

ಮೈಸೂರು: ತೆರಿಗೆ ವಂಚನೆ ಆರೋಪಕ್ಕೆ ಸಂಬಂಧಪಟ್ಟಂತೆ ನಗರದಲ್ಲಿ ಆದಾಯ ತೆರಿಗೆ (ಐಟಿ) ಇಲಾಖೆ ಅಧಿಕಾರಿಗಳ ದಾಳಿ ಮುಂದುವರಿದಿದೆ. ಶುಕ್ರವಾರ ಮೈಮುಲ್ ಅಧ್ಯಕ್ಷ ಚಲುವರಾಜ್ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಿದ್ದಾರೆ.
ಬುಧವಾರ ಹತ್ತು ಕಾರ್‌ಗಳಲ್ಲಿ ಆಗಮಿಸಿದ 50 ಐಟಿ ಅಧಿಕಾರಿಗಳು ಮತ್ತು ಸಿಬ್ಬಂದಿ ಏಕಕಾಲದಲ್ಲಿ ನಗರದ 3 ಕಡೆ ದಾಳಿ ಮಾಡಿ ಶೋಧ ನಡೆಸಿದ್ದರು. ಗುರುವಾರವೂ ನಗರದ ಕೆಲ ಉದ್ಯಮಿಗಳ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಿದ್ದರು. ಶುಕ್ರವಾರ ಮೈಮುಲ್ ಅಧ್ಯಕ್ಷ ಚಲುವರಾಜ್ ಐಟಿ ದಾಳಿಗೆ ಒಳಗಾಗಿದ್ದಾರೆ.
ಆಲನಹಳ್ಳಿಯಲ್ಲಿರುವ ನಿವಾಸ ಹಾಗೂ ರಾಮವಿಲಾಸ ರಸ್ತೆಯಲ್ಲಿರುವ ಕೆಆರ್‌ಸಿ ಗ್ರೂಪ್ ಕಚೇರಿ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಸಂಜೆಯವರೆಗೂ ದಾಖಲೆಗಳ ಪರಿಶೀಲನೆ ನಡೆಸಿ, ಕೆಲ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ ಎಂಬುದು ತಿಳಿದು ಬಂದಿದೆ.
ಚಲುವರಾಜು ನಗರದ ಹಳೇ ಕೆಸರೆ ಬಳಿ ಕಾಂಕ್ರಿಟ್ ಮಿಕ್ಸಿಂಗ್ ಪ್ಲಾಂಟ್ ಮತ್ತು ಜಲ್ಲಿ ಕ್ರಷರ್‌ನ ಮಾಲೀಕರು ಎಂದು ಹೇಳಲಾಗಿದ್ದು, ಇವರು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ, ಚಾಮರಾಜನಗರ ಸಂಸದ ಸುನೀಲ್ ಬೋಸ್ ಅವರ ಆಪ್ತರಾಗಿದ್ದಾರೆ.
ಕಳೆದ ಎರಡ್ಮೂರು ದಿನಗಳಿಂದ ಮೈಸೂರಿನ ಎಂ.ಪ್ರೊ ಪ್ಯಾಲೇಸ್ ಹೋಟೆಲ್, ಕಲ್ಯಾಣ ಮಂಟಪ ಸೇರಿದಂತೆ ಮೂರು ಕಡೆ ಅಧಿಕಾರಿಗಳು ದಾಳಿ ನಡೆಸಿದ್ದರು. ಇದರಲ್ಲಿ ಮೈಸೂರಿನ ಪ್ರತಿಷ್ಠಿತ ಗುತ್ತಿಗೆದಾರ ರಾಮಕೃಷ್ಣೇಗೌಡ ಎಂಬುವರ ಮನೆ, ಕಚೇರಿ ಮೇಲೆ ದಾಳಿಯೂ ಸೇರಿದೆ.
ರಾಮಕೃಷ್ಣ ನಗರದ ನಿವಾಸಿಯಾಗಿರುವ ಇವರು, ಸರ್ಕಾರಿ ಕಾಮಗಾರಿಗಳ ಟೆಂಡರ್ ಪಡೆದು ಕೆಲಸ ಮಾಡಿಸುತ್ತಾರೆ. ಜತೆಗೆ, ಇಟ್ಟಿಗೆ ಕಾರ್ಖಾನೆ, ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಾರೆ ಎಂದು ತಿಳಿದು ಬಂದಿದೆ.