

ಪಿರಿಯಾಪಟ್ಟಣ: ತಾಲೂಕಿನ ಭೂ ಸಮಸ್ಯೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶುಕ್ರವಾರ ದಲಿತ ಸಂಘರ್ಷ ಸಮಿತಿ ಮುಖಂಡರು ಶುಕ್ರವಾರ ಮೈಮೇಲೆ ಸಗಣಿ ಸುರಿದುಕೊಂಡು ಸರ್ಕಾರ ವಿರುದ್ಧ ಪ್ರತಿಭಟನೆ ನಡೆಸಿದರು.
ಮೂರು ವರ್ಷಗಳಿಂದ ಪಟ್ಟಣದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದರೂ ತಾಲೂಕು ಆಡಳಿತ ನಿರ್ಲಕ್ಷೃ ಹೊಂದಿದೆ ಎಂದು ಸಾರ್ಕರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ತಾಲೂಕಿನ ದಲಿತರ ಮತ್ತು ರೈತರ ಭೂ ಸಮಸ್ಯೆ ಬಗೆಹರಿಸುವುದು, ಗ್ರಾಮ ಪಂಚಾಯಿತಿಗಳಲ್ಲಿ ಭ್ರಷ್ಟಾಚಾರ ತಡೆಗಟ್ಟುವಂತೆ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ. ಆದರೆ, ಅಧಿಕಾರಿಗಳು ಸಮರ್ಪಕವಾಗಿ ಸ್ಪಂದಿಸದೆ ನಿರ್ಲಕ್ಷೃ ತೋರುತ್ತಿದ್ದಾರೆ. ತಾಲೂಕಿನ ದೊಡ್ಡ ಹೊಸೂರು ಗ್ರಾಮದ ಚೆನ್ನಮ್ಮ ಎಂಬುವರಿಗೆ ಪಿಟಿಸಿಎಲ್ ಕಾಯ್ದೆಯಡಿ ಆದೇಶವಾಗಿರುವ ಭೂ ಸಮಸ್ಯೆಯನ್ನು ಬಗೆಹರಿಸಬೇಕು. ಚನ್ನಕಲ್ ಕಾವಲು ಗ್ರಾಮದ ಸರ್ವೇ ನಂ.1 ಮತ್ತು 3ರ ಭೂ ಸಮಸ್ಯೆ ಬಗೆಹರಿಸಬೇಕು. ಸೂಳೆಕೋಟೆ ಗ್ರಾಮದ ಸರ್ವೇ ನಂ.10ರ ದಾಖಲೆಗಳನ್ನು ತಿರುಚಿದವರ ವಿರುದ್ಧ ಕಾನೂನು ಕ್ರಮವಾಗಬೇಕು. ಕೊಣಸೂರು ಗ್ರಾಮದ ಸರ್ವೇ ನಂ.138 ಮತ್ತು 93ರ ಭೂಮಿಯನ್ನು ಉಳುಮೆ ಮಾಡುತ್ತಿರುವ ರೈತರಿಗೆ ಸಾಗುವಳಿ ಮಂಜೂರು ಮಾಡಿಸಿಕೊಡಬೇಕು. ಕೊಪ್ಪ ಗೆರಾಸಿಯ ಕಾಲನಿಯಲ್ಲಿ ವಾಸ ಮಾಡುತ್ತಿರುವ ಗಿರಿಜನರಿಗೆ ನಿವೇಶನ ವ್ಯವಸ್ಥೆ ಮಾಡಿಸಬೇಕು ಎಂದು ಒತ್ತಾಯಿಸಿದರು.
ದರಖಾಸ್ತು ಜಮೀನು ಖಾತೆ ಮಾಡಿಕೊಡದೆ ರೈತರಿಗೆ ತೊಂದರೆ ನೀಡುತ್ತಿದ್ದಾರೆ. ಪ್ರಭಾವಿಗಳು ಸರ್ಕಾರಿ ಕೆರೆ, ಕಟ್ಟೆ, ಗೋಮಾಳ ಜಾಗಗಳನ್ನು ಒತ್ತುವರಿ ಮಾಡಿಕೊಂಡಿರುವುದು ಕಣ್ಣಿಗೆ ಕಂಡರೂ ಅಧಿಕಾರಿಗಳು ಕಾಣದಂತೆ ವರ್ತಿಸುತ್ತಿದ್ದಾರೆ. ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕು ಸ್ಥಾಪನೆಗೆ ಆಗಮಿಸುತ್ತಿರುವ ಮುಖಮಂತ್ರಿ, ಸಚಿವರಿಗೆ ಮನವರಿಕೆ ಮಾಡಿಕೊಡಲು ಅವಕಾಶ ಕಲ್ಪಿಸುವಂತೆ ತಹಸೀಲ್ದಾರ್ ನಿಸರ್ಗ ಪ್ರಿಯ ಅವರನ್ನು ಕೇಳಿದರೆ ಅವಕಾಶ ನಿರ್ಲಕ್ಷಿಸಿ ರೈತ, ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ೂರಿದರು.
ದಸಂಸ ಮುಖಂಡರಾದ ಸಿ.ಎಸ್.ಜಗದೀಶ್, ಮುಮ್ಮಡಿ ಕಾವಲ್ ದೊಡ್ಡಯ್ಯ, ಕದರೇಗೌಡ ಕೊಪ್ಪಲು ಮೂರ್ತಿ, ಮುಮ್ಮಡಿಕಾವಲ್ ರಾಮಚಂದ್ರ, ಕೆ.ಬಸವನಳ್ಳಿ ನಾರಾಯಣ, ತರಿಕಲ್ ಕಾಲನಿ ರಾಜಯ್ಯ, ವಾಸು, ಕೃಷ್ಣ, ಕೃಷ್ಣಮೂರ್ತಿ, ಮಹಾದೇವಮ್ಮ ಇತರರು ಭಾಗವಹಿಸಿದ್ದರು.