

ಮೈಸೂರು: ಹೆಚ್ಚುತ್ತಿರುವ ವಾಯುಮಾಲಿನ್ಯ ತಗ್ಗಿಸಲು ಜಪಾನ್‌ನ ‘ಮಿಯಾವಾಕಿ ಅರಣ್ಯ’ದ ಮಾದರಿಯಲ್ಲಿ ವಿಶ್ವದ ಎಲ್ಲೆಡೆ ಗಿಡ ಮರಗಳನ್ನು ಬೆಳೆಸಲಾಗುತ್ತಿದ್ದು, ಇದೀಗ ಸಾಂಸ್ಕೃತಿಕ ನಗರಿ ಮೈಸೂರಿನ ಉದ್ಯಾನಗಳಲ್ಲೂ ‘ಮಿಯಾವಾಕಿ ಅರಣ್ಯ’ ನಿರ್ಮಾಣ ಮಾಡುವ ಕಾರ್ಯಕ್ಕೆ ಚಾಲನೆ ದೊರೆತ್ತಿದೆ.
ವಿಜಯನಗರ 3ನೇ ಹಂತದ ಹಿನಕಲ್ ರಸ್ತೆಯ ಉದ್ಯಾನದಲ್ಲಿ ಶನಿವಾರ ‘ಮಿಯಾವಾಕಿ ಅರಣ್ಯ’ ನಿರ್ಮಿಸುವ ಯೋಜನೆಯನ್ನು ಶಾಸಕ ಜಿ.ಟಿ. ದೇವೇಗೌಡ ಗಿಡ ನೆಡುವ ಮೂಲಕ ಉದ್ಘಾಟಿಸಿದರು. ಈ ಉದ್ಯಾನ ಒಟ್ಟು 1.2 ಎಕರೆ ವಿಸ್ತೀರ್ಣ ಹೊಂದಿದ್ದು, ಬರೋಬ್ಬರಿ 12 ಸಾವಿರ ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ. ‘ಮಿಯಾವಾಕಿ ಅರಣ್ಯ’ ನಿರ್ಮಿಸುವ ಯೋಜನೆಯನ್ನು ನಗರ ಪಾಲಿಕೆಯು ಬಿಡದಿಯ ಟೊಯೋಟ ಕಿರ್ಲೋಸ್ಕರ್ ಆಟೋ ಪಾರ್ಟ್ಸ್ ಕಂಪನಿಯ ಜತೆಗೂಡಿ ಕೈಗೆತ್ತಿಕೊಂಡಿದೆ.
ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ವಾಯು ಮಾಲಿನ್ಯದಿಂದಾಗಿ ಹಾಗೂ ಮರಗಳ ಹನನದಿಂದ ಪರಿಸರದಲ್ಲಿ ಇಂಗಾಲದ ಡೈ ಆಕ್ಸೈಡ್ ಹೆಚ್ಚಾಗುತ್ತಿದ್ದು, ಇದನ್ನು ಕಡಿಮೆ ಮಾಡಲು ಮರಗಳನ್ನು ಬೆಳೆಸಿ ಹಸಿರೀಕರಣ ಮಾಡುವುದೊಂದೇ ಪರಿಹಾರವಾಗಿದೆ. ಇದಕ್ಕೆ ಪೂರಕವಾಗಿ ನಗರ ಪಾಲಿಕೆಯು ‘ಮಿಯಾವಾಕಿ ಅರಣ್ಯ’ವನ್ನು ಆಯ್ದ ಉದ್ಯಾನಗಳಲ್ಲಿ ನಿರ್ಮಾಣ ಮಾಡಲು ಮುಂದಾಗಿದೆ.
ಮಕ್ಕಳಂತೆ ಮರ ಗಿಡ ಬೆಳೆಸಿ: ‘ಮಿಯಾವಾಕಿ ಅರಣ್ಯ’ ಯೋಜನೆಗೆ ಚಾಲನೆ ನೀಡಿದ ಶಾಸಕ ಜಿ.ಟಿ. ದೇವೇಗೌಡ ಮಾತನಾಡಿ, ನಗರೀಕರಣ ಹಾಗೂ ಅರಣ್ಯ ನಾಶದಿಂದ ಜಾಗತಿಕ ತಾಪಮಾನ ಏರಿಕೆಯಾಗುತ್ತಿದ್ದು, ಇದರಿಂದ ಹಲವಾರು ಸಮಸ್ಯೆಗಳು ಎದುರಾಗುತ್ತಿದೆ. ಹೀಗಾಗಿ ಪ್ರತಿಯೊಬ್ಬರು ಗಿಡಗಳನ್ನು ನೆಟ್ಟು ಗಿಡಗಳನ್ನು ತಮ್ಮ ಮಕ್ಕಳಂತೆ ಬೆಳೆಸಬೇಕು ಎಂದು ಕರೆ ನೀಡಿದರು.
ಮಹಾರಾಜರ ಕಾಲದಿಂದಲೇ ಮೈಸೂರು ನಗರ ಹಸಿರಿನಿಂದ ಕೂಡಿದೆ. ಇದನ್ನು ನಾವು ಮುಂದುವರೆಸಿಕೊಂಡು ಹೋಗಬೇಕು. ನಗರವನ್ನು ಹಸಿರೀಕರಣ ಮಾಡುವ ಜವಾಬ್ದಾರಿಯನ್ನು ಟೊಯೋಟ ಕಿರ್ಲೋಸ್ಕರ್ ಕಂಪನಿ ವಹಿಸಿಕೊಂಡಿರುವುದು ಸಂತಸ. ಇದೇ ರೀತಿ ಉಳಿದ ಕಂಪನಿಗಳು ಸಹ ಹಸಿರೀಕರಣ ಯೋಜನೆಗೆ ಕೈಜೋಡಿಸಬೇಕು. ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದ ಸಂದರ್ಭದಲ್ಲಿ ನಗರದಲ್ಲಿ ಒಂದೇ ದಿನ ಒಂದು ಲಕ್ಷ ಸಸಿ ನೆಡುವ ವಿನೂತನ ಕಾರ್ಯಕ್ರಮ ನಡೆಸಿದ್ದೆ. ಅಂತಹ ಕಾರ್ಯಕ್ರಮಗಳು ಆಗಬೇಕಾಗಿದೆ ಎಂದು ಹೇಳಿದರು.
ನಗರಪಾಲಿಕೆ ಆಯುಕ್ತ ಆಸಾದ್ ಉರ್ ರೆಹಮಾನ್ ಷರೀಫ್ ಮಾತನಾಡಿ, ನಗರದಲ್ಲಿ 569 ಉದ್ಯಾನಗಳಿದ್ದು, ಈ ಪೈಕಿ 300 ಉದ್ಯಾನಗಳು ನಿರ್ವಹಣೆ ಇಲ್ಲ. ನಿರ್ವಹಣೆ ಇಲ್ಲದ ಉದ್ಯಾನಗಳಲ್ಲಿ ಮಿಯಾವಾಕಿ ಅರಣ್ಯ ಬೆಳೆಸಲು ಉದ್ದೇಶಿಸಲಾಗಿದ್ದು, ಇದಕ್ಕೆ ಖಾಸಗಿ ಸಂಸ್ಥೆಗಳು ನಗರ ಪಾಲಿಕೆಯೊಂದಿಗೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ಬಿಡದಿಯ ಟೊಯೋಟ ಕಿರ್ಲೋಸ್ಕರ್ ಆಟೋ ಪಾರ್ಟ್ಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್.ಪ್ರಸಾದ್ ಮಾತನಾಡಿ, ನಗರೀಕರಣದಿಂದ ವಾತಾವರಣದಲ್ಲಿ ಹೆಚ್ಚುತ್ತಿರುವ ತಾಪಮಾನ ತಡೆಯಲು ಗಿಡ ಮರಗಳನ್ನು ಬೆಳೆಸುವ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ನಗರ ಪಾಲಿಕೆ ಹಮ್ಮಿಕೊಂಡಿರುವ ಯೋಜನೆಗೆ ನಮ್ಮ ಕಂಪನಿ ಕೈಜೋಡಿಸಿದೆ ಎಂದು ಹೇಳಿದರು.
ನಿರ್ಮಾಣವಾಗಲಿದೆ ವೈವಿಧ್ಯಮಯ ಅರಣ್ಯ
ವಿಜಯನಗರ 3ನೇ ಹಂತದ ಹಿನಕಲ್ ರಸ್ತೆಯಲ್ಲಿರುವ ಉದ್ಯಾನದಲ್ಲಿ ಹಲವು ವೈವಿಧ್ಯಮಯ ಗಿಡ ಮರಗಳನ್ನು ಬೆಳೆಸುವ ಉದ್ದೇಶ ಹೊಂದಲಾಗಿದ್ದು, ಮುಂದಿನ ದಿನಗಳಲ್ಲಿ ಈ ಉದ್ಯಾನ ವೈವಿಧ್ಯಮಯ ಕಿರು ಅರಣ್ಯವಾಗಿ ರೂಪುಗೊಳ್ಳಲಿದೆ. ಬಾಗೆ, ಬನ್ನಿ, ಹಲಸು, ಬೇವು, ಅಶೋಕ, ಬಸವನಪಾದ, ಬಸರಿ, ಕಕ್ಕೆ ಬಯಾ, ಬೀಟೆ, ನಲ್ಲಿ, ಬೇಲಾ, ಆಲ, ಅರಳಿ, ಹತ್ತಿ, ಗೋನಿ, ಸೀತಾಫಲ, ಶಿವಾನಿ, ತಪಸಿ, ಆಕಾಶ ಮಲ್ಲಿಗೆ, ಹುಚ್ಚಬೇವು, ಇಪ್ಟೆ, ಕುಂಕುಮ, ಮಾವು, ಹೊಂಗೆ, ಹೊನ್ನೆ, ಶ್ರೀಗಂಧ, ಸೀಬೆ, ನೇರಳೆ, ಮಹಾಘನಿ, ತೋರೆಮತಿ, ತಾರೆ, ತೇಗ, ಹಾಲೆ, ಮಧುಕಾ, ಗೋಡಂಬಿ, ಸಮರೂಬಾ, ಹುಲಚಿ, ಬುಗರಿ, ಬರ‌್ಗಾ ಸಸಿಗಳನ್ನು ಈ ಉದ್ಯಾನದಲ್ಲಿ ನೆಡಲಾಗುತ್ತಿದೆ.
ಏನಿದು ಮಿಯಾವಾಕಿ ಅರಣ್ಯ?
ಜಪಾನ್‌ನಲ್ಲಿ ಮಿಯಾವಾಕಿ ಅರಣ್ಯ ಜನಪ್ರಿಯವಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಜಗತ್ತಿನ ಹಲವಾರು ರಾಷ್ಟ್ರಗಳಲ್ಲಿ ಜಾಗತಿಕ ತಾಪಮಾನ ಕಡಿಮೆ ಮಾಡಲು ಮಿಯಾವಾಕಿ ಅರಣ್ಯವನ್ನು ಉದ್ಯಾನ, ತೋಟ ಸೇರಿದಂತೆ ವಿವಿಧೆಡೆ ನಿರ್ಮಿಸುತ್ತಿದ್ದಾರೆ. ಜಪಾನ್‌ನ ಸಸ್ಯತಜ್ಞ ಡಾ. ಅಕಿರಾ ಮಿಯಾವಾಕಿ ಜಪಾನ್‌ನ ಉದ್ಯಾನಗಳಲ್ಲಿ ಸ್ಥಳೀಯ ಗಿಡಗಳನ್ನು ನೆಟ್ಟು ದಟ್ಟ ಕಾಡುಗಳಾಗಿ ಬೆಳೆಸಿದರು. ನಮ್ಮಲ್ಲಿ ಸಾಮಾನ್ಯವಾಗಿ 10 ಅಡಿ ಅಂತರದಲ್ಲಿ ಗಿಡಗಳನ್ನು ನೆಡಲಾಗುತ್ತದೆ. ಆದರೆ, ಮಿಯಾವಾಕಿ ಪದ್ಧತಿಯಡಿ ಒಂದು ಚದರ ಮೀಟರ್‌ನಲ್ಲಿ 3 ರಿಂದ 4 ಗಿಡಗಳನ್ನು ನೆಟ್ಟು ದಟ್ಟವಾದ ಕಿರು ಅರಣ್ಯ ನಿರ್ಮಾಣ ಮಾಡಬಹುದು. ಒಂದು ಎಕರೆ ಜಾಗದಲ್ಲಿ 20 ಸಾವಿರವರೆಗೆ ಗಿಡಗಳನ್ನು ಬೆಳೆಸುವ ಅವಕಾಶ ಇದೆ. ನಗರದಲ್ಲಿರುವ ಎಲ್ಲ ಉದ್ಯಾನಗಳನ್ನು ನಿರ್ವಹಣೆ ಮಾಡುವಷ್ಟು ಆರ್ಥಿಕ ಸಂಪನ್ಮೂಲ ನಗರ ಪಾಲಿಕೆಯ ಬಳಿಯಲ್ಲಿ ಇಲ್ಲ. ಹಾಗಾಗಿ ನಿರ್ವಹಣೆ ಮಾಡಲು ಸಾಧ್ಯವಾಗದೆ ಇರುವ ಉದ್ಯಾನಗಳಲ್ಲಿ ಮಿಯಾವಾಕಿ ಅರಣ್ಯ ನಿರ್ಮಿಸಲು ಉದ್ದೇಶಿಸ ಲಾಗಿದೆ. ಇಂತಹ ಉದ್ಯಾನಗಳಲ್ಲಿ ವಾಕಿಂಗ್ ಪಾಥ್ ನಿರ್ಮಾಣ ಜನರಿಗೆ ವಾಯು ವಿಹಾರಕ್ಕೆ ಅವಕಾಶ ಮಾಡಿಕೊಡುವ ಉದ್ದೇಶ ಹೊಂದಲಾಗಿದೆ.