

ಮೈಸೂರು: ಆಂತರಿಕ ಅಧಿಕಾರ ಹಂಚಿಕೆಯ ಒಡಂಬಡಿಕೆಯ ಪ್ರಕಾರ ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ (ಮೈಮುಲ್) ಅಧ್ಯಕ್ಷ ಸ್ಥಾನಕ್ಕೆ ಆರ್.ಚೆಲುವರಾಜು ಸೋಮವಾರ ರಾಜೀನಾಮೆ ಕೊಟ್ಟಿದ್ದಾರೆ. ಮುಂದಿನ ಅಧ್ಯಕ್ಷರು ಯಾರು ಆಗುತ್ತಾರೆ ಎಂಬ ಕುತೂಹಲ ಮೂಡಿದೆ.
ರಾಜೀನಾಮೆ ಪತ್ರವನ್ನು ವಾಪಸ್ ಪಡೆದುಕೊಳ್ಳಲು ಇನ್ನೂ 15 ದಿನಗಳ ಸಮಯಾವಕಾಶ ಇದೆ. ಕಳೆದ 2 ತಿಂಗಳಿನಿಂದ ರಾಜೀನಾಮೆ ವಿಚಾರವಾಗಿ ಆಡಳಿತ ಮಂಡಳಿಯಲ್ಲಿ ನಡೆಯುತ್ತಿದ್ದ ಮುಸುಕಿನ ಕಿತ್ತಾಟಕ್ಕೆ ಸದ್ಯಕ್ಕೆ ತೆರೆ ಬಿದ್ದಿದೆ.
ಮೈಮುಲ್‌ನ 5 ವರ್ಷಗಳ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಪಿರಿಯಾಪಟ್ಟಣ ಕ್ಷೇತ್ರದ ಮಾಜಿ ಶಾಸಕ ಕೆ.ಮಹದೇವ ಪುತ್ರ ಪಿ.ಎಂ.ಪ್ರಸನ್ನ ಮೊದಲು ಆಯ್ಕೆಯಾಗಿದ್ದರು. ಬಳಿಕ ‘ತಮಗೆ ಮುಕ್ತವಾಗಿ ಕಾರ್ಯನಿರ್ವಹಣೆಗೆ ಸಚಿವರೊಬ್ಬರು ಅವಕಾಶ ಕೊಡದೆ ಕಿರುಕುಳ ನೀಡುತ್ತಿದ್ದಾರೆ’ ಎಂದು ರಾಜೀನಾಮೆ ಕೊಟ್ಟು ಹುದ್ದೆಯನ್ನು ಬಿಟ್ಟುಕೊಟ್ಟಿದ್ದರು.
ತದನಂತರ, 2024ರ ಆಗಸ್ಟ್ 8ರಂದು ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ತಿ.ನರಸೀಪುರ ತಾಲೂಕಿನ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದ ಆರ್.ಚೆಲುವರಾಜು ಅವಿರೋಧವಾಗಿ ಮೈಮುಲ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಇದೀಗ ಪಕ್ಷದ ಒಳಗೆ ನಡೆದ ಅಧಿಕಾರ ಹಂಚಿಕೆ ಪ್ರಕಾರ ತಮ್ಮ ಹುದ್ದೆಗೆ ರಾಜೀನಾಮೆ ಕೊಟ್ಟು ಅಧಿಕಾರದಿಂದ ಕೆಳಗಿಳಿದಿದ್ದಾರೆ.
ಉಳಿದ ಅವಧಿಗೆ ಅಧ್ಯಕ್ಷರಾಗುವ ಅವಕಾಶ ಎಚ್.ಡಿ.ಕೋಟೆ ತಾಲೂಕಿನ ಈರೇಗೌಡ ಅವರಿಗೆ ಒಲಿಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.