

ಮೈಸೂರು: ನಗರದ ರಾಮಾನುಜರಸ್ತೆಯ 9ನೇ ಕ್ರಾಸ್‌ಗೆ ಹೊಂದಿಕೊಂಡಂತಿರುವ ಎಲೆತೋಟದ ಬಳಿ ಬೃಹತ್ ಗಾತ್ರದ ಮೊಸಳೆ ಶನಿವಾರ ಮತ್ತೆ ಪ್ರತ್ಯಕ್ಷವಾಗಿದ್ದು, ಸ್ಥಳೀಯ ನಿವಾಸಿಗಳ ನಿದ್ದೆ ಕೆಡಿಸಿದೆ.
ಕಳೆದ ಕೆಲವು ದಿನಗಳಿಂದ ಮೇಲಿಂದ ಮೇಲೆ ಕಾಣಿಸಿಕೊಳ್ಳುತ್ತಿರುವ ಮೊಸಳೆ ಅರಣ್ಯ ಇಲಾಖೆಯ ಸಿಬ್ಬಂದಿ ಬಲೆಗೆ ಬೀಳುತ್ತಿಲ್ಲ. ಇದು ಸ್ಥಳೀಯರಲ್ಲಿ ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ.
ಎಲೆ ತೋಟದ ಬಳಿಯಿರುವ ದೊಡ್ಡ ಮೋರಿಯಲ್ಲಿ ಅ.15ರಂದು ಕಾಣಿಸಿಕೊಂಡಿದ್ದ ಮೊಸಳೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಸೆರೆ ಹಿಡಿಯಲು ಯತ್ನಿಸಿದ್ದರು. ಆದರೆ, ಸೆರೆ ಕಾರ್ಯಾಚರಣೆಗಾಗಿ ಬಳಸಿದ ಹಗ್ಗದಿಂದ ನುಸುಳಿಕೊಂಡು ಚರಂಡಿ ನೀರಿನಲ್ಲಿ ಪರಾರಿಯಾಗಿತ್ತು.
2 ದಿನ ಕಾರ್ಯಾಚರಣೆ ನಡೆಸಿ ಸುಮ್ಮನಾಗಿದ್ದ ಅರಣ್ಯ ಸಿಬ್ಬಂದಿಗೆ ಮತ್ತೆ ಕಾಣಿಸಿಕೊಂಡಿರಲಿಲ್ಲ. ಆದರೆ ಅ.27ರಂದು ಮತ್ತೆ ರಾಮಾನುಜ ರಸ್ತೆಯ 9ನೇ ಕ್ರಾಸ್ ಸಮೀಪದ ಎಲೆತೋಟದ ರಸ್ತೆ ಏರಿ ಮೇಲೆ ಮೊಳಸೆ ಪತ್ತೆಯಾಗಿತ್ತು. ಬಳಿಕ ಜನರನ್ನು ಕಂಡು ಮತ್ತೆ ಮೋರಿ ನೀರಿನಲ್ಲಿ ಕಣ್ಮರೆಯಾಗಿತ್ತು.
ಎಲೆತೋಟದ ರಸ್ತೆ ಸೇತುವೆ ಸಮೀಪ ಬೆಳಗ್ಗೆ ಒಂದು ಗಂಟೆಗೂ ಹೆಚ್ಚುಕಾಲ ಬಾಯ್ತೆರೆದು ಬಿಸಿಲು ಕಾಯುತ್ತ ಮಲಗಿತ್ತು. ಸ್ಥಳೀಯರು ಕುತೂಹಲದಿಂದ ಮೊಸಳೆ ನೋಡಲು ಮುಗಿಬಿದ್ದರು. ವಿಷಯ ತಿಳಿದು ಅರಣ್ಯ ಇಲಾಖೆ ಸಿಬ್ಬಂದಿ ಆಗಮನಕ್ಕೂ ಮುನ್ನವೇ ಮೊಸಳೆ ರಸ್ತೆ ಏರಿಯಿಂದ ದೊಡ್ಡ ಮೋರಿಗೆ ಹಾರಿ ಕ್ಷಣ ಮಾತ್ರದಲ್ಲಿ ನಾಪತ್ತೆ ಆಗಿದೆ.