

ಪ್ರವಾಸಿಗರ ನೆಚ್ಚಿನ ತಾಣವಾದ ಮೈಸೂರು ನಗರದಲ್ಲಿ ಮಲ್ಟಿಲೆವಲ್ ಪಾರ್ಕಿಂಗ್ ಕಟ್ಟಡ ನಿರ್ಮಿಸುವ ಮೂಲಕ ವಾಹನಗಳ ನಿಲುಗಡೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ.
ಪುರಭವನದ ಆವರಣದಲ್ಲಿ ಮಲ್ಟಿಲೆವಲ್ ಪಾರ್ಕಿಂಗ್ ಕಟ್ಟಡವಿದ್ದರೂ ಇಲ್ಲದಂತಿದೆ. ಅದು ಪೂರ್ಣಪ್ರಮಾಣದಲ್ಲಿ ಬಳಕೆಯಾಗುತ್ತಿಲ್ಲ. ಇದರ ಹೊರತಾಗಿಯೂ ನಗರದ 4-5 ಕಡೆಗೆ ಮಲ್ಟಿಲೆವಲ್ ಪಾರ್ಕಿಂಗ್ ಕಟ್ಟಡವನ್ನು ತುರ್ತಾಗಿ ನಿರ್ಮಾಣ ಮಾಡಬೇಕಿದೆ. ಈ ನಿಟ್ಟಿನಲ್ಲಿ ನಗರಪಾಲಿಕೆ, ರಾಜ್ಯ ಸರ್ಕಾರ ಗಂಭೀರವಾಗಿ ಯೋಚಿಸಬೇಕಿದೆ.
ರಾಜ್ಯದಲ್ಲೇ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ತಾಣ ಎಂಬ ಹಿರಿಮೆಗೆ ಮೈಸೂರು ಪಾತ್ರವಾಗಿದೆ. ಇಲ್ಲಿ ವಾರ್ಷಿಕ ಅಂದಾಜು 40 ಲಕ್ಷ ಪ್ರವಾಸಿಗರು ದೇಶ-ವಿದೇಶಗಳಿಂದ ಬಂದು ಹೋಗುತ್ತಾರೆ.
ದಸರಾ ಮಹೋತ್ಸವ, ಕ್ರಿಸ್‌ಮಸ್, ಬೇಸಿಗೆ ಸಮಯ, ಸರ್ಕಾರಿ ರಜೆಗಳು, ವಾರಾಂತ್ಯದಲ್ಲಿ ಪ್ರವಾಸಿಗರ ದಟ್ಟಣೆ ಹೆಚ್ಚು. ಇಂತಹ ಸಂದರ್ಭದಲ್ಲಿ ಪಾರ್ಕಿಂಗ್ ಸಮಸ್ಯೆಯಿಂದ ವಾಹನಗಳ ಸವಾರರು ಹೈರಾಣರಾಗುತ್ತಾರೆ.
ರಾಜ್ಯದಲ್ಲಿ ವೇಗವಾಗಿ ಬೆಳೆಯುತ್ತಿರುವ 2ನೇ ನಗರವಾಗಿರುವ ಮೈಸೂರಿನಲ್ಲಿ ವಾಹನಗಳ ಸಂಖ್ಯೆ ಸಹ ಏರಿಕೆಯಾಗುತ್ತಿದೆ. ಅಂದಾಜು 8 ಲಕ್ಷ ವಾಹನಗಳು ನೋಂದಣಿಯಾಗಿವೆ. ಇದಲ್ಲದೆ ಹೊರ ಜಿಲ್ಲೆಗಳ ನೋಂದಣಿ ವಾಹನ ಸಂಚಾರ ಸಹ ಅಧಿಕವಾಗಿದೆ. ಸ್ಥಳೀಯ ವಾಹನ ಮತ್ತು ಪ್ರವಾಸಿ ವಾಹನಗಳ ನಿಲುಗಡೆಗೆ ಸ್ಥಳಾವಕಾಶ ಕಲ್ಪಿಸಿಕೊಡುವುದು ಕಷ್ಟಕರವಾಗುತ್ತಿದೆ.
ನಗರದ ಉಳಿದ ಭಾಗಕ್ಕಿಂತ ಅರಮನೆ ಸುತ್ತಲಿನ ಪ್ರದೇಶದಲ್ಲೇ ಈ ಸಮಸ್ಯೆ ಹೆಚ್ಚು. ಮೈಸೂರು ಅರಮನೆಗೆ ಬರುವ ವಾಹನಗಳಿಗೆ ವರಹಾ ದ್ವಾರದ ಬಳಿ ಸ್ಥಳದಲ್ಲಿ ಸ್ಥಳಾವಕಾಶ ಒದಗಿಸಲಾಗಿದೆ. ಆದರೆ, ಇದು ಸಾಕಾಗುತ್ತಿಲ್ಲ. ಇದರಿಂದ ವಾಹನಗಳು ಕಾಡಾ ಕಚೇರಿ, ಜೆಎಸ್‌ಎಸ್ ವಿದ್ಯಾಪೀಠ ಸೇರಿದಂತೆ ಇನ್ನಿತರ ಕಡೆ ನಿಲುಗಡೆ ಮಾಡುತ್ತಾರೆ. ಇದು ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ.
ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲೂ ಇದೇ ಕಥೆ. ಅಲ್ಲಿ ಪಾರ್ಕಿಂಗ್‌ಗೆ ಚಿಕ್ಕ ಜಾಗ ಇದೆ. ಹೀಗಾಗಿ, ಸವಾರರು ಮೃಗಾಲಯದ ಎದುರಿನ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲುಗಡೆ ಮಾಡುತ್ತಾರೆ. ಚಿಕ್ಕ ರಸ್ತೆಯಲ್ಲಿರುವ ಮನೆಗಳ ಎದುರೇ ವಾಹನ ನಿಲ್ಲಿಸಿವುದರಿಂದ ನಿವಾಸಿಗಳಿಗೆ ತೊಂದರೆಯಾಗುತ್ತಿದೆ. ರಾಜವಂಶಸ್ಥರ ಅಧೀನದಲ್ಲಿರುವ ಜಗನ್ಮೋಹನ ಅರಮನೆಯಲ್ಲೂ ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸಲಾಗುತ್ತಿದೆ.
ನಗರದ ಪ್ರಮುಖ ರಸ್ತೆಗಳಲ್ಲೂ ಈ ಸಮಸ್ಯೆ ಹೇಳ ತೀರದಾಗಿದೆ. ವಾಣಿಜ್ಯ ಚಟುವಟಿಕೆಗಳ ಕೇಂದ್ರವಾಗಿರುವ ಡಿ.ದೇವರಾಜ ಅರಸು ರಸ್ತೆ, ಸಯ್ಯಜಿರಾವ್ ರಸ್ತೆ, ಜೆಎಲ್‌ಬಿ ರಸ್ತೆ, ಬಿ.ಎನ್.ರಸ್ತೆ, ಗಾಂಧಿವೃತ್ತ ಸುತ್ತಲಿನ ರಸ್ತೆಗಳು, ಅಶೋಕ ರಸ್ತೆ, ಹರ್ಷ ರಸ್ತೆ, ಚಾಮರಾಜ ಜೋಡಿ ರಸ್ತೆ ಸೇರಿದಂತೆ ಇನ್ನಿತರ ನಗರದ ಹೃದಯ ಭಾಗದಲ್ಲಿರುವ ಪ್ರಮುಖ ರಸ್ತೆಗಳಲ್ಲಿ ವಾಹನ ನಿಲ್ಲಿಸಲು ಜಾಗವೇ ಸಿಗುವುದಿಲ್ಲ. ಇದರಿಂದಾಗಿ ಸವಾರರು ನಿತ್ಯ ಪರದಾಡುತ್ತಾರೆ.
ಈ ಸಮಸ್ಯೆ ಪರಿಹಾರಕ್ಕೆ ಮಲ್ಟಿಲೆವಲ್ ಪಾರ್ಕಿಂಗ್ ಕಟ್ಟಡ ನಿರ್ಮಾಣವೇ ಉಪಾಯ. ಮೃಗಾಲಯ ಎದುರಿನ ಜಾಗ, ದೊಡ್ಡ ಕೆರೆ ಮೈದಾನ, ದಸರಾ ವಸ್ತುಪ್ರದರ್ಶನ ಮೈದಾನ ಸೇರಿದಂತೆ ಕನಿಷ್ಠ 4-5 ಕಡೆಗೆ ಮಲ್ಟಿಲೆವಲ್ ಪಾರ್ಕಿಂಗ್ ಕಟ್ಟಡ ಕಟ್ಟಬೇಕಿದೆ. ಪ್ರವಾಸಿಗರು ಇಂತಹ ಕಡೆ ವಾಹನಗಳನ್ನು ನಿಲುಗಡೆ ಮಾಡಿ ನೆಮ್ಮದಿಯಿಂದ ಮೈಸೂರಿನ ಪ್ರವಾಸವನ್ನು ಆಸ್ವಾದಿಸಲು ಅನುಕೂಲವಾಗುತ್ತದೆ. ಇದರಿಂದ ಪ್ರವಾಸೋದ್ಯಮವೂ ಅಭಿವೃದ್ಧಿಯಾಗಲಿದೆ.
ದಸರಾ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ‘ಬೃಹತ್ ಪಾರ್ಕಿಂಗ್ ಪ್ಲಾಜಾ’ ಯೋಜನೆ ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿದೆ. 2016ರ ಏಪ್ರಿಲ್ 15ರಂದು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವಿ.ಶ್ರೀನಿವಾಸ ಪ್ರಸಾದ್ ಇದಕ್ಕೆ ಚಾಲನೆ ನೀಡಿದ್ದರು. 10 ಎಕರೆ ಜಾಗದಲ್ಲಿ 1.97 ಕೋಟಿ ರೂ. ವೆಚ್ಚದಲ್ಲಿ ನಿರ್ಮಿತಿ ಕೇಂದ್ರದಿಂದ ಇದು ನಿರ್ಮಾಣವಾಗಬೇಕಿತ್ತು. 800 ಬೈಕ್‌ಗಳು, 500 ಕಾರ್‌ಗಳು, 30 ಬಸ್‌ಗಳಿಗೆ ಏಕಕಾಲಕ್ಕೆ ನಿಲ್ಲಿಸುವ ಸ್ಥಳಾವಕಾಶ ದೊರೆಯುತ್ತಿತ್ತು. ಆದರೆ, ಇದು ಕಾರ್ಯರೂಪಕ್ಕೆ ಬರಲೇ ಇಲ್ಲ.
ಪುರಭವನ ಆವರಣದಲ್ಲಿ ನಿರ್ಮಾಣಗೊಂಡಿರುವ ಪಾರ್ಕಿಂಗ್ ಕಟ್ಟಡ ಸಹ ಪೂರ್ಣಪ್ರಮಾಣದಲ್ಲಿ ಬಳಕೆಯಾಗುತ್ತಿಲ್ಲ. 18.28 ಕೋಟಿ ರೂ. ವೆಚ್ಚದಲ್ಲಿ 2011ರಲ್ಲಿ ಆರಂಭಿಸಿದ ಈ ಕಾಮಗಾರಿ 12 ವರ್ಷವಾದ ಬಳಿಕ ಪೂರ್ಣಗೊಂಡರೂ ಪ್ರಯೋಜನಕ್ಕೆ ಬರುತ್ತಿಲ್ಲ. ಇಲ್ಲಿ ಸುಮಾರು 400 ವಾಹನಗಳನ್ನು ನಿಲುಗಡೆ ಮಾಡಬಹುದು. ಆದರೆ, ಮೂಲ ಸೌಲಭ್ಯಗಳಿಲ್ಲ. ಹೀಗಾಗಿ, ವಾಹನ ಸವಾರರು ಇಲ್ಲಿ ವಾಹನ ನಿಲುಗಡೆಗೆ ಹಿಂದೇಟು ಹಾಕುತ್ತಾರೆ. ಉತ್ತಮ ವ್ಯವಸ್ಥೆ ಕಲ್ಪಿಸಿಕೊಟ್ಟರೆ 2 ಸಾವಿರ ವಾಹನಗಳು ನಿಲ್ಲಿಸಬಹುದು. ಆದರೆ, ಈ ಕೆಲಸವನ್ನು ಪಾಲಿಕೆ ಮಾಡುತ್ತಿಲ್ಲ.
ಚಾಮುಂಡಿಬೆಟ್ಟದಲ್ಲಿ ಈ ಸಮಸ್ಯೆ ನಿವಾರಣೆಯಾಗಿದೆ. ಬೆಟ್ಟಕ್ಕೆ ಬರುವ ಪ್ರವಾಸಿಗರು, ಭಕ್ತರ ವಾಹನ ನಿಲುಗಡೆಗೆ ಸೂಕ್ತ ಸ್ಥಳವಿಲ್ಲದೆ ಪರದಾಡುವಂತಹ ಸ್ಥಿತಿ ಇತ್ತು. ಇದನ್ನು ಮನಗಂಡು ದೇವಾಲಯದ ಆಡಳಿತ ಮಂಡಳಿಯಿಂದ ಮಲ್ಟಿಲೆವಲ್ ಪಾರ್ಕಿಂಗ್ ಕಟ್ಟಡವನ್ನು 79.9 ಕೋಟಿ ರೂ. ವೆಚ್ಚದಲ್ಲಿ 2019ರಲ್ಲಿ ನಿರ್ಮಿಸಲಾಗಿದೆ. 8 ಎಕರೆ ಜಾಗದಲ್ಲಿ 31 ಸಾವಿರ ಚದರ ಮೀಟರ್ ವಿಸ್ತೀರ್ಣದಲ್ಲಿ 3 ಅಂತಸ್ತಿನ ಮಲ್ಟಿಲೆವೆಲ್ ಪಾರ್ಕಿಂಗ್ ಕಟ್ಟಡದಲ್ಲಿ ಸುಮಾರು 1200 ಕಾರ್, 80 ಬಸ್, 500 ಬೈಕ್ ನಿಲುಗಡೆಗೆ ಅವಕಾಶವಿದೆ. ಈ ವ್ಯವಸ್ಥೆಯಿಂದ ಇಲ್ಲಿ ಪಾರ್ಕಿಂಗ್ ಸಮಸ್ಯೆ ಇಲ್ಲದಂತಾಗಿದೆ. ಇದೇ ಮಾದರಿಯಲ್ಲಿ ನಗರ ಮಧ್ಯಭಾಗದಲ್ಲೂ ಮಲ್ಟಿಲೆವಲ್ ಪಾರ್ಕಿಂಗ್ ಕಟ್ಟಡ ನಿರ್ಮಿಸಬೇಕಿದೆ.
ನಗರದ ಕೆಲ ರಸ್ತೆಗಳಲ್ಲಿ ‘ಶುಲ್ಕ ಪಾವತಿಸಿ ವಾಹನ ನಿಲುಗಡೆ’ (ಪೇ ಆ್ಯಂಡ್ ಪಾರ್ಕಿಂಗ್) ವ್ಯವಸ್ಥೆ ಬಹಳ ವರ್ಷಗಳಿಂದ ಹಳ್ಳ ಹಿಡಿದಿದೆ. ಡಿ.ದೇವರಾಜ ಅರಸು ರಸ್ತೆಯ ಸಂತೇಪೇಟೆ ಜಂಕ್ಷನ್‌ನಿಂದ ಜೆಎಲ್ಬಿ ರಸ್ತೆ ಜಂಕ್ಷನ್‌ವರೆಗೆ ಹಾಗೂ ದೊಡ್ಡ ಗಡಿಯಾರದಿಂದ ನೆಹರು ವೃತ್ತದವರೆಗೆ ಎರಡೂ ಬದಿಯಲ್ಲಿ ಇದು ಜಾರಿಗೆ ಬರಬೇಕಿತ್ತು. 2011ರಲ್ಲೇ ಈ ಕುರಿತು ಪಾಲಿಕೆ ನಿರ್ಣಯ ಕೈಗೊಂಡಿದ್ದರೂ ಇದನ್ನು ಇನ್ನೂ ಜಾರಿಗೆ ತರಲಾಗಿಲ್ಲ.