

ಮೈಸೂರು: ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರಯಾಣಿಕರ ರೈಲು ಮೊದಲ ಬಾರಿಗೆ ಸೋಮವಾರ ಸಾಂಸ್ಕೃತಿಕ ನಗರಿ ಮೈಸೂರು ಪ್ರವೇಶ ಮಾಡಿತು.
ಚೆನ್ನೈ-ಬೆಂಗಳೂರು-ಮೈಸೂರು ನಡುವೆ ಈ ರೈಲು ಸಂಚರಿಸಲಿದ್ದು, ದಕ್ಷಿಣ ಭಾರತದ ಮೊದಲ ವಂದೇ ಭಾರತ್ ರೈಲು ಎಂಬ ಹಿರಿಮೆ ಹೊಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನ.11ರಂದು ಈ ರೈಲಿಗೆ ಚಾಲನೆ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಾಯೋಗಿಕ ಸಂಚಾರ ನಡೆಯಿತು.
ಚೆನ್ನೈನಿಂದ ಬೆಳಗಿನ ಜಾವ 5.50ಕ್ಕೆ ಹೊರಟ ರೈಲು ಬೆಳಗ್ಗೆ 10.20ಕ್ಕೆ ಬೆಂಗಳೂರಿಗೆ ಆಗಮಿಸಿ ಬಳಿಕ 10.30ಕ್ಕೆ ಅಲ್ಲಿಂದ ಹೊರಟಿತು. ಮಧ್ಯಾಹ್ನ 12.13ಕ್ಕೆ ಮೈಸೂರಿಗೆ ಬಂತು. ಈ ಮೂಲಕ ಚೆನ್ನೈ-ಮೈಸೂರು ನಡುವಿನ 497 ಕಿ.ಮೀ. ಅಂತರವನ್ನು ಈ ರೈಲು 6 ಗಂಟೆ 23 ನಿಮಿಷದ ಅವಧಿಯಲ್ಲಿ ಕ್ರಮಿಸಿದೆ. ಹಾಗೆಯೆ, ಬೆಂಗಳೂರಿನಿಂದ ಮೈಸೂರಿಗೆ ಬರಲು 1 ಗಂಟೆ 43 ನಿಮಿಷ ತೆಗೆದುಕೊಂಡಿತು.
ನೋಡಲು ಕಾತರ:
ರೈಲನ್ನು ಮೊದಲ ಬಾರಿ ನೋಡುವ ಕುತೂಹಲದಿಂದ ರೈಲ್ವೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಪೊಲೀಸರು ನಿಲ್ದಾಣದ 1ನೇ ಪ್ಲಾಟ್‌ಫಾರ್ಮ್‌ನಲ್ಲಿ ಜಮಾಯಿಸಿದ್ದರು. ನೀಲಿ- ಶ್ವೇತ ಬಣ್ಣದ ರೈಲಿನ ಇಂಜಿನ್ ಕಾಣುತ್ತಿದ್ದಂತೆ ಸಂಭ್ರಮ ಮುಗಿಲು ಮುಟ್ಟಿತು. ಶಿಳ್ಳೆ- ಚಪ್ಪಾಳೆಯ ಮೂಲಕ ಬರಮಾಡಿಕೊಂಡರು. 1 ಗಂಟೆ 50 ನಿಮಿಷಗಳ ಕಾಲ ನಿಲ್ದಾಣದಲ್ಲಿ ಇದ್ದ ಹಿನ್ನೆಲೆಯಲ್ಲಿ ನೂರಾರು ಜನರು ತಮ್ಮ ಮೊಬೈಲ್ ಕ್ಯಾಮರಾಗಳ ಮೂಲಕ ರೈಲಿನ ಒಳಗೆ ಮತ್ತು ಹೊರಗೆ ನಿಂತು ಸೆಲ್ಫಿ, ಫೋಟೋ ತೆಗೆದುಕೊಂಡು ಸಂಭ್ರಮಿಸಿದರು.
ವಿವಿಧ ಹಂತದ ಪರಿಶೀಲನೆ:
ಈ ರೈಲು ಚೆನ್ನೈನ ಪೆರಂಬೂರಿನಲ್ಲಿರುವ ಐಸಿಎಫ್(ಇಂಟಿಗ್ರಲ್ ಕೋಚ್ ಫ್ಯಾಕ್ಟರಿ)ನಲ್ಲಿ ಸಿದ್ಧವಾಗಿದೆ. ರೈಲಿನ ತಾಂತ್ರಿಕ ದೋಷಗಳನ್ನು ಪತ್ತೆ ಮಾಡಿ ಅಗತ್ಯ ಮಾರ್ಪಾಡು ಮಾಡಲು ಪ್ರಾಯೋಗಿಕ ಸಂಚಾರ ನಡೆಸಿದ್ದು, ರೈಲಿನಲ್ಲಿ ಮೆಕಾನಿಕಲ್, ಸಿವಿಲ್ ಇಂಜಿನಿಯರ್‌ಗಳು ಸೇರಿದಂತೆ ಸಿಬ್ಬಂದಿ ಇದ್ದು, ವಿವಿಧ ಪರಿಶೀಲನೆ ನಡೆಸಿದ್ದಾರೆ ಎಂದು ನೈಋತ್ಯ ರೈಲ್ವೆ ಮೈಸೂರು ವಿಭಾಗೀಯ ವ್ಯವಸ್ಥಾಪಕ ರಾಹುಲ್ ಅಗರ್‌ವಾಲ್ ಮಾಹಿತಿ ನೀಡಿದರು.
ಮೈಸೂರಿನವರು ಲೋಕೊಪೈಲಟ್
ಇಲಾಖೆಯ ಸ್ವಚ್ಛತಾ ಕಾರ್ಯದ ಸಿಬ್ಬಂದಿ ಎಲ್ಲ್ಲ 14 ಕೋಚ್‌ಗಳನ್ನು ಸ್ವಚ್ಛಗೊಳಿಸಿದರು. ಬಳಿಕ ಶ್ವಾನದೊಂದಿಗೆ ಆಗಮಿಸಿದ ರೈಲ್ವೆ ಪೊಲೀಸರು ಇಡೀ ರೈಲನ್ನು ತಪಾಸಣೆ ನಡೆಸಿದರು. ಬಳಿಕ ಮಧ್ಯಾಹ್ನ 1.10ಕ್ಕೆ ಮೈಸೂರಿನಿಂದ ರೈಲುಗಾಡಿ ಚೆನ್ನೈ ಕಡೆಗೆ ಹೊರಟಿತು. ಆರ್.ಸುರೇಂದ್ರನ್ ಹಾಗೂ ಮೈಸೂರಿನವರೇ ಆದ ವಿ.ರವಿಚಂದ್ರನ್ ಲೋಕೊಪೈಲಟ್‌ಗಳಾಗಿ ಕಾರ್ಯನಿರ್ವಹಿಸಿದರೆ, ಅವರೊಂದಿಗೆ ಸಹಾಯಕ ಲೋಕೊಪೈಲಟ್‌ಗಳಾದ ಶಮಿನ್, ಅಭಿಜಿತ್, ಅಶ್ವಿನ್, ಬಸವರಾಜ್, ಅನುಗ್ರಹ, ಗಾಯತ್ರಿ ಕೃಷ್ಣನ್ ಇದ್ದರು.
ಚೆನ್ನೈ-ಮೈಸೂರು ಮಾರ್ಗದಲ್ಲಿ ಸಂಚರಿಸುವ ಈ ರೈಲು 5ನೇ ವಂದೇ ಭಾರತ್ ರೈಲು ಆಗಿದ್ದು, ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿದೆ. ನವದೆಹಲಿ- ವಾರಾಣಸಿ, ನವದೆಹಲಿ- ವೈಷ್ಣೋದೇವಿ, ಗಾಂಧಿನಗರ- ಮುಂಬೈ, ನವದೆಹಲಿ-ಉನಾ ನಡುವೆ ವಂದೇ ಭಾರತ್ ರೈಲುಗಳು ಈಗಾಗಲೇ ಸಂಚರಿಸುತ್ತಿವೆ.
ರೈಲಿನ ವಿಶೇಷತೆಗಳೇನು?
ದೇಶದ ಅತ್ಯಾಧುನಿಕ ರೈಲು ಇದಾಗಿದೆ. ವೇಗ ಹಾಗೂ ಸಾಮರ್ಥ್ಯಕ್ಕೆ ಹೆಸರಾಗಿದ್ದು, ಕಡಿಮೆ ಅವಧಿಯಲ್ಲಿ ದೂರ ಪ್ರಯಾಣ ಕ್ರಮಿಸುವುದು ಇದರ ವಿಶೇಷತೆಯಾಗಿದೆ. ಶತಾಬ್ದಿ ಎಕ್ಸ್‌ಪ್ರೆಸ್‌ಗಿಂತ ಶರವೇಗದಲ್ಲಿ ಓಡಲಿದೆ. ಆದರೆ, ದೇಶದ ಇತರೆಡೆ ಸಂಚರಿಸುತ್ತಿರುವಷ್ಟು ವೇಗದಲ್ಲಿ ಈ ರೈಲು ಮೈಸೂರು-ಚೆನ್ನೈ ಮಾರ್ಗದಲ್ಲಿ ಓಡುವುದಿಲ್ಲ ಎಂದು ರೈಲ್ವೆ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಗಂಟೆಗೆ ಗರಿಷ್ಠ 160 ಕಿ.ಮೀ. ವೇಗದ ಸಾಮರ್ಥ್ಯ, ಐಷಾರಾಮಿ ವ್ಯವಸ್ಥೆ ಇದ್ದು, ಸೀಟುಗಳನ್ನು ವಿಮಾನದ ರೀತಿ ನಿರ್ಮಿಸಲಾಗಿದೆ. ಹವಾನಿಯಂತ್ರಿತ, ಎಕಾನಮಿ ಮತ್ತು ಪ್ರೀಮಿಯಂ ಕ್ಲಾಸ್ ಇದೆ. ರೈಲಿನಲ್ಲಿ ಆನ್‌ಬೋರ್ಡ್ ಉಪಾಹಾರದ ವ್ಯವಸ್ಥೆ ಇದೆ. ವೈಫೈ, ಮಾಹಿತಿ ವ್ಯವಸ್ಥೆ, ಚಾರ್ಜಿಂಗ್ ಪಾಯಿಂಟ್, ರೀಡಿಂಗ್ ಲೈಟ್ ವ್ಯವಸ್ಥೆ, ಸ್ವಯಂ ಚಾಲಿತ ಬಾಗಿಲು, ಸಿಸಿ ಕ್ಯಾಮರಾ, ಬಯೋಶೌಚಗೃಹ ಸೌಲಭ್ಯ ಇದೆ. 16 ಬೋಗಿಗಳನ್ನು ಹೊಂದಿದ್ದು, 384 ಮೀ. ಉದ್ದವಿದೆ. ಪ್ರತ್ಯೇಕ ಇಂಜಿನ್ ಇಲ್ಲ. ರೈಲಿನ ವೇಗ ಅಧಿಕವಾಗಿರುವುದರಿಂದ ಪ್ರಯಾಣದ ಸಮಯ ಶೇ.25ರಿಂದ 45ರವರೆಗೆ ಉಳಿತಾಯವಾಗಲಿದೆ. 1,128 ಪ್ರಯಾಣಿಕರ ಸೀಟಿನ ಸಾಮರ್ಥ್ಯ ಇದೆ.
ಗರಿಷ್ಠ ವೇಗ 160 ಕಿ.ಮೀ.:
ಮೈಸೂರು-ಚೆನ್ನೈ ನಡುವಿನ 504 ಕಿ.ಮೀ. ದೂರವನ್ನು ಈ ರೈಲು 7 ಗಂಟೆಯಲ್ಲಿ ಕ್ರಮಿಸಲಿದೆ. ರೈಲಿನ ಗರಿಷ್ಠ ವೇಗ 160 ಕಿ.ಮೀ. ಇದೆಯಾದರೂ, ಮೈಸೂರು-ಚೆನ್ನೈಗೆ ಗಂಟೆಗೆ ಗರಿಷ್ಠ 75 ಕಿ.ಮೀ. ವೇಗದಲ್ಲಿ ಸಂಚರಿಸಲಿದೆ. ಇಡೀ ರೈಲನ್ನು ಏರೋಡೈನಾಮಿಕ್ಸ್ ಮಾದರಿಯಲ್ಲಿ ನಿರ್ಮಾಣ ಮಾಡಲಾಗಿದೆ. ಇದು ಗಾಳಿಯ ತಡೆಯನ್ನು ಭೇದಿಸಿ ರೈಲು ವೇಗವಾಗಿ ಚಲಿಸಲು ಸಹಾಯ ಮಾಡುತ್ತದೆ.
ರೈಲಿನ ಸಮಯ
ಈ ರೈಲು ನಿತ್ಯ ಬೆಳಗ್ಗೆ 5.50ಕ್ಕೆ ಚೆನ್ನೈನಿಂದ ಹೊರಟು ಬೆಂಗಳೂರಿಗೆ 10.25ಕ್ಕೆ ಬಂದು ತಲುಪಲಿದೆ. 10.30ಕ್ಕೆ ಬೆಂಗಳೂರಿನಿಂದ ಹೊರಟು 12.15ಕ್ಕೆ ಮೈಸೂರು ರೈಲು ನಿಲ್ದಾಣಕ್ಕೆ ಬರಲಿದೆ. ಮತ್ತೆ ಮಧ್ಯಾಹ್ನ 1.05ಕ್ಕೆ ಮೈಸೂರಿನಿಂದ ಹೊರಡಲಿದ್ದು, ಮಧ್ಯಾಹ್ನ 2.55ಕ್ಕೆ ಬೆಂಗಳೂರು ತಲುಪಲಿದೆ. ಅಲ್ಲಿ 5 ನಿಮಿಷದ ನಿಲುಗಡೆ ಇರುತ್ತದೆ. ಮಧ್ಯಾಹ್ನ 3ಕ್ಕೆ ಬೆಂಗಳೂರಿನಿಂದ ಹೊರಟು ಸಂಜೆ 7.35ಕ್ಕೆ ಚೆನ್ನೈ ಸೆಂಟ್ರಲ್ ರೈಲ್ವೆ ನಿಲ್ದಾಣ ತಲುಪಲಿದೆ.
ಟಿಕೆಟ್ ದರ:
ಮೈಸೂರು- ಚೆನ್ನೈ ನಡುವಿನ ಪ್ರಯಾಣ ದರ ಎಕಾನಮಿ ಕ್ಲಾಸ್ 921 ರೂ., ಎಕ್ಸಿಕ್ಯುಟಿವ್ ಕ್ಲಾಸ್ 1880 ರೂ. ಇದೆ. ಮೈಸೂರು-ಬೆಂಗಳೂರು ನಡುವಿನ ಪ್ರಯಾಣ ದರ ಎಕಾನಮಿ ಕ್ಲಾಸ್ 368 ರೂ., ಎಕ್ಸಿಕ್ಯುಟಿವ್ ಕ್ಲಾಸ್ 768 ರೂ. ಇದೆ.
ಚೆನ್ನೈನಿಂದ ಬೆಂಗಳೂರು ಮಾರ್ಗವಾಗಿ ಮೈಸೂರಿಗೆ ವಂದೇ ಭಾರತ್ ರೈಲು ಸೋಮವಾರ ಮಧ್ಯಾಹ್ನ 12.13ಕ್ಕೆ ಆಗಮಿಸಿದ್ದು, ಗಂಟೆಗೆ 180 ಕಿ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಮೈಸೂರು-ಬೆಂಗಳೂರು ಮಾರ್ಗದಲ್ಲಿ ಹಲವು ತಿರುವು ಮತ್ತು ಸೇತುವೆಗಳಿರುವ ಕಾರಣ 90 ರಿಂದ 110 ಕಿ.ಮೀ. ವೇಗದಲ್ಲಿ ಸಂಚರಿಸಿದೆ. ಶತಾಬ್ದಿ ಎಕ್ಸ್‌ಪ್ರೆಸ್‌ಗಿಂತ 20ರಿಂದ 30 ನಿಮಿಷ ಮುಂಚೆಯೇ ತಲುಪಲಿದೆ.ಇ.ವಿಜಯ ವಿಭಾಗೀಯ ಹೆಚ್ಚುವರಿ ರೈಲ್ವೆ ಮ್ಯಾನೇಜರ್