

ಹಾಸನ: ಜೆಡಿಎಸ್ ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತಿದೆ. ಅವರ ಕುಟುಂಬದವರೇ ಅಭ್ಯರ್ಥಿಗಳಾಗಬೇಕು, ಅವರನ್ನು ಬಿಟ್ಟು ಬೇರೆ ಯಾರು ಸ್ಪರ್ಧಿಸುವಂತಿಲ್ಲವೇ? ಹಾಗಾದರೆ ಕಾರ್ಯಕರ್ತರು, ಮುಖಂಡರು ಏನು ಮಾಡಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ನಾಮಪತ್ರ ಸಲ್ಲಿಕೆ ಮಾಡಿದ ಬಳಿಕ ಸೋಮವಾರ ಮಧ್ಯಾಹ್ನ ಮೆರವಣಿಗೆಯಲ್ಲಿ ಪಾಲ್ಗೊಂಡು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರವನ್ನು ಕೆಡವಿದವರ ಜೊತೆಯಲ್ಲಿ ಕುಮಾರಸ್ವಾಮಿ ಮತ್ತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಈಗ ಮೈತ್ರಿ ಸರ್ಕಾರವನ್ನು ಕೆಡವಿದ್ದು ನಾವು ಎಂದು ಸುಳ್ಳು ಹೇಳುತ್ತಿದ್ದಾರೆ. ಕುಮಾರಸ್ವಾಮಿ ಸತ್ಯ ಹೇಳುತ್ತಿದ್ದಾರೆ ಅಥವಾ ನಾನು ಸತ್ಯ ಹೇಳುತ್ತೇನೆಯೇ ಎಂಬುದು ಹಾಸನದಲ್ಲೇ ನಿರ್ಧಾರವಾಗಲಿ. ಅವರು ಹಾಸನಕ್ಕೆ ಬಂದು ಹಾಸನಾಂಬ ದೇವಿಯ ಮೇಲೆ ಆಣೆ ಮಾಡಲಿ, ನಾನು ಬೇಕಾದರೆ ಪ್ರಮಾಣ ಮಾಡುತ್ತೇನೆ. ನಾವು ತಾಯಿಯ ಮಕ್ಕಳು. ಮೈತ್ರಿ ಸರ್ಕಾರ ಬೀಳಬಾರದು ಎಂದು ಬಾಂಬೆಗೆ ಹೋಗಿದ್ದವರನ್ನು ಕರೆತರಲು ನಾನು, ಜಿ.ಟಿ. ದೇವೇಗೌಡ, ಶಿವಲಿಂಗೇಗೌಡ ಹೋಗಿದ್ದೆವು. ಆದರೆ ಕುಮಾರಸ್ವಾಮಿ ಅಧಿಕಾರ ಉಳಿಸಿಕೊಳ್ಳದೆ ವಿದೇಶಕ್ಕೆ ಹೋಗಿದ್ದರು ಎಂದು ಟೀಕಿಸಿದರು
ಮೊಮ್ಮಗನನ್ನು ಹಾಸನದಿಂದ ನಿಲ್ಲಿಸಿದ್ದಾರೆ. ಅಳಿಯನನ್ನು ಬಿಜೆಪಿಯಿಂದ ಬೆಂಗಳೂರು ಗ್ರಾಮಾಂತರದಲ್ಲಿ ನಿಲ್ಲಿಸಿದ್ದಾರೆ. ಮಂಡ್ಯದಲ್ಲಿ ಮಗನನ್ನು ನಿಲ್ಲಿಸಿದ್ದಾರೆ. ಒಂದೇ ಕುಟುಂಬದಿಂದ ಮೂವರು ನಿಂತಿದ್ದಾರೆ. ಯಾರೂ ಕೂಡ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವುದಿಲ್ಲ. ಹಿಂದೆ ನನ್ನ ತಮ್ಮ ಡಿ.ಕೆ.ಸುರೇಶ್‌ಗೆ ವಿರುದ್ಧವೇ ಬಿಜೆಪಿ-ಜನತಾದಳವರು ಒಂದಾಗಿ ನಿಂತಿದ್ದರು. ಆದರೂ ಡಿ.ಕೆ.ಸುರೇಶ್ ಒಂದು ಲಕ್ಷ ಮತಗಳ ಅಂತರದಿಂದ ಗೆದ್ದರು. ನಮಗೆ ರಾಜಕೀಯ ಹೊಸದೇನಲ್ಲ. ಜೆಡಿಎಸ್ ಮತ್ತು ಅವರ ಅಳಿಯ ಶಕ್ತಿಶಾಲಿ ಆಗಿದ್ದರೆ ಅವರ ಪಕ್ಷದಿಂದಲೇ ನಿಲ್ಲಿಸುತ್ತಿದ್ದರು ಎಂದು ಟಾಂಗ್ ನೀಡಿದರು.
ಶ್ರೇಯಸ್ ಪಟೇಲ್ ಮೇಲೆ ತಾಯಿ ಹಾಸನಾಂಬೆ ದೇವಿ ಆಶೀರ್ವಾದ ಇದೆ. ಆತ ಒಂದು ಲಕ್ಷದ ಮತಗಳ ಅಂತರದಿಂದ ಗೆಲ್ಲುತ್ತಾನೆ. ಜಿಲ್ಲೆ ಮತ್ತು ರಾಜ್ಯದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರಿಗೆ ಮನವಿ ಮಾಡಿಕೊಳ್ಳುತ್ತೇನೆ, ಜೆಡಿಎಸ್‌ನವರು ನಮ್ಮನ್ನೇ ಬಿಡಲಿಲ್ಲ. ಇನ್ನು ನಿಮ್ಮನ್ನ ಬಿಡುತ್ತಾರೆಯೇ? ಚುನಾವಣೆ ಮುಗಿದ ಮೇಲೆ ನಿಮ್ಮ ಪರಿಸ್ಥಿತಿ ಏನಾಗುತ್ತದೆ ಎಂಬುದನ್ನು ನೋಡಿ. ಪ್ರೀತಂ ಗೌಡನ ನಿನ್ನನ್ನು ಬಿಡುವುದಿಲ್ಲ, ಸಮಾಧಿ ಮಾಡುತ್ತಾರೆ. ಅದೇ ರೀತಿ ಬಿಜೆಪಿಯ ಶಾಸಕರಾದ ಎಚ್.ಕೆ. ಸುರೇಶ್, ಸಿಮೆಂಟ್ ಮಂಜು ಹಾಗೂ ಕಡೂರಿನ ಬೆಳ್ಳಿ ಪ್ರಕಾಶ ಸಹ ಇರುವುದಿಲ್ಲ ಎಂದು ಲೇವಡಿ ಮಾಡಿದರು.
ಗೃಹಸ ಸಚಿವ ಜಿ.ಪರಮೇಶ್ವರ್ ಮಾತನಾಡಿ, ನಾವು ದೇಶದಲ್ಲಿ ಧರ್ಮ ಯುದ್ದಕ್ಕೆ ಕಾಲಿಡುತ್ತಿದ್ದೇವೆ. ಕಾಂಗ್ರೆಸ್ ಸರ್ವ ಧರ್ಮದಿಂದ ದೇಶವನ್ನು ಕಟ್ಟಿದೆ. ಆದರೆ ಇದೇ ಬಿಜೆಪಿ ಧರ್ಮ, ಜಾತಿ ಹೆಸರಿನಲ್ಲಿ ದೇಶವನ್ನು ಒಡೆಯುತ್ತಿ. ದೇಶಕ್ಕೆ ಅಂಬೇಡ್ಕರ್ ಸಂವಿಧಾನವನ್ನು ನೀಡಿದ್ದಾರೆ. ಆ ಸಂವಿಧಾನ, ಪ್ರಜಾಪ್ರಭುತ್ವ ಬದಲಾವಣೆ ಮಾಡಲು ನಿಂತಿರುವ ಬಿಜೆಪಿಗೆ ಜನರು ತಕ್ಕೆ ಪಾಠ ಕಲಿಸಿ ದೇಶವನ್ನು ಉಳಿಸಿಕೊಳ್ಳಬೇಕಾಗಿದೆ. ದೇಶ ಉಳಿಯಬೇಕಾದರೆ ಕಾಂಗ್ರೆಸ್ ಪಕ್ಷ ಗೆಲ್ಲಬೇಕು ಎಂದರು.
ಕಳೆದ 50 ವರ್ಷದಿಂದ ಜಿಲ್ಲೆಯಲ್ಲಿ ಒಂದು ಕುಟುಂಬ ರಾಜಕಾರಣ ಮಾಡುತ್ತಾ ಇದೆ. ಈ ಚುನಾವಣೆಯಲ್ಲಿ ಕುಟುಂಬ ರಾಜಕಾರಣ ಅಂತ್ಯವಾಗಬೇಕು. ಶ್ರೇಯಸ್‌ಪಟೇಲ್ ಅಧಿಕ ಮತಗಳಿಂದ ಗೆಲ್ಲಬೇಕು, ಬಡವರ, ರೈತರು, ಮಹಿಳೆಯರ ಪರವಾಗಿ ಕಾರ್ಯಕ್ರಮ ಕೊಟ್ಟು ನುಡಿದಂತೆ ನಾವು ನಡೆದಿದ್ದೇವೆ. ಇಡೀ ದೇಶದಲ್ಲಿ ಜನ ಬದಲಾವಣೆ ಬಯಸುತ್ತಿದ್ದಾರೆ. ಅದೇ ರೀತಿ ಹಾಸನ ಜಿಲ್ಲೆಯಲ್ಲೂ ಜನರು ಬದಲಾವಣೆ ಬಯಸುತ್ತಿದ್ದಾರೆ ಎಂದು ಹೇಳಿದರು.
ಜಿಲ್ಲೆಯ ಇತಿಹಾಸದಲ್ಲಿ ನಾಮಪತ್ರ ಸಲ್ಲಿಸಲು ಇಷ್ಟೊಂದು ಜನ ಆಗಮಿಸಿ ಆಶೀರ್ವಾದ ಯಾರಿಗೂ ಮಾಡಿಲ್ಲ. ಜಿಲ್ಲೆಗೆ ಉತ್ತಮ ಅಭ್ಯರ್ಥಿ ಶ್ರೇಯಸ್‌ಪಟೇಲ್ ಸಿಕ್ಕಿದ್ದಾರೆ. ಕಾಂಗ್ರೆಸ್ 30 ವರ್ಷದ ಹಿಂದೆ ಹಾಸನ ಜಿಲ್ಲೆಯಲ್ಲಿ ಗೆದ್ದು ಇತಿಹಾಸ ನಿರ್ಮಿಸಿತ್ತು. ಮತ್ತೆ ಅದೇ ಇತಿಹಾಸ ಹಾಸನಲ್ಲಿ ನಿರ್ಮಾಣ ಮಾಡಲು ಎಲ್ಲಾ ಮುಖಂಡರು, ಕಾರ್ಯಕರ್ತರು ಸಜ್ಜಾಗಬೇಕು. ಈ ಬಾರಿ ನಿಮ್ಮೆಲ್ಲರ ಆಶೀರ್ವಾದದಿಂದ ಶ್ರೇಯಸ್ ಪಟೇಲ್ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.