗಳನ್ನು ತಯಾರಿಸುವ ಕಾರ್ಯ ಸದ್ದಿಲ್ಲದೇ ನಡೆಯುತ್ತಿದೆ.
ನಗರದಲ್ಲಿ ನಿತ್ಯ 450 ರಿಂದ 500 ಟನ್ ಕಸ ಉತ್ಪತ್ತಿಯಾಗುತ್ತಿದ್ದು, ವಿದ್ಯಾರಣ್ಯಪುರಂನ ಸೂಯೆಜ್ ಫಾರಂನಲ್ಲಿರುವ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಹಾಕಲಾಗುತ್ತಿತ್ತು. ಆದರೆ ಇಲ್ಲಿ ಕೇವಲ 200 ಟನ್ ಕಸವನ್ನು ವಿಲೇವಾರಿ ಮಾಡುವ ವ್ಯವಸ್ಥೆ ಇದ್ದು, ಪ್ರತಿದಿನ 300 ಟನ್ ಕಸ ಉಳಿಯುತ್ತಿತ್ತು. 2001ರಿಂದ ಇಲ್ಲಿಯವರೆಗೆ ಸುಮಾರು 7ಲಕ್ಷ ಟನ್ ಕಸ ವಿಲೇವಾರಿಯಾಗದೆ ಉಳಿದಿದ್ದರಿಂದ ಕಸದ ಗುಡ್ಡೆ ಬೆಟ್ಟದಂತೆ ಬೆಳೆದು ನಿಂತಿತ್ತು.
ತ್ಯಾಜ್ಯದಲ್ಲಿರುವ (ಲೆಗಸಿ ವೇಸ್ಟ್) ಪ್ಲಾಸ್ಟಿಕ್, ಮಣ್ಣು, ಗಾಜು ಸೇರಿದಂತೆ ಇನ್ನಿತರ ಘನ ಪದಾರ್ಥಗಳ್ನು ವಿಂಗಡಿಸಲಾಗುತ್ತಿದೆ. ದೊರೆಯುವ ಪ್ಲಾಸ್ಟಿಕ್ ಮರುಬಳಕೆ ಹಾಗೂ ಘನ ಪದಾರ್ಥಗಳನ್ನು ಮರುಬಳಕೆ ಮಾಡಲಾಗುತ್ತಿದೆ. ಈ ಮೂಲಕ ಕಸದ ರಾಶಿ ತೆರವುಗೊಳಿಸಿ 15 ಎಕರೆ ಜಾಗವನ್ನು ಮರುಬಳಕೆ ಮಾಡಿಕೊಳ್ಳಲಾಗುತ್ತಿದೆ.
ಸಿಮೆಂಟ್ ತಯಾರಿಕೆ ಕಾರ್ಖಾನೆಗೆ ರವಾನೆ
ಯೋಜನೆಯಂತೆ 7 ಲಕ್ಷ ಮೆಟ್ರಿಕ್ ಟನ್ ಕಸದಲ್ಲಿರುವ ಗೊಬ್ಬರ, ಮಣ್ಣು, ಲೋಹ, ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ವಿಂಗಡಣೆ ಮಾಡಲಾಗುತ್ತದೆ. ನಂತರ ಉಪಯುಕ್ತವಾದ ಮರುಬಳಕೆ ವಸ್ತುಗಳನ್ನು ಸದ್ಬಳಕೆ ಮಾಡಿಕೊಳ್ಳಲಾಗುತ್ತದೆ. ಆದರೆ ಈ ಕಸದ ರಾಶಿಯಲ್ಲಿ ಹೆಚ್ಚಾಗಿ ಪ್ಲಾಸ್ಟಿಕ್ ಸೇರಿದೆ. ಇದನ್ನು ಸಿಮೆಂಟ್ ತಯಾರಿಕೆ ಕಾರ್ಖಾನೆಗೆ ಇಂಧನವಾಗಿ ಬಳಕೆ ಮಾಡಲು ನೀಡಲಾಗುತ್ತದೆ. ಈ ಮೂಲಕ ಕಸದ ರಾಶಿ ತೆರವುಗೊಳಿಸಲಾಗುತ್ತದೆ. ಆದರೆ, ಮೈಸೂರು ಸುತ್ತಲ 300ರಿಂದ 400 ಕಿ.ಮೀ. ವ್ಯಾಪ್ತಿಯಲ್ಲಿ ಸಿಮೆಂಟ್ ತಯಾರಿಕೆ ಕಾರ್ಖಾನೆಗಳಿಲ್ಲದಿರುವುದರಿಂದ ದೂರ ಪ್ರದೇಶಕ್ಕೆ ಸಾಗಿಸಬೇಕಿದೆ. ಉತ್ಪತ್ತಿಯಾಗುವ ಕಸವನ್ನು ಇತರೆ ನಗರಗಳಲ್ಲಿ ಹೊರ ಭಾಗದಲ್ಲಿ ವಿಲೇವಾರಿ ಮಾಡಲಾಗುತ್ತದೆ. ಆದರೆ ರಾಜರ ಆಳ್ವಿಕೆ ಕಾಲದಲ್ಲಿ ವಿದ್ಯಾರಣ್ಯಪುರಂನಲ್ಲಿ ಚಿಕ್ಕದಾಗಿ ನಡೆಯುತ್ತಿದ್ದ ಜಾಗವನ್ನೇ ಈಗಲೂ ಬಳಸಿಕೊಳ್ಳಲಾಗುತ್ತಿದೆ.
ಸೂಯೇಜ್ ಫಾರ್ಮ್‌ನಲ್ಲಿ ಸಾಮರ್ಥ್ಯಕ್ಕೂ ಮೀರಿ ಸಂಗ್ರಹ
ವಿದ್ಯಾರಣ್ಯಪುಂ ಸೂಯೇಜ್ ಫಾರ್ಮ್‌ನಲ್ಲಿ ಸಾಮರ್ಥ್ಯಕ್ಕೂ ಮೀರಿ ಕಸ ಸಂಗ್ರಹಣೆಯಾಗುತ್ತಿರುವುದರಿಂದ ಸಮಸ್ಯೆ ಉಂಟಾಗಿದೆ. ಹೀಗಾಗಿ, 2030ರವರೆಗೆ ನಗರದಲ್ಲಿ ಉತ್ಪತ್ತಿಯಾಗುವ ಅಂದಿನ ಕಸವನ್ನು ಅಂದೇ ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ದೂರ ದೃಷ್ಟಿಯಿಂದ ರಾಯನಕೆರೆ ಹಾಗೂ ಕೆಸರೆ ಘನತ್ಯಾಜ್ಯ ವಿಲೇವಾರಿ ಘಟಕ ಆರಂಭಿಸಲಾಗಿದೆ. ಕೆಸರೆಯಲ್ಲಿ 22 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ 200 ಟನ್ ಸಾಮರ್ಥ್ಯದ ಘನ ತ್ಯಾಜ್ಯ ವಿಲೇವಾರಿ ಹಾಗೂ ಮರುಬಳಕೆ ಘಟಕ ಕಾರ್ಯಾರಂಭಿಸಿದ್ದು, 9.2 ಕೋಟಿ ರೂ. ವೆಚ್ಚದಲ್ಲಿ ರಾಯನಕೆರೆ ಬಳಿ ನಿರ್ಮಿಸಿರುವ 150 ಟನ್ ಕಸ ವಿಲೇವಾರಿ ಘಟಕ ಕಾರ್ಯಾರಂಭಿಸಲಿದೆ.
ಕಸದ ವಿಲೇವಾರಿ ಕಾರಣಕ್ಕೆ ಸ್ವಚ್ಛನಗರಿ ಪಟ್ಟ ಪಡೆದುಕೊಂಡಿರುವ ಮೈಸೂರು ಕಳೆದ ಹಲವು ವರ್ಷಗಳಿಂದ ಸ್ವಚ್ಛ ಸರ್ವೇಕ್ಷಣೆ ಅಭಿಯಾನದಲ್ಲಿ ಹಿಂದೆ ಬೀಳುವಂತಾಗಿದೆ. ಆದರೆ ಇದೀಗ ಕಸ ವಿಲೇವಾರಿ ಸಮಸ್ಯೆ ಬಗೆಹರಿದಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಮತ್ತೆ ಸ್ವಚ್ಛನಗರಿ ಪಟ್ಟ ಪಡೆಯುವ ಆಶಾಕಿರಣ ಮೂಡಿದೆ.
ವಿದ್ಯಾರಣ್ಯಪುರಂ ಕಸ ಸಮಸ್ಯೆಯನ್ನು ಬಗೆಹರಿಸುವ ಕಾರ್ಯಕ್ಕೆ ಚಾಲನೆ ದೊರೆತಿದ್ದು, ಶೀಘ್ರವೇ ಜನರು ನೆಮ್ಮದಿಯಿಂದ ವಾಸಿಸುವಂತಹ ವಾತಾವರಣ ನಿರ್ಮಾಣವಾಗಲಿದೆ. ಮಾಜಿ ಸಂಸದ ಪ್ರತಾಪಸಿಂಹ, ಹಿಂದಿನ ಶಾಸಕ ಎಸ್.ಎ.ರಾಮದಾಸ್ ಅವರ ಸಹಕಾರದಿಂದ ಕಸ ಸಮಸ್ಯೆ ನಿವಾರಣೆಗೆ ಮುಂದಾಗಿದ್ದು, ಸಾರ್ವಜನಿಕರು ಬೆಂಬಲ ನೀಡಬೇಕಿದೆ.
ಟಿ.ಎಸ್.ಶ್ರೀವತ್ಸ
ಶಾಸಕ, ಕೆ.ಆರ್.ಕ್ಷೇತ್ರ
ಹಲವಾರು ವರ್ಷಗಳಿಂದ ಸಮಸ್ಯೆಯಾಗಿದ್ದ ವಿದ್ಯಾರಣ್ಯಪುರಂನ ಕಸದ ಸಮಸ್ಯೆಯನ್ನು ಬಗೆಹರಿಸುವ ಕಾರ್ಯ ಆರಂಭಗೊಂಡಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಕಸವನ್ನು ವಿಂಗಡಿಸಿ ಹಾಗೂ ದೊರೆಯುವ ಘನ ವಸ್ತುಗಳನ್ನು ಮರು ಬಳಕೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.
ಅಶಾದ್ ಉರ್ ರೆಹಮಾನ್ ಷರೀಫ್
ಆಯುಕ್ತರು, ನಗರಪಾಲಿಕೆ