ಮೈಲಹಳ್ಳಿ-ಸುಳ್ಳಕ್ಕಿಗೆ ತೆರಳುವ ರಸ್ತೆ ಗುಂಡಿಮಯ ;ಗ್ರಾಮಸ್ಥರ ಪ್ರತಿಭಟನೆ.

ಮೈಲಹಳ್ಳಿ-ಸುಳ್ಳಕ್ಕಿಗೆ ತೆರಳುವ ರಸ್ತೆ ಗುಂಡಿಮಯ ;ಗ್ರಾಮಸ್ಥರ ಪ್ರತಿಭಟನೆ.
Published on

ಬೇಲೂರು : ತಾಲೂಕಿನ ಮೈಲಹಳ್ಳಿ-ಸುಳ್ಳಕ್ಕಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಗುಂಡಿ ಬಿದ್ದು ವಾಹನಗಳ ಸವಾರರು ಮತ್ತು ಗ್ರಾಮಸ್ಥರು ಓಡಾಡಲು ತೀವ್ರ ತೊಂದರೆಯಾಗಿದ್ದು, ತಕ್ಷಣವೇ ಜನಪ್ರತಿನಿಧಿಗಳು ಅಥವಾ ಅಧಿಕಾರಿಗಳು ಗಮನ ಹರಿಸಿ ರಸ್ತೆ ದುರಸ್ಥಿಗೆ ಮುಂದಾಗಬೇಕು. ಇಲ್ಲದಿದ್ದಲ್ಲಿ ಮುಂಬರುವ ಎಲ್ಲ ಚುನಾವಣೆಯಲ್ಲೂ ಮತದಾನ ಬಹಿಷ್ಕರಿಸುವುದಾಗಿ ಮೈಲಹಳ್ಳಿ ಗ್ರಾಮದ ಮಲ್ಲೇಶ್ ಎಚ್ಚರಿಸಿದರು.

ಬೇಲೂರು ತಾಲೂಕಿನ ತೊಳಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೈಲಹಳ್ಳಿ-ಸುಳ್ಳಕ್ಕಿಗೆ ತೆರಳುವ ರಸ್ತೆ ಗುಂಡಿಗೆ ಬಾಳೆಗಿಡ ನೆಟ್ಟು ಪ್ರತಿಬಟಿಸಿ ಮಾತನಾಡಿದ ಅವರು, ಎರಡು ಗ್ರಾಮಗಳಲ್ಲಿ 200 ಕುಟುಂಬಕ್ಕೂ ಹೆಚ್ಚು ಜನರು ವಾಸವಿದ್ದಾರೆ. ಈ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಳೆದ ಎರಡು ವರ್ಷಗಳಿಂದ ಹಾಳಾಗಿದ್ದು, ಜನ ಜಾನುವಾರುಗಳು, ವಾಹನಗಳು ಓಡಾಡದಂತ್ತಾಗಿದೆ. ಇಷ್ಟಿದ್ದರೂ ಈ ಭಾಗದ ಜನಪ್ರತಿನಿಧಿಗಳಾಗಲಿ ಅಥವಾ ಅಧಿಕಾರಿಗಳಾಗಲಿ ಗಮನ ಹರಿಸಿಲ್ಲ. ಕೇವಲ ಸುಳ್ಳು ಆಶ್ವಾಸನೆ ನೀಡುತಿದ್ದಾರೆ. ನಮ್ಮ ಗ್ರಾಮಕ್ಕೆ ಶಾಸಕರು ಬಂದು ಹೋಗಿದ್ದ ಸಂದರ್ಭ ಮಾತ್ರ ಒಂದು ಬಾರಿ ಮಾತ್ರ ರಸ್ತೆ ಗುಂಡಿಗಳನ್ನು ಮುಚ್ಚಿಸುವ ಕೆಲಸ ಮಾಡಿದ್ದು ಬಿಟ್ಟರೆ ರಸ್ತೆಗೆ ಸಂಪೂರ್ಣ ಡಾಂಬರೀಕರಣ ಮಾಡಿಸಿಲ್ಲ. ತಕ್ಷಣ ನಮ್ಮ ಗ್ರಾಮದ ರಸ್ತೆ ಅಭಿವೃದ್ಧಿಗೆ ಮುಂದಾಗಬೇಕು. ಇಲ್ಲದಿದ್ದಲ್ಲಿ ಮುಂದಿನ ಎಲ್ಲ ಚುನಾವಣೆಗಳಲ್ಲೂ ಮತದಾನ ಭಹಿಷ್ಕರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ರೈತ ಸಂಘದ ಸ್ವಾಮಿಗೌಡ ಮಾತನಾಡಿ, ಬೇಲೂರು ಮುಖ್ಯರಸ್ತೆಯಿಂದ ಮೈಲಹಳ್ಳಿ-ಸುಳ್ಳಕ್ಕಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಜನಪ್ರತಿನಿಧಿಗಳು ಸಂಪೂರ್ಣ ವಿಫಲರಾಗಿದ್ದಾರೆ. ಮುಖ್ಯರಸ್ತೆಯಿಂದ ಗ್ರಾಮದವರೆಗೂ ರಸ್ತೆ ಸಂಪೂರ್ಣ ಗುಂಡಿ ಬಿದ್ದಿದ್ದು, ವಾಹನ ಸವಾರರು, ವೃದ್ದರು, ಶಾಲಾ ಮಕ್ಕಳು ತಿರುಗಾಡದಂತಹ ಸ್ಥಿತಿ ನಿರ್ಮಾಣವಾಗಿದೆ. ಆಟೋದವರು ಈ ಗ್ರಾಮಕ್ಕೆ ಬಾರದ ಹಿನ್ನಲೆಯಲ್ಲಿ ರೋಗಿಗಳು ಪರದಾಡುವಂತಾಗಿದ್ದು, ತಕ್ಷಣವೇ ರಸ್ತೆ ದುರಸ್ಥಿಗೆ ಮುಂದಾಗಬೇಕು ಎಂದರು.

ರೈತ ಸಂಘದ ಬಸವರಾಜ್ ಹಾಗೂ ಗ್ರಾಮಸ್ಥರಾದ ನವೀನ್, ಕುಮಾರ್, ನಾಗರಾಜು, ವೆಂಕಿ, ಚಂದ್ರು, ಗಂಗಮ್ಮ, ಕುಮಾರ್ ಸುಳ್ಳಕ್ಕಿ, ನವೀನ್ ದಿನೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net