

ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಕಟ್ಟಡ ದುರಸ್ತಿ ಮತ್ತು ಮೂಲಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿಗಳು ಸೋಮವಾರ ಪ್ರತಿಭಟನೆ ನಡೆಸಿದರು.
ನಗರದ ಮಾನಸಗಂಗೋತ್ರಿ ಕ್ಯಾಂಪಸ್‌ನಲ್ಲಿರುವ ಈ ಸಂಸ್ಥೆಯ ಎದುರು ಜಮಾವಣೆಗೊಂಡ ಪ್ರತಿಭಟನಾಕಾರರು, ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರು ವಿಶ್ವವಿದ್ಯಾಲಯದ ಕನ್ನಡ ಚಟುವಟಿಕೆಗಳನ್ನೆಲ್ಲ ಕೇಂದ್ರೀಕರಿಸುವ ದೃಷ್ಟಿಯಿಂದ ಈ ಸಂಸ್ಥೆ 1966ರಲ್ಲಿ ಸ್ಥಾಪನೆಗೊಂಡಿದೆ. ಬೋಧನೆ, ಸಂಶೋಧನೆ, ಸಂಪಾದನೆಗಳೊಂದಿಗೆ ಬೇರೆ ಭಾಷೆಗಳಿಂದ ವಿವಿಧ ಗ್ರಂಥಗಳನ್ನು ಕನ್ನಡಕ್ಕೆ ತರುವ, ಕನ್ನಡದ ಶ್ರೇಷ್ಠ ಸಾಹಿತಿಗಳ ಕೃತಿಗಳನ್ನು ಇತರ ಭಾಷೆಗಳಿಗೆ ಪರಿಚಯಿಸುವ ಮತ್ತು ಇನ್ನೂ ಬೆಳಕಿಗೆ ಬಾರದ ಪ್ರಾಚೀನ ಗ್ರಂಥಗಳನ್ನು ಶಾಸ್ತ್ರೀಯವಾಗಿ ಪ್ರಕಟಿಸುವ ಕಾರ್ಯದಲ್ಲಿ ನಿರತವಾಗಿರುವ ಈ ಸಂಸ್ಥೆಯ ಕಟ್ಟಡ ಶಿಥಿಲವಾಗಿದೆ. ಇದರ ಛಾವಣಿಯ ಪದರ ಕುಸಿಯುತ್ತಿದೆ. ಅಲ್ಲದೇ, ಮೂಲ ಸೌಕರ್ಯದ ಕೊರತೆ ತೀವ್ರವಾಗಿ ಕಾಡುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ನಿರಂತರವಾಗಿ ಸುರಿದ ಮಳೆಯಿಂದ ಕಟ್ಟಡ ಶಿಥಿಲಗೊಂಡಿದೆ. ಇಲ್ಲಿರುವ ಗ್ರಂಥಾಲಯದ ಛಾವಣಿಯ ಕಾಂಕ್ರಿಟ್ ಪದರು ಬೀಳುತ್ತಿದೆ. ವಿದ್ಯಾರ್ಥಿಗಳು ಓದುವಾಗ ಈ ಘಟನೆ ಆಗಿದ್ದರೆ ಅನಾಹುತವಾಗುತ್ತಿತ್ತು. ಜತೆಗೆ, ಇಲ್ಲಿಯ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.
ಸ್ಥಳಕ್ಕೆ ಆಗಮಿಸಿದ ಕುಲಸಚಿವ ಪ್ರೊ.ಆರ್.ಶಿವಪ್ಪ ಅವರು ಛಾವಣಿ ಕುಸಿದಿರುವುದನ್ನು ಪರಿಶೀಲಿಸಿದರು. ಬಳಿಕ ಮಾತನಾಡಿದ ಅವರು, ಕಟ್ಟಡ ಸುಮಾರು 60 ವರ್ಷ ಹಳೆಯದಾಗಿದ್ದು, ಹಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಇದರಿಂದ ಶೀತಗೊಂಡು ಛಾವಣಿ ಕುಸಿದಿದೆ. ಕೂಡಲೇ ಈ ಬಗ್ಗೆ ಇಂಜಿನಿಯರ್‌ಗಳು ಪರಿಶೀಲನೆ ನಡೆಸಿ ಕೆಲಸ ಆರಂಭಿಸಲಿದ್ದಾರೆ. ಜತೆಗೆ, ಕುಡಿಯುವ ನೀರಿನ ವ್ಯವಸ್ಥೆಯನ್ನು ನಾಳೆಯಿಂದಲೇ ಕಲ್ಪಿಸಿಕೊಡಲಾಗುವುದು. ಉಳಿದ ಬೇಡಿಕೆಗಳನ್ನು ಮುಂದಿನ ದಿನಗಳಲ್ಲಿ ಈಡೇರಿಸಲಾಗುವುದು ಎಂದು ಆಶ್ವಾಸನೆ ನೀಡಿದರು. ಬಳಿಕ ಪ್ರತಿಭಟನೆಯನ್ನು ಕೈಬಿಡಲಾಯಿತು
ಬೋಧಕರಾದ ಡಾ.ಲೋಲಾಕ್ಷಿ, ಡಾ.ಶಶಿಕಲಾ, ಡಾ.ನಂಜಯ್ಯ ಹೊಂಗನೂರು, ಡಾ.ರವೀಂದ್ರ ಹಾಗೂ ವಿಭಾಗದ ವಿದ್ಯಾರ್ಥಿಗಳು ಮತ್ತು ಸಂಶೋಧಕರು, ಇನ್ನಿತರರು ಇದ್ದರು.