ಮೈಲ್ಯಾಕ್‌ಗೆ ಆಧುನಿಕ ಸ್ಪರ್ಶ ನೀಡಲು ನೆರವು

12
Published on

ಮೈಸೂರು: ಮೈಸೂರು ಪೇಯಿಂಟ್ಸ್ ಆ್ಯಂಡ್ ವಾರ್ನಿಷ್ ಲಿಮಿಟೆಡ್ (ಮೈಲ್ಯಾಕ್) ಕಾರ್ಖಾನೆಯ ಆಧುನೀಕರಣ, ವಿಸ್ತರಣೆ ಮತ್ತು ನವತಂತ್ರಜ್ಞಾನ ಅಳವಡಿಕೆಗೆ ರಾಜ್ಯ ಸರ್ಕಾರ ಅಗತ್ಯ ನೆರವು ನೀಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ನಗರದ ಕಲಾಮಂದಿರದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ಕಾರ್ಖಾನೆಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರದ ಅಧೀನ ಉದ್ಯಮವಾಗಿರುವ ಮೈಸೂರು ಪೇಯಿಂಟ್ಸ್ ಆ್ಯಂಡ್ ವಾರ್ನಿಷ್ ಸರ್ಕಾರದ ಬೆಂಬಲದಿಂದ ಲಾಭದಲ್ಲಿದೆ. ಆದರೆ ಈ ಕಾರ್ಖಾನೆ ಖಾಸಗಿ ವಲಯದ ಪೈಪೋಟಿ ಎದುರಿಸಬೇಕಿದೆ. ಈ ಹಿನ್ನೆಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ವಿಸ್ತರಣೆ, ಆಧುನೀಕರಣ, ತಂತ್ರಜ್ಞಾನ ಬಳಕೆ ಮತ್ತು ಮಾರುಕಟ್ಟೆ ಕಾರ್ಯತಂತ್ರ ರೂಪಿಸಿಕೊಂಡು ಮುನ್ನಡೆಯುವುದು ತೀರಾ ಅಗತ್ಯ ಮತ್ತು ಅನಿವಾರ್ಯವಾಗಿದ್ದು, ಇದಕ್ಕೆ ರಾಜ್ಯ ಸರ್ಕಾರ ನೆರವು ನೀಡಲಿದೆ. ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ಅವಕಾಶ ನೀಡಲಿದೆ ಎಂದರು.

ಮೈಲ್ಯಾಕ್ ನಾಲ್ವಡಿ ಕೃಷ್ಣರಾಜ ಒಡೆಯರ್ ದೂರದೃಷ್ಟಿಯ ಫಲ. ಇದು ಚುನಾವಣೆಗಳಲ್ಲಿ ಬಳಸುವ ಅಳಿಸಲಾಗದ ಶಾಯಿ ಮತ್ತು ಬಣ್ಣ ತಯಾರಿಕೆಯೊಂದಿಗೆ ದೇಶ ಮತ್ತು ರಾಜ್ಯದ ಹೆಮ್ಮೆಯ ಸಂಸ್ಥೆಯಾಗಿ ಬೆಳೆದುಬಂದಿದೆ ಎಂದು ಹೇಳಿದರು.
ಮೈಸೂರು ಸಂಸ್ಥಾನದ ರಾಜರ ಕೊಡುಗೆ ಅಪಾರ. ಕೃಷಿ, ಕೈಗಾರಿಕೆ, ಶಿಕ್ಷಣ, ಹಣಕಾಸು ಕ್ಷೇತ್ರಗಳಿಗೆ ಭದ್ರಬುನಾದಿ ಹಾಕಿಕೊಟ್ಟಿದ್ದಾರೆ. ಅವಶ್ಯಕತೆ ಮೀರಿ ದೂರದೃಷ್ಟಿ ಇಟ್ಟುಕೊಂಡು ಕೆಲಸ ಮಾಡುವ ಮೂಲಕ ರಾಜ್ಯದ ಅಭಿವೃದ್ಧಿಗೆ ನೆರವಾಗಿದ್ದಾರೆ. ಇದರಿಂದ ಕರುನಾಡು ಅಭಿವೃದ್ಧಿಯ ನಾಡು ಆಗಲು ಸಾಧ್ಯವಾಗಿದೆ ಎಂದು ಸ್ಮರಿಸಿದರು.

ರಾಜ್ಯ ಐಟಿ-ಬಿಟಿ, ತಾಂತ್ರಿಕತೆಯಲ್ಲಿ ಮುಂಚೂಣಿಯಲ್ಲಿದೆ. ಇದಕ್ಕೆ ಕಾರಣ ಮೈಸೂರು ರಾಜರು. ಆ ಕಾಲದಲ್ಲೇ ಜ್ಞಾನ ಮತ್ತು ತಂತ್ರಜ್ಞಾನ ಬಳಸಿಕೊಂಡು ಕಾರ್ಖಾನೆ ಪ್ರಾರಂಭ ಮಾಡಿದರು. ಇದು ಮುಂದೆ ತಂತ್ರಜ್ಞಾನ ಬೆಳವಣಿಗೆಗೆ ನಾಂದಿ ಹಾಡಿತು ಎಂದು ಬಣ್ಣಿಸಿದರು.


ಮೈಸೂರು ಪೇಯಿಂಟ್ಸ್ ಆ್ಯಂಡ್ ವಾರ್ನಿಷ್ ಲಿಮಿಟೆಡ್ ಅಧ್ಯಕ್ಷ ಆರ್. ರಘು ಮಾತನಾಡಿ, ಮೈಲ್ಯಾಕ್ ವಿಶ್ವದಲ್ಲೇ ಹೆಗ್ಗಳಿಕೆ ಹೊಂದಿದೆ. ದೇಶ-ವಿದೇಶಗಳಲ್ಲಿ ನಡೆಯುವ ಚುನಾವಣೆಗಳಲ್ಲಿ ಮತದಾರರ ಗುರುತಿಗಾಗಿ ಬಳಕೆಯಾಗುವ ಶಾಯಿ ತಯಾರು ಮಾಡುವ ಮೂಲಕ ವಿಶ್ವದ ಗಮನ ಸೆಳೆದಿದೆ. ಇದೀಗ ಕಾರ್ಖಾನೆಗೆ ಆಧುನಿಕ ಸ್ಪರ್ಶ ನೀಡಬೇಕಿದೆ ಎಂದರು.


ಶಾಯಿಯೊಂದಿಗೆ ವಿವಿಧೆಡೆ ಬಳಕೆಯಾಗುವ ಅಲಂಕಾರಿಕ ಬಣ್ಣ ತಯಾರಿಗೆ ಕ್ರಮ ವಹಿಸಬೇಕಾಗಿದೆ. ಖಾಸಗಿ ಕಾರ್ಖಾನೆಯ ಮಾದರಿಯಲ್ಲಿ ತಾಂತ್ರಿಕ ಪರಿಣತರಿಗೆ ಹೆಚ್ಚಿನ ವೇತನ ನೀಡಬೇಕಾಗಿದೆ. ಆದ್ದರಿಂದ ವೇತನ ಪರಿಷ್ಕರಣೆ ಮಾಡಿ ನುರಿತ ತಾಂತ್ರಿಕ ಸಿಬ್ಬಂದಿ ನೇಮಕಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು.
ಮೈಲ್ಯಾಕ್‌ನಿಂದ 28.41 ಲಕ್ಷ ರೂ. ಲಾಭಾಂಶದ ಚೆಕ್ ಅನ್ನು ಸಿಎಂಗೆ ಹಸ್ತಾಂತರ ಮಾಡಲಾಯಿತು. ಅಮೃತ ಮಹೋತ್ಸವದ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು.


ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಮೇಯರ್ ಶಿವಕುಮಾರ್, ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್, ಶಾಸಕರಾದ ಎಲ್. ನಾಗೇಂದ್ರ, ಎಸ್.ಎ. ರಾಮದಾಸ್, ಸಿ.ಎಸ್. ನಿರಂಜನ್‌ಕುಮಾರ್, ಉಪ ಮೇಯರ್ ಡಾ.ಜಿ. ರೂಪಾ, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ್, ಕಾಡಾ ಅಧ್ಯಕ್ಷ ನಿಜಗುಣರಾಜು ಮತ್ತಿತರರು ಇದ್ದರು.
ಸಂಸದ ಪ್ರತಾಪ್ ಸಿಂಹ ನಗರದಲ್ಲೇ ಇದ್ದರೂ ಸಿಎಂ ಕಾರ್ಯಕ್ರಮಕ್ಕೆ ಗೈರಾದರು. ವಿದೇಶ ಪ್ರವಾಸದಲ್ಲಿರುವುದರಿಂದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಬಂದಿರಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net