ಮೈಮುಲ್ ಅಧ್ಯಕ್ಷರಿಂದ ರಾಜಕೀಯ

Published on

ಪಿರಿಯಾಪಟ್ಟಣ: ಮೈಮುಲ್ ಅಧ್ಯಕ್ಷ ಪಿ.ಎಂ.ಪ್ರಸನ್ನ ಹಾಲು ಸಂಗ್ರಹ ಘಟಕಗಳ ವಿಷಯದಲ್ಲಿ ಪಕ್ಷ ರಾಜಕೀಯ ಮಾಡುವ ಮೂಲಕ ತಾಲೂಕಿನಲ್ಲಿ ಅಶಾಂತಿ ವಾತಾವರಣ ಸೃಷ್ಟಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಎಸ್ಸಿ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಯಿತನಹಳ್ಳಿ ಮಂಜು ಆರೋಪಿಸಿದರು.
ಪಿ.ಎಂ.ಪ್ರಸನ್ನ ಅವರ ತಂದೆ ಕೆ.ಮಹದೇವ್ ಶಾಸಕರಾಗಿದ್ದ ಅವಧಿಯಲ್ಲಿ ಐದು ವರ್ಷಗಳ ಕಾಲ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಸುಳ್ಳು ದೂರು ಕೊಡಿಸಿ ಕ್ರಿಮಿನಲ್ ಪ್ರಕರಣ ದಾಖಲಿಸುವುದು, ವಿವಿಧ ಇಲಾಖೆಗಳಲ್ಲಿ ಗುತ್ತಿಗೆ ನೌಕರರಾಗಿ ಕೆಲಸ ಮಾಡುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರ ಮಕ್ಕಳನ್ನು ಕೆಲಸದಿಂದ ಕಿತ್ತು ಹಾಕಿಸಿ ತಮ್ಮ ಪಕ್ಷದ ಕಾರ್ಯಕರ್ತರಿಗೆ ಕೆಲಸ ಕೊಡಿಸುವ ಕೆಲಸ ಮಾಡಿದ್ದಾರೆ. ಇದೆಲ್ಲವನ್ನೂ ಗಮನಿಸಿದ್ದ ತಾಲೂಕಿನ ಜನತೆ ಅವರನ್ನು ಸೋಲಿಸಿ ಮನೆಗೆ ಕಳುಹಿಸಿದ್ದಾರೆ. ಈಗ ಸೋಲಿನ ಹತಾಶೆಯಿಂದ ಇವರಿಬ್ಬರೂ ಸಚಿವ ಕೆ.ವೆಂಕಟೇಶ್ ಮತ್ತು ಅವರ ಪುತ್ರ ನಿತಿನ್ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾ ಅವರ ತೇಜೋವದೆ ಮಾಡುತ್ತಿದ್ದಾರೆ ಎಂದು ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಸನ್ನ ಅವರ ಈ ವರ್ತನೆಯನ್ನು ನಾವು ಸಹಿಸುವುದಿಲ್ಲ. ಇದನ್ನು ಮತ್ತೆ ಮುಂದುವರಿಸಿದರೆ ಅವರ ವಿರುದ್ಧ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕಾಂಗ್ರೆಸ್ ಸಾಮಾಜಿಕ ಜಾಲತಾಣದ ತಾಲೂಕು ಘಟಕದ ಅಧ್ಯಕ್ಷ ಪುರುಷೋತ್ತಮ್, ಕಾಂಗ್ರೆಸ್ ಮುಖಂಡರಾದ ಲೋಹಿತ್, ಅಬ್ದುಲ್ ವಾಜಿದ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net