

ಕೊಡೇಕಲ್: ಮಹಾರಾಷ್ಟç, ಪಶ್ಚಿಮ ಘಟ್ಟಗಳಲ್ಲಿ ಸುರಿದ ವ್ಯಾಪಕ ಮಳೆಯಿಂದಾಗಿ ಜೀವಕಳೆ ಪಡೆದಿರುವ ಸುಮಾರು 6 ಲಕ್ಷ ಹೆಕ್ಟೇರ್‌ಗೆ ನೀರುಣಿಸುವ ನಾರಾಯಣಪುರದ ಬಸವಸಾಗರ ಜಲಾಶಯ ಭರ್ತಿಯಾಗಿದ್ದು, ಮೈದುಂಬಿದ ಕೃಷ್ಣೆಗೆ ಬಾಗಿನ ಯಾವಾಗ ಎಂಬ ಪ್ರಶ್ನೆ ಅಚ್ಚುಕಟ್ಟು ಪ್ರದೇಶದ ರೈತರದ್ದಾಗಿದೆ.
ಜು.14ರವರೆಗೆ ಕೇವಲ 21.857 ಟಿಎಂಸಿ ನೀರಿದ್ದ ಬಸವಸಾಗರಕ್ಕೆ ಜು.17ರಿಂದ ಶುರುವಾದ ಒಳಹರಿವಿನಿಂದ 11.269 ಟಿಎಂಸಿ ನೀರು ಸಂಗ್ರಹಗೊಳ್ಳುವ ಮೂಲಕ ಭರ್ತಿಯಾಗಿದೆ. ಗರಿಷ್ಠ 492.252 ಮೀ. ನೀರು ಸಂಗ್ರಹದ ಜಲಾಶಯದಲ್ಲಿ ಸದ್ಯ 492.21 ಮೀ. ನೀರಿದ್ದು, ಅನ್ನದಾತರ ಮೊಗದಲ್ಲಿ ಮಂದಹಾಸ ಮೂಡಿದೆ.
ಜಲಾಶಯದಲ್ಲಿ ಸಮರ್ಪಕ ನೀರು ಸಂಗ್ರಹವಿಲ್ಲದ್ದರಿAದ ಕಳೆದ ವರ್ಷ ಮುಂಗಾರು ಬೆಳೆಗಳಿಗೆ ವಾರಾಬಂದಿ ಪದ್ಧತಿ ಮೂಲಕ ನೀರು ಹರಿಸಿದ್ದರೆ, ಹಿಂಗಾರು ಬೆಳೆಗಳಿಗೆ ಹರಿಸಲಾಗದೆ ರೈತರು ತೀವ್ರ ನಷ್ಟ ಅನುಭವಿಸುವಂತಾಗಿತ್ತು. ಆದರೆ ಪ್ರಸಕ್ತ ವರ್ಷ ನಮ್ಮ ಭಾಗದಲ್ಲಿ ಮಳೆಯಾಗದ ಕಾರಣ ಜಲಾಶಯದಿಂದ ಕಾಲುವೆಗಳಿಗೆ ನೀರು ಸಿಗುತ್ತದೆಯೋ ಇಲ್ಲವೋ ಎಂಬ ಆತಂಕದಲ್ಲಿದ್ದ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಮಹಾರಾಷ್ಟç ಸೇರಿ ಕೊಂಕಣ ಘಟ್ಟ ಮತ್ತು ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಸುರಿದ ವ್ಯಾಪಕ ಮಳೆ ಕೃಷಿ ಚಟುವಟಿಕೆಗೆ ಪೂರಕ ಎನಿಸಿದೆ.
ಬಸವಸಾಗರಕ್ಕೆ ಜು.17ರಂದು 1789 ಕ್ಯೂಸೆಕ್‌ನಿಂದ ಶುರುವಾದ ಒಳಹರಿವು 3.30 ಲಕ್ಷ ಕ್ಯೂಸೆಕ್‌ವರೆಗೆ ತಲುಪಿದ ಕಾರಣ 29 ದಿನಗಳಲ್ಲಿ 13.01 ಟಿಎಂಸಿ ನೀರು ಸಂಗ್ರಹವಾಗಿದೆ. ಸಂಗ್ರಹಮಟ್ಟ ಕಾಯ್ದುಕೊಂಡು ಮುಖ್ಯ ಗೇಟ್‌ಗಳಿಂದ 430 ಟಿಎಂಸಿ ನೀರು ಕೃಷ್ಣೆಗೆ ಹರಿಸಲಾಗಿದೆ.
ಮಹಾರಾಷ್ಟç ಸೇರಿ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮಳೆ ತಗ್ಗಿದ್ದರಿಂದ ಜಲಾಶಯದಲ್ಲಿ ನೀರಿನ ಸಂಗ್ರಹ ಮಟ್ಟ ಕಾಯ್ದುಕೊಳ್ಳಲು ಶನಿವಾರದಿಂದ ಮುಖ್ಯ ಕ್ರಸ್ಟ್ ಗೇಟ್‌ಗಳನ್ನು ಬಂದ್ ಮಾಡಿದ್ದು, ಎಂಪಿಸಿಎಲ್ ಮೂಲಕ 6000 ಕ್ಯೂಸೆಕ್ ನೀರು ಮಾತ್ರ ನದಿಗೆ ಹರಿಸಲಾಗುತ್ತಿದೆ. ಜಲಾಶಯಕ್ಕೆ ಇನ್ನೂ 20 ಸಾವಿರ ಕ್ಯೂಸೆಕ್ ಒಳಹರಿವಿದೆ. ನೀರಿನ ಸಂಗ್ರಹಮಟ್ಟ ಕಾಯ್ದುಕೊಳ್ಳಲು ಅತ್ಯಂತ ವ್ಯವಸ್ಥಿತವಾಗಿ ನಿರ್ವಹಣೆ ಮಾಡುತ್ತಿರುವ ಕೆಲಸ ಕೃಷ್ಣಾ ಭಾಗ್ಯ ಜಲನಿಗಮದ ಅಣೆಕಟ್ಟು ಅಧಿಕಾರಿಗಳು ಮಾಡುತ್ತಿದ್ದಾರೆ.
ಕಾವೇರಿಯತ್ತ ಲಕ್ಷÈ, ಕೃಷ್ಣೆಗೇಕೆ ನಿರ್ಲಕ್ಷÈ?: ಬಾಗಿನ ಯಾವಾಗ?: ಅಂದಾಜು 6 ಲಕ್ಷ ಹೆಕ್ಟೇರ್ ಭೂ ಪ್ರದೇಶಕ್ಕೆ ನೀರುಣಿಸುವ ಬಸವಸಾಗರ ಮೈದುಂಬಿಕೊAಡಿದ್ದು, ಯಾವಾಗ ಬಾಗಿನ ಅರ್ಪಿಸಲಾಗುತ್ತದೆ ಎಂದು ಕೃಷ್ಣೆ ಒಡಲ ಮಕ್ಕಳು ಕಾತರದಿಂದ ಕಾಯುತ್ತಿದ್ದಾರೆ. ಪ್ರತಿವರ್ಷ ಬಾಗಿನ ಅರ್ಪಿಸಲು ಮೀನಮೇಷ ಎಣಿಸಲಾಗುತ್ತದೆ. ದಕ್ಷಿಣದಲ್ಲಿ ಹರಿಯುವ ಕಾವೇರಿ ನದಿಯ ಕೆಆರ್‌ಎಸ್ ಜಲಾಶಯ ತುಂಬಿದ ಮರುಕ್ಷಣವೇ ಸರ್ಕಾರಗಳು ಬಾಗಿನ ಅರ್ಪಿಸುತ್ತವೆ. ಆದರೆ ಕೃಷ್ಣೆಗೆ ಬಾಗಿನ ವಿಷಯದಲ್ಲಿ ಏಕೆ ತಾತ್ಸಾರ ಎಂಬುದು ತಿಳಿಯದಾಗಿದೆ. ಕಳೆದ ವರ್ಷ ಆ.11ರಂದು ಜಲಾಶಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಸೇರಿ ಸುರಪುರ, ಯಾದಗಿರಿ ಶಾಸಕರು ಬಾಗಿನ ಅರ್ಪಿಸಿದ್ದರು. ಆದರೀಗ ಒಡಲು ತುಂಬಿರುವ ಕೃಷ್ಣೆಗೆ ಬಾಗಿನ ಅರ್ಪಿಸಲು ಕೂಡ ಜಲಸಂಪನ್ಮೂಲ ಸಚಿವರ ಅಪ್ಪಣೆ ಬೇಕೆ ಎಂಬ ಮಾತುಗಳು ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರಿಂದ ಕೇಳಿಬರುತ್ತಿವೆ.