

ಮೈಸೂರು: ಚಾರಿತ್ರಿಕ ಮಹತ್ವ ಹೊಂದಿರುವ ಮೈಸೂರು ನಗರವನ್ನು ಯಥಾಸ್ಥಿತಿಯಲ್ಲಿ ಸಂರಕ್ಷಣೆ ಮಾಡಿಕೊಂಡು ಹೋಗಬೇಕಿದೆ ಎಂದು ರಾಜ್ಯ ಪತ್ರಾಗಾರ ಇಲಾಖೆಯ ನಿರ್ದೇಶಕ ಡಾ. ಗವಿಸಿದ್ದಯ್ಯ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ಆಯೋಜಿಸಿದ್ದ ವಿಜಯಲಕ್ಷ್ಮೀ ಪ್ರಕಾಶನ ಪ್ರಕಟಿಸಿರುವ ದಿವಂಗತ ಈಚನೂರು ಕುಮಾರ್ ಅವರ 50 ವರ್ಷಗಳ ಅಕ್ಷರಯಾನ ನೆನಪಿನಲ್ಲಿ ‘ಭವ್ಯ ಚಿತ್ರಪಟ ಮೈಸೂರು’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೈಸೂರಿನ ಹಲವಾರು ಪಾರಂಪರಿಕ ಕಟ್ಟಡ, ವಸ್ತುಗಳು ವಿನಾಶದ ಅಂಚಿನಲ್ಲಿ ಇವೆ. ಇದು ಪರಂಪರೆಯ ನಗರ ಮಾತ್ರವಲ್ಲ, ಐತಿಹಾಸಿಕ ನಗರ ಸಹ ಆಗಿದೆ. ಆದ್ದರಿಂದ ಮೈಸೂರನ್ನು ಈಗಿನ ಮೈಸೂರಿನ ಹಾಗೆಯೇ ಉಳಿಸಿಕೊಳ್ಳಲು ಶ್ರಮಿಸಬೇಕಿದೆ ಎಂದರು.
ಮೈಸೂರಿನ ಬಗ್ಗೆ ಈಚನೂರು ಕುಮಾರ್ ಅವರಿಗೆ ವಿಶೇಷ ಪ್ರೀತಿ ಇತ್ತು. ಹೀಗಾಗಿಯೇ ಪತ್ರಾಗಾರ ಇಲಾಖೆಯನ್ನು ಸಮರ್ಥವಾಗಿ ಬಳಸಿಕೊಂಡು ಮೈಸೂರಿನ ಬಗ್ಗೆ ಹಲವಾರು ಉಪಯುಕ್ತ ಲೇಖನ ಬರೆದರು.
ಮೈಸೂರು ಹಾಗೂ ಪತ್ರಾಗಾರ ಇಲಾಖೆ ನಡುವೆ ಅವಿನಾಭಾವ ಸಂಬಂಧವಿದೆ. ಅರಮನೆಗೆ ಸಂಬಂಧಿಸಿದ ಸಾಕಷ್ಟು ದಾಖಲೆಗಳು ಇಲ್ಲಿವೆ. ಈಚನೂರು ಕುಮಾರ್ ಅವರು ಇವನ್ನೆಲ್ಲ ಅತಿ ಆಸಕ್ತಿಯಿಂದ ಅಧ್ಯಯನ ಮಾಡುತ್ತಿದ್ದರು ಎಂದು ಸ್ಮರಿಸಿದರು.
ಯಾವೊಬ್ಬ ಇತಿಹಾಸ ಸಂಶೋಧನಾ ವಿದ್ಯಾರ್ಥಿಗೂ ಕಡಿಮೆಯಿಲ್ಲದಂತೆ ಅವರು ಅಧ್ಯಯನ ಮಾಡುತ್ತಿದ್ದರು. ಸರಳ ಜೀವಿಯೂ ಆಗಿದ್ದರು. ಅರಮನೆಗೆ ಸಂಬಂಧಿಸಿದ ಪ್ರತಿಯೊಂದೂ ಮಾಹಿತಿಯನ್ನೂ ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಿದ್ದರು ಎಂದು ಹೇಳಿದರು.
ಹಿರಿಯ ಪತ್ರಕರ್ತ ಜಿ.ಸತ್ಯನಾರಾಯಣ (ಗೌರಿ ಸತ್ಯ) ಮಾತನಾಡಿ, ಮೈಸೂರು ಕೇವಲ ಪಾರಂಪರಿಕ ನಗರ ಮಾತ್ರವಲ್ಲ, ಐತಿಹಾಸಿಕ ನಗರವೂ ಆಗಿದೆ. ಇಲ್ಲಿನ ಸುತ್ತಮುತ್ತಲೂ ಇತಿಹಾಸ ಹೊಂದಿರುವ ಅನೇಕ ಸ್ಥಳಗಳು ಇವೆ. ಅವುಗಳ ಕುರಿತು ಹೆಚ್ಚಿನ ಗಮನ ನೀಡಬೇಕಾಗಿದೆ.
ಬೇರೆ ರಾಷ್ಟ್ರಗಳ ಬಗ್ಗೆ ಮಾತನಾಡುವುದಲ್ಲ, ಮೊದಲಿಗೆ ನಮ್ಮ ಬೇರು ಇರುವ ಮೈಸೂರಿನ ಬಗ್ಗೆ ತಿಳಿದುಕೊಳ್ಳಬೇಕು. ಇಲ್ಲಿನ ಇತಿಹಾಸ ತೆಗೆದು, ಅಧ್ಯಯನ ಮಾಡಿ ಹೊರ ತೆಗೆಯಬೇಕಾಗಿದೆ. ಈ ನಿಟ್ಟಿನಲ್ಲಿ ಈಚನೂರು ಕುಮಾರ್ ಹೆಚ್ಚಿನ ಕೆಲಸ ಮಾಡಿದ್ದಾರೆ ಎಂದು ಬಣ್ಣಿಸಿದರು.
ಈಚನೂರು ಕುಮಾರ್ ಅವರು ಮೈಸೂರಿನ ಇತಿಹಾಸ ಬಗ್ಗೆ ಸಾಕಷ್ಟು ತಿಳಿದು ಪತ್ರಿಕೆಗಳಿಗೆ ಲೇಖನ ಬರೆಯುತ್ತಿದ್ದರು. ಸ್ವತಃ ಪತ್ರಕರ್ತರಾಗಿದ್ದರೂ ಪತ್ರಿಕೋದ್ಯಮಕ್ಕಿಂತ ಹೆಚ್ಚಿನ ಆಸಕ್ತಿ ಮೈಸೂರಿನ ಇತಿಹಾಸ, ಇಲ್ಲಿನ ಕಟ್ಟಡ, ರಾಜಮನೆತನದ ಬಗ್ಗೆ ಹೊಂದಿದ್ದರು. ಇವರ ಬಗೆಗಿನ ಈ ಪುಸ್ತಕ ಸಹ ಮೈಸೂರು ಇತಿಹಾಸದ ಬಗೆಗಿನ ದೊಡ್ಡ ಕೊಡುಗೆಯಾಗಿದೆ ಎಂದು ಹೇಳಿದರು.
ಈಚನೂರು ಕುಮಾರ್ ಅವರ ಒಡನಾಟ ಹೊಂದಿದ್ದ ಹಲವರು ತಮ್ಮ ನೆನಪು ಹಂಚಿಕೊಂಡರು. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ದೀಪಕ್, ಈಚನೂರು ಕುಮಾರ್ ಪುತ್ರಿ ಅಕ್ಷತಾ, ಪುತ್ರ ಎಂ.ಕೆ.ಅಜಿತ್ ಸೇರಿದಂತೆ ಇನ್ನಿತರರಿದ್ದರು.