

ಮೈಸೂರು: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಗೆದ್ದು ಅಧಿಕಾರದಲ್ಲಿ ಇದೆ ಎಂದು ಕಾರ್ಯಕರ್ತರು ಮೈ ಮರೆಯದೆ ಮುಂದಿನ ಲೋಕಸಭೆ , ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗೆ ಸಜ್ಜಾಗುವಂತೆ ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆದ ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಸಲಹೆ ನೀಡಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅತ್ಯಧಿಕ ಸ್ಥಾನಗಳನ್ನು ಗೆದ್ದು ಬಹುಮತದಿಂದ ಅಧಿಕಾರ ಹಿಡಿದಿದೆ. ಈ ಚುನಾವಣೆ ಬೆನ್ನಲ್ಲೇ ಲೋಕಸಭೆ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳಿದ್ದು, ಕಾರ್ಯಕರ್ತರು ಮತ್ತು ಮುಖಂಡರು ಮೈಮರೆಯಬಾರದು. ಸ್ಥಳೀಯ ಸಂಸ್ಥೆಗಳಲ್ಲಿಯೂ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ಹೇಳಿದರು.
ರಾಜ್ಯದಲ್ಲಿ ಪಕ್ಷಕ್ಕೆ ಶೇ.44 ರಷ್ಟು ಮತ ಬಂದಿದ್ದರೆ, ಮೈಸೂರು ಜಿಲ್ಲೆಯಲ್ಲಿ ಶೇ.60 ರಷ್ಟು ಮತ ಬಂದಿದೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಮತ್ತು ಮುಖಂಡರಿಗೆ ವಿಧಾನ ಪರಿಷತ್ತು ಸೇರಿದಂತೆ ನಿಗಮ, ಮಂಡಳಿಗಳಲ್ಲಿ ಸೂಕ್ತ ಸ್ಥಾನ ಮಾನ ನೀಡುವ ಮೂಲಕ ಅವರಿಗೆ ಪಕ್ಷ ಮನ್ನಣೆ ನೀಡಲಿದೆ ಎಂದು ಭರವಸೆ ನೀಡಿದರು.
ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಕೋಮುಭಾವನೆ ಬಿತ್ತಿ ಅಧಿಕಾರಕ್ಕೆ ಬಂತು. ಈಗಲೂ ಅದೇ ವಿಚಾರ ಇಟ್ಟುಕೊಂಡು ಮತ್ತೆ ಅಧಿಕಾರಕ್ಕೆ ಬರುವ ಪ್ರಯತ್ನ ಮಾಡುತ್ತಿದೆ. ಕಾಂಗ್ರೆಸ್ ಜನಪರ ಆಡಳಿತ ನೀಡುತ್ತಿದ್ದು, ಚುನಾವಣೆಗೂ ಮುನ್ನ ಘೋಷಣೆ ಮಾಡಿರುವ ಎಲ್ಲ ಗ್ಯಾರಂಟಿ ಭಾಗ್ಯಗಳನ್ನು ಅನುಷ್ಠಾನಗೊಳಿಸಲಿದ್ದು, ಈ ಬಾರಿಯ ಬಜೆಟ್‌ನಲ್ಲಿ ಅಗತ್ಯ ಅನುದಾನವನ್ನು ಸರ್ಕಾರ ಮೀಸಲಿಟ್ಟಿದೆ ಎಂದು ಹೇಳಿದರು.
ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್, ನಗರಪಾಲಿಕೆ ಮಾಜಿ ಸದಸ್ಯ ಎಂ.ಶಿವಣ್ಣ, ಮಾಜಿ ಮೇಯರ್ ದಕ್ಷಿಣಾಮೂರ್ತಿ, ಮುಖಂಡರಾದ ಈಶ್ವರ್ ಚೊಕ್ಕಾಡಿ, ಗುರುಪಾದಸ್ವಾಮಿ, ನಾಗೇಶ್ ಇತರರು ಇದ್ದರು.