ಮೈಸೂರಲ್ಲಿ ಸ್ಟಾರ್ಟ್‌ಅಪ್‌ಗಳಿಗೆ ಸೀಡ್ ಫಂಡ್ ಸ್ಥಾಪನೆ

19
Published on

ಮೈಸೂರು: ಬಿಯಾಂಡ್ ಬೆಂಗಳೂರು ಉಪಕ್ರಮದ ಭಾಗವಾಗಿ ಮೈಸೂರು ಕ್ಲಸ್ಟರ್‌ನ ಸ್ಟಾರ್ಟ್‌ಅಪ್‌ಗಳಿಗೆ 25 ಕೋಟಿ ರೂ. ಮೊತ್ತದ ಕ್ಲಸ್ಟರ್ ಸೀಡ್ ಫಂಡ್ ಸ್ಥಾಪಿಸಲಾಗಿದೆ.
ನಗರದ ಖಾಸಗಿ ಹೋಟೆಲ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ದುಂಡು ಮೇಜಿನ ಸಭೆಯಲ್ಲಿ ರಾಜ್ಯ ಸರ್ಕಾರ, ಬ್ಯಾಂಕ್ ಹಾಗೂ ಮೈಸೂರು ಉದ್ಯಮಿಗಳ ಸಹಭಾಗಿತ್ವದಲ್ಲಿ ಸ್ಥಾಪಿಸಿರುವ ಸೀಡ್‌ಫಂಡ್‌ಗೆ ಒಂದು ಕೋಟಿ ರೂ. ಮೊತ್ತದ ಚೆಕ್ ಅನ್ನು ಹಸ್ತಾಂತರಿಸಲಾಯಿತು.
ಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಏಕರೂಪ್ ಕೌರ್ ಮಾತನಾಡಿ, ಕರ್ನಾಟಕದ ಉದ್ಯಮ ಸ್ನೇಹಿ ನೀತಿಗಳಿಂದಾಗಿ ನಮ್ಮ ಕ್ಲಸ್ಟರ್‌ಗಳಿಗೆ ಗ್ಲೋಬಲ್ ಕೇಪಬಲಿಟಿ ಸೆಂಟರ್ (ಜಿಸಿಸಿ)ಗಳನ್ನು ಆಕರ್ಷಿಸಲು ಸಾಧ್ಯವಾಗುತ್ತಿದೆ. ಈ ನಿಟ್ಟಿನಲ್ಲಿ ನ್ಯಾಸ್ಕಾಂ ಜಿಸಿಸಿ ಸದಸ್ಯರ ಪ್ರಯತ್ನಗಳು ಶ್ಲಾಘನೀಯ. ನಮ್ಮ ರಾಜ್ಯದ ಉದಯೋನ್ಮುಖ ಟೆಕ್ ಕ್ಲಸ್ಟರ್‌ಗಳ ವಿಶೇಷತೆಯನ್ನು ತಿಳಿಯಲು ಖುದ್ದು ಭೇಟಿ ನೀಡುವಂತೆ ಎಲ್ಲ ಜಾಗತಿಕ ಉದ್ಯಮಗಳನ್ನು ಸರ್ಕಾರದಿಂದ ಆಹ್ವಾನ ನೀಡಲಾಗುವುದು ಎಂದರು.
ಮೈಸೂರು ಕ್ಲಸ್ಟರ್ ಅನುಕೂಲಕರವಾದ ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆಯನ್ನು ಹೊಂದಿದ್ದು, ಇನ್ನೂ ಹೆಚ್ಚಿನ ಹೂಡಿಕೆ ಅವಕಾಶಗಳು ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಭರವಸೆ ಮೂಡಿಸಿದೆ. ಬಿಯಾಂಡ್ ಬೆಂಗಳೂರು ಸ್ಟಾರ್ಟ್-ಅಪ್ ಗ್ರಿಡ್‌ನಲ್ಲಿ ಮೈಸೂರು ಕ್ಲಸ್ಟರ್ ಒಂದರಲ್ಲೇ 120 ಸ್ಟಾರ್ಟ್-ಅಪ್‌ಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ಈ ಪೈಕಿ ಮಹಿಳಾ ನೇತೃತ್ವದ ಸ್ಟಾರ್ಟ್‌ಅಪ್‌ಗಳು ಶೇ.15ರಷ್ಟಿವೆ. ಇದರಿಂದ ಮೈಸೂರು ವಲಯದಲ್ಲಿ ಸ್ಟಾರ್ಟ್‌ಅಪ್ ಆರಂಭಿಸುವ ಅರ್ಹ ಉದ್ಯಮಿಗಳಿಗೆ ಈ ಫಂಡ್‌ನಿಂದ ಬಂಡವಾಳ ನಿಧಿ ಒದಗಿಸಲಾಗುತ್ತದೆ ಎಂದು ಹೇಳಿದರು.
ಕೆಡಿಇಎಂ ಸಿಇಒ ಸಂಜೀವ್ ಗುಪ್ತಾ ಮಾತನಾಡಿ, ಬಿಯಾಂಡ್ ಬೆಂಗಳೂರು ಪರಿಕಲ್ಪನೆ ಸಾಕಾರಗೊಂಡಿದೆ. ಕಳೆದ 18 ತಿಂಗಳಲ್ಲಿ 45ಕ್ಕೂ ಹೆಚ್ಚು ಕಂಪನಿಗಳು ಈ ಕ್ಲಸ್ಟರ್‌ಗಳಲ್ಲಿ ತಮ್ಮ ಕಾರ್ಯಾಚರಣೆಗಳನ್ನು ಸ್ಥಾಪಿಸಲು ಅನುಕೂಲ ಮಾಡಿಕೊಟ್ಟಿದ್ದೇವೆ. ಇತ್ತೀಚೆಗೆ ಕೇನ್ಸ್ ಟೆಕ್ನಾಲಜೀಸ್‌ನ ವಿಸ್ತರಣಾ ಯೋಜನೆ ಆರಂಭಕ್ಕೆ ಸಹಕರಿಸಿದ್ದೇವೆ. ಮುಂಬರುವ ದಿನಗಳಲ್ಲಿ ಕ್ಲಸ್ಟರ್‌ಗೆ ಇನ್ನೂ ಹೆಚ್ಚಿನ ಬಂಡವಾಳ ಆಕರ್ಷಿಸುವ ವಿಶ್ವಾಸ ನಮಗಿದೆ ಎಂದು ಹೇಳಿದರು.
ಎಕ್ಸೆಲ್‌ಸಾಫ್ಟ್ ಟೆಕ್ನಾಲಜೀಸ್ ಸಂಸ್ಥಾಪಕ ಮತ್ತು ಸಿಇಒ ಸುಧನ್ವ ಧನಂಜಯ ಮಾತನಾಡಿ, 22 ವರ್ಷಗಳ ಹಿಂದೆ ಮೈಸೂರಿನಲ್ಲಿ ಆರಂಭವಾದ ಎಕ್ಸೆಲ್‌ಸಾಫ್ಟ್ ಈಗ 25 ದೇಶಗಳಲ್ಲಿ ತನ್ನ ಅಸ್ತಿತ್ವ ಹೊಂದಿದೆ. ಮೈಸೂರಿನಲ್ಲೇ 2000ಕ್ಕೂ ಹೆಚ್ಚು ಉದ್ಯೋಗಿಗಳಿದ್ದಾರೆ. ನಗರವನ್ನು ನಾವಿಂದು ಜಾಗತಿಕ ತಂತ್ರಜ್ಞಾನದ ಕೇಂದ್ರವಾಗಿ ನೋಡುತ್ತೇವೆ. ಸ್ಟಾರ್ಟ್‌ಅಪ್‌ಗಳ ಸಂಖ್ಯೆಯೂ ಗಣನೀಯವಾಗಿ ಹೆಚ್ಚುತ್ತಿದ್ದು, ಜಿಸಿಸಿಗಳಿಗೂ ಇದು ಸೂಕ್ತವಾದ ಸ್ಥಳವಾಗಿದೆ. ನಮ್ಮ ಕಸ್ಪರ್ ವಿಸ್ತರಣೆಗೆ ಅನುಕೂಲ ಮಾಡಿಕೊಡಲು ಜಿಸಿಸಿ ಕೌನ್ಸಿಲ್ ಅನ್ನು ಇಲ್ಲಿಗೆ ಕರೆ ತಂದಿದ್ದಕ್ಕಾಗಿ ನ್ಯಾಸ್‌ಕಾಂಗೆ ಧನ್ಯವಾದಗಳು ಎಂದರು.
ನ್ಯಾಸ್‌ಕಾಂನ ಪ್ರಾದೇಶಿಕ ಮುಖ್ಯಸ್ಥ ಭಾಸ್ಕರ್ ವರ್ಮಾ ಮಾತನಾಡಿ, ಜಿಸಿಸಿ 4.0ನ ನೀಲನಕ್ಷೆಯನ್ನು ಮರು ವ್ಯಾಖ್ಯಾನಿಸಲಾಗುತ್ತಿದೆ. ಇಂಥ ಮಹತ್ವದ ಬದಲಾವಣೆ ತರುವಲ್ಲಿ ಮುಂಚೂಣಿಯಲ್ಲಿದೆ. ದೇಶದ ಜಿಸಿಸಿ ಪರಿಸರ ವ್ಯವಸ್ಥೆಯಲ್ಲಿ, ವಿವಿಧ ಸಂಸ್ಥೆಗಳು ಪರಿವರ್ತಕ ಉಪಕ್ರಮಗಳನ್ನು ಕೈಗೊಂಡು ನಿರ್ಣಾಯಕ ಪಾತ್ರ ವಹಿಸುತ್ತಿವೆ. ಇದರಿಂದಾಗಿಯೇ ಕ್ಲಸ್ಟರ್‌ಗಳು ಇಂದು ನಾವೀನ್ಯತೆ ಕೇಂದ್ರಗಳಾಗುತ್ತಿವೆ ಎಂದು ವಿಶ್ಲೇಷಿಸಿದರು.
ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಅಲ್ಲದೇ ನ್ಯಾಸ್ಕಾಂ, ಐಇಎಸ್‌ಎ, ಅಸೋಚಾಮ್, ಸಿಐಐ, ಟಿಐಇ ಮೈಸೂರು ಸಹಯೋಗದಲ್ಲಿ ಎರಡು ವರ್ಷಗಳಲ್ಲಿ ಮೈಸೂರು ಕ್ಲಸ್ಟರ್‌ನ ಉದ್ಯಮವು ವ್ಯಾಪಕ ಬೆಳವಣಿ ಕಂಡಿದ್ದು, ದೇಶದ ಉದಯೋನ್ಮುಖ ಟೆಕ್ ಹಬ್ ಆಗಿ ಬೆಳೆದಿದೆ. 18 ತಿಂಗಳದೀಚೆಗೆ ನಗರದಲ್ಲಿ ಐಬಿಎಂ, ಟ್ರಾವಂಕೂರ್ ಅನಾಲಿಟಿಕಾ, ನಾಗರೋ, ಎಚ್‌ಇಎಸ್, ಪ್ರೊಕ್ಸೆಲೆರಾ,ಫೋರ್‌ಫ್ರಂಟ್ ಹೆಲ್ತ್‌ಕೇರ್, ಗ್ಲೋಟಚ್ ಆಟೋ-ಆಸಮ್ ಇನ್ನಿತರ ಪ್ರತಿಷ್ಠಿತ ಕಂಪನಿಗಳು ಆಗಮಿಸಿ ಕಾರ್ಯನಿರ್ವಹಿಸುತ್ತಿವೆ. ಹಿಂದುಜಾ ಗ್ಲೋಬಲ್ ಸೊಲ್ಯೂಷನ್ಸ್‌ನ ಜಾಗತಿಕ ವಿಸ್ತರಣೆಯ ಭಾಗವಾಗಿ ಮೈಸೂರಿನಲ್ಲಿ ಹೊಸ ಕೇಂದ್ರ ಸ್ಥಾಪಿಸಿದ್ದು, ಮೊದಲ ಹಂತದಲ್ಲಿ ಸಂಸ್ಥೆ 400 ಮಂದಿಯನ್ನು ಉದ್ಯೋಗಕ್ಕೆ ನೇಮಿಸಿಕೊಳ್ಳಲು ಯೋಜಿಸಿದ್ದು, ಈ ಕ್ಲಸ್ಟರ್ ಹಬ್‌ಗೆ ಇನ್ನಷ್ಟು ಅನುಕೂಲವಾಗಲಿದೆ ಎಂದರು.
ಸೇವೆ ಮತ್ತು ಉತ್ಪಾದನೆ ಎರಡನ್ನೂ ಒಳಗೊಂಡಿರುವ ವಲಯಗಳ ಬಲ ಹೆಚ್ಚಿಸುವಲ್ಲಿ ಪ್ರತಿಭಾನ್ವಿತ ಕೆಲಸಗಾರರ ಪಾತ್ರ ಅತ್ಯಂತ ಮುಖ್ಯವಾದುದು. ಇಂಥ ಪ್ರತಿಭಾನ್ವಿತರ ಲಭ್ಯತೆಯಿಂದಾಗಿಯೇ ಮೈಸೂರು ಕ್ಲಸ್ಟರ್ ಈ ಮಟ್ಟದ ಬೆಳವಣಿಗೆ ಸಾಧಿಸಲು ಸಾಧ್ಯವಾಗುತ್ತಿದೆ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net