

ಹೂವಿನಹಡಗಲಿ: ತಾಲೂಕಿನ ಸುಕ್ಷೇತ್ರ ಮೈಲಾರದ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ಧಾನ್ಯಗಳ ಆಗಿ ಹಚ್ಚಿ ಕೃಷಿ ಚಟುವಟಿಕೆ ಆರಂಭಿಸುವ ಮೂಲಕ ಆಗಿ ಹುಣ್ಣಿಮೆ ಆಚರಿಸಲಾಯಿತು.
ಸ್ವಾಮಿ ಮೂರ್ತಿಗೆ ಬೆಳಗ್ಗೆಯಿಂದ ವಿಶೇಷ ಪೂಜೆಗಳನ್ನು ಸಲ್ಲಿಸಲಾಯಿತು. ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರು ಹರಕೆ ತೀರಿಸಿದರು. ಸ್ವಾಮಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿರಿಸಿ ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕಲಾಯಿತು. ನಂತರ ಉತ್ಸವ ಮೂರ್ತಿಗೆ ಅಭಿಷೇಕ ಮಾಡಲಾಯಿತು. ಗಣೇಶ ಶಿಬಾರದವರೆಗೆ ಸ್ವಾಮಿಯ ಪಲ್ಲಕ್ಕಿ ಸೇವೆ ಜರುಗಿತು. ನಂತರ ಬಲಿ ಹರಣ ಸೇವೆ ಜರುಗಿತು.
ವಂಶಪಾರಂಪರ್ಯ ಧರ್ಮಕರ್ತ ವೆಂಕಪ್ಪಯ್ಯ ಅವರ ಆಶೀರ್ವಾದ ಪಡೆದ ನಂತರ ಕಂಚಾವೀರರಿಂದ ಶಸ್ತ್ರ ಪವಾಡ ಜರುಗಿತು. ರಾತ್ರಿ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ರಥೋತ್ಸವ ಜರುಗಿತು. ದೇವಸ್ಥಾನದ ವಂಶಪಾರಂಪರ್ಯ ಪ್ರಧಾನ ಅರ್ಚಕ ಪ್ರಮೋದಭಟ್, ಬಾಬುದಾರರು, ಗೊರವಯ್ಯಗಳು ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿದರು. ಈ ವರ್ಷ ಕೃಷಿ ಚಟುವಟಿಕೆಯನ್ನು ಆರಂಭಿಸಲು ಕೆಲವು ಧಾನ್ಯಗಳ ಆಗಿ ಹಚ್ಚಲಾಗಿತ್ತು. ಸಮೃದ್ಧವಾಗಿ ಬೆಳೆದ ಧಾನ್ಯದ ಆಗಿ ಗಮನಿಸಿ ರಾಜ್ಯದ ರೈತರು ಕೃಷಿ ಚಟುವಟಿಕೆ ಆರಂಭಿಸುತ್ತಾರೆ.