ಮೈವಿವಿ ಕುಲಪತಿ ಆಯ್ಕೆ: ಡಿ.20ಕ್ಕೆ ಶೋಧನಾ ಸಮಿತಿ ಸಭೆ

mysore university
Published on

ಮೈಸೂರು: ಮೈಸೂರು ವಿಶ್ವವಿದ್ಯಾಲಯದ ನೂತನ ಕುಲಪತಿ ನೇಮಕಾತಿಗೆ ಸಂಬಂಧಿಸಿದಂತೆ ಶೋಧನಾ ಸಮಿತಿಯ ಸಭೆ ಡಿ.20ರಂದು ನಡೆಯಲಿದೆ.

ಈ ಸ್ಥಾನಕ್ಕಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಸಮಿತಿಯ ಅರ್ಜಿಗಳನ್ನು ಪರಿಶೀಲನೆ ಮಾಡಲು ಬೆಂಗಳೂರಿನಲ್ಲಿ ಸಭೆ ಸೇರಲಿದ್ದು, ಈ ಪೈಕಿ ಮೂವರ ಹೆಸರನ್ನು ಕುಲಪತಿ ಸ್ಥಾನಕ್ಕೆ ನಿಯೋಜಿಸಲು ಶಿಫಾರಸು ಮಾಡಲಿದ್ದು, ಈ ವರದಿಯನ್ನು ರಾಜ್ಯ ಸರ್ಕಾರವು ರಾಜ್ಯಭವನಕ್ಕೆ ಕಳುಹಿಸಲಿದೆ.

ಬೆಂಗಳೂರಿನ ಸಿಎಂಆರ್ ವಿವಿಯ ವಿಶ್ರಾಂತ ಕುಲಪತಿ ಪ್ರೊ.ಎಂ.ಎಸ್.ಶಿವಕುಮಾರ್(ರಾಜ್ಯ ಸರ್ಕಾರದ ನಾಮನಿರ್ದೇಶಿತ) ಅಧ್ಯಕ್ಷತೆಯ ಈ ಸಮಿತಿಗೆ ಮಧ್ಯಪ್ರದೇಶದ ಇಂದಿರಾಗಾಂಧಿ ರಾಷ್ಟ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪ್ರಕಾಶ್ ಮಣಿ ತ್ರಿಪಾತಿ(ರಾಜ್ಯಪಾಲರಿಂದ ನಾಮನಿರ್ದೇಶಿತ), ಪಂಜಾಬ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ರಾಘವೇಂದ್ರ ಪಿ.ತಿವಾರಿ(ಯುಜಿಸಿ ನಾರ್ಮನಿರ್ದೇಶಿತ), ಜಮ್ಮುವಿನ ಭಾರತೀಯ ಸಮಗ್ರ ಔಷಧ ಸಂಸ್ಥೆಯ ನಿರ್ದೇಶಕ ಡಾ.ಶ್ರೀನಿವಾಸ್ ರೆಡ್ಡಿ(ಮೈವಿವಿ ನಾಮನಿರ್ದೇಶಿತ) ಸದಸ್ಯರಾಗಿದ್ದಾರೆ.

ಪ್ರೊ.ಜಿ.ಹೇಮಂತ್‌ಕುಮಾರ್ ನಾಲ್ಕು ವರ್ಷದ ಅಧಿಕಾರ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮೈಸೂರು ವಿವಿ ಕುಲಪತಿ ಸ್ಥಾನವು ನ.15ರಿಂದ ತೆರವಾಗಿದ್ದು, ಹಂಗಾಮಿ ಕುಲಪತಿಯಾಗಿ ವಾಣಿಜ್ಯ ವಿಭಾಗದ ಡೀನ್ ಪ್ರೊ.ಎಚ್.ರಾಜಶೇಖರ್ ಕಾರ್ಯನಿರ್ವಹಿಸುತ್ತಿದ್ದಾರೆ. ಮುಂದಿನ ವರ್ಷಕ್ಕೆ ಮೈವಿವಿ ಹೊಸ ಕುಲಪತಿ ಬರುವ ನಿರೀಕ್ಷೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net