

ನಾಗಮಂಗಲ: ರಾಜ್ಯದಲ್ಲಿ ಬಿಜೆಪಿಗೆ ಜೆಡಿಎಸ್ ಜತೆ ಹಾಗೂ ಜೆಡಿಎಸ್‌ಗೆ ಬಿಜೆಪಿ ಜತೆ ಮೈತ್ರಿ ಅನಿವಾರ್ಯವಾಗಿದೆ. ಮೈತ್ರಿಯಾಗದಿದ್ದರೆ ಜೆಡಿಎಸ್‌ಗೆ ಉಳಿಗಾಲವಿಲ್ಲ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಹೇಳಿದರು.
ಜೆಡಿಎಸ್ ಪಕ್ಷ ಈಗ ಕಷ್ಟದಲ್ಲಿದೆ. ಸುಧಾರಿಸಿಕೊಂಡ ನಂತರ ನಮ್ಮದೇ ರಾಜ್ಯಭಾರ ಎಂಬಂತೆ ನಡೆದುಕೊಳ್ಳುತ್ತಾರೆ. ಈಗಿನ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿಗೂ ಮೈತ್ರಿ ಅನಿವಾರ್ಯವಾಗಿದ್ದು ಅದರಂತೆ ಜೆಡಿಎಸ್ ಪಕ್ಷಕ್ಕೂ ಬಿಜೆಪಿ ಜತೆ ಮೈತ್ರಿ ಅನಿವಾರ್ಯವಾಗಿದೆ. ಬಿಜೆಪಿ-ಜೆಡಿಎಸ್ ಮೈತ್ರಿಗೆ ನನ್ನ ಸಂಪೂರ್ಣ ಸಹಮತವಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಗ್ರಾಮ ಪಂಚಾಯಿತಿ ಹಂತದಿಂದ ಮೈತ್ರಿಯಾಗಬೇಕು ಎಂಬುದು ನನ್ನ ಸಲಹೆ. ಇದು ಕೇವಲ ಲೋಕಸಭೆ ಚುನಾವಣೆಗೆ ಸೀಮಿತವಾಗಬಾರದು. ಜೆಡಿಎಸ್ ಉಸಿರಾಡಲು ಬಿಜೆಪಿ ಸಖ್ಯ ಬೇಕಿದೆ. ಜೆಡಿಎಸ್ ಉಸಿರಾಡಿಸಲು ಹೋಗಿ ಬಿಜೆಪಿಯಲ್ಲಿನ ಎಲ್ಲರನ್ನೂ ಗದ್ದೆಗೆ ತಳ್ಳಿಬಿಟ್ಟಾರು ಎಂಬ ಆತಂಕವಿದೆ. ಆದ್ದರಿಂದ ತಳಮಟ್ಟದಿಂದ ಮೈತ್ರಿಯಾಗಲಿ. ಜೆಡಿಎಸ್‌ನವರು ಈಗ ಕೆಳಕ್ಕೆ ಬಿದ್ದಿದ್ದಾರೆ. ಅದಕ್ಕೆ ಬಿಜೆಪಿಯವರನ್ನು ಬಂದು ಸೇರಿಕೊಳ್ಳಿ ಎನ್ನುತ್ತಿದ್ದಾರೆ. ಸ್ವಲ್ಪ ಸುಧಾರಿಸಿದ ನಂತರ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕಂಟ್ರೋಲ್ ತೆಗೆದುಕೊಳ್ಳುವುದರಲ್ಲಿ ಬಹಳ ಬಂದೋಬಸ್ತ್. ಕೇಂದ್ರದ ಮಟ್ಟದಲ್ಲಿ ಮಾತುಕತೆ ನಡೆದಿರುವುದರಿಂದ ಮೈತ್ರಿ ಸಂಬಂಧ ನಮಗೆ ಮಾಹಿತಿಯಿಲ್ಲ. ಸಂಸದೆ ಸುಮಲತಾ ಅಂಬರೀಷ್ ಬಿಜೆಪಿಗೆ ಬೆಂಬಲ ಸೂಚಿಸಿದ್ದರೂ ಅವರ ನಿಲುವು ಏನು ಎಂಬುದನ್ನು ಪಕ್ಷ ಚಿಂತನೆ ಮಾಡಬೇಕಿದೆ ಎಂದರು.
ಕ್ಷಮೆಯಾಚಿಸುತ್ತೇನೆ: ಈ ಹಿಂದೆ ಜಿಲ್ಲೆಯ ಸಂಸದನಾಗಿ ಅಧಿಕಾರ ನಡೆಸಿದ್ದೇನೆ. ಇದುವರೆಗೂ ನಡೆದಂತಹ ಕಾವೇರಿ ಸಂಬಂಧಿತ ಎಲ್ಲ ಹೋರಾಟಗಳಲ್ಲಿ ನಾನು ಪಾಲ್ಗೊಂಡಿದ್ದೆ. ನನಗೆ ಹೃದಯದ ಶಸ್ತ್ರಚಿಕಿತ್ಸೆಯಾಗಿರುವುದರಿಂದ ಈಗ ನಡೆಯುತ್ತಿರುವ ಹೋರಾಟದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಜಿಲ್ಲೆಯ ರೈತರಲ್ಲಿ ಕ್ಷಮೆಯಾಚಿಸುತ್ತೇನೆ ಎಂದು ಶಿವರಾಮೇಗೌಡ ಹೇಳಿದರು.
ಬಿಜೆಪಿ ಬಿಡುವ ಪ್ರಶ್ನೆಯಿಲ್ಲ: ಕೆಲ ದಿನಗಳಿಂದ ನಾನು ಕಾಂಗ್ರೆಸ್ ಸೇರ್ಪಡೆಯಾಗುತ್ತೇನೆ ಎಂದು ಸುಳ್ಳು ಸುದ್ದಿ ಪ್ರಸಾರವಾಗುತ್ತಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನನ್ನ ಸಂಬಂಧಿಯಾಗಿರುವುದರಿಂದ ನನ್ನ ಆರೋಗ್ಯ ವಿಚಾರಿಸಲು ಬಂದಿದ್ದರು. ಅದನ್ನು ಹೊರತುಪಡಿಸಿ ಯಾವುದೇ ರಾಜಕೀಯ ಚರ್ಚೆ ನಡೆಸಿಲ್ಲ. ಬಿಜೆಪಿ ಪಕ್ಷ ಬಿಡುವ ವಿಚಾರವಾಗಲಿ ಅಥವಾ ಕಾಂಗ್ರೆಸ್ ಸೇರುವ ಯೋಚನೆಗಳು ನನ್ನಲ್ಲಿ ಇಲ್ಲ ಎಂದು ಶಿವರಾಮೇಗೌಡ ಸ್ಪಷ್ಟಪಡಿಸಿದರು.
ನಾನು, ಸುರೇಶ್‌ಗೌಡ ಜತೆಯಾಗುತ್ತೇವೆ: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಮಾಜಿ ಪಿಎಂ ಎಚ್.ಡಿ.ದೇವೇಗೌಡರು, ಕೇಂದ್ರ ಸಚಿವ ಅಮಿತ್ ಷಾ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅಂತಹವರು ಒಂದಾದ ಮೇಲೆ ನನ್ನದು ಮತ್ತು ಸುರೇಶ್‌ಗೌಡದ್ದು ಯಾವ ಲೆಕ್ಕ. ನಾವಿಬ್ಬರು ಕಾಲಕ್ರಮೇಣ ಒಂದಾಗಲೇ ಬೇಕಾಗುತ್ತದೆ. ಈ ವಿಚಾರವಾಗಿ ಬೇರೆ ಚರ್ಚೆಯೇ ಇಲ್ಲ. ಮೈತ್ರಿ ಧರ್ಮ ಪಾಲನೆ ಮಾಡುತ್ತೇನೆ ಎಂದರು.
ಮುಖಂಡ ಎಲ್.ಎಸ್.ಚೇತನ್‌ಗೌಡ, ಟಿ.ಕೆ.ರಾಮೇಗೌಡ, ಹೇಮರಾಜು, ಸತ್ಯನ್, ಮಂಜುನಾಥ್, ರಮೇಶ್, ಚೇತನ್, ಚನ್ನಪ್ಪ ಸೇರಿದಂತೆ ಮತ್ತಿತರಿದ್ದರು.