ಮೈತ್ರಿ- ಕಾರುಣ್ಯದ ಹೂರಣ ಶ್ರೀ ರಾಮಾಯಣ ದರ್ಶನಂ:ಡಾ. ನಿತ್ಯಾನಂದ ಶೆಟ್ಟಿ

ಮೈತ್ರಿ- ಕಾರುಣ್ಯದ ಹೂರಣ ಶ್ರೀ ರಾಮಾಯಣ ದರ್ಶನಂ:ಡಾ. ನಿತ್ಯಾನಂದ ಶೆಟ್ಟಿ
Published on

ಹಾಸನ: ಕುವೆಂಪು ಅವರು ಅತ್ಯಂತ ಶ್ರದ್ಧೆಯಿಂದ ಮೈತ್ರಿ ಹಾಗೂ ಕಾರುಣ್ಯದ ಬಗ್ಗೆ ಆಳವಾಗಿ ಧ್ಯಾನಿಸಿದ ಕೃತಿ ಶ್ರೀ ರಾಮಾಯಣ ದರ್ಶನಂ ಎಂದು ತುಮಕೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ನಿತ್ಯಾನಂದ ಶೆಟ್ಟಿ ಅಭಿಪ್ರಾಯಪಟ್ಟರು.
ಹಾಸನದ ಸಂಸ್ಕೃತ ಭವನದಲ್ಲಿ ಭಾನುವಾರ ನಡೆದ ಜಹೊನಾ ನೆನಪಿನ ಮಾಲಿಕೆ ಕಾರ್ಯಕ್ರಮದಲ್ಲಿ ‘ಮೈತ್ರಿ-ಕುವೆಂಪು ಕಾಣ್ಕೆ’ ಕುರಿತು ವಿಶೇಷ ಉಪನ್ಯಾಸದಲ್ಲಿ ಮಾತನಾಡಿದ ಅವರು, ನಮ್ಮ ನಾಡಿನ ಪರಂಪರೆಯಲ್ಲಿ ರಾಮಾಯಣ, ಮಹಾಭಾರತ, ಉಪನಿಷತ್ತುಗಳಲ್ಲಿರುವ ಮೈತ್ರಿಯ ಗುಣಗಳನ್ನು ಶಕ್ತವಾಗಿ ಗುರಾಣಿಯಂತೆ ಬಳಸಿಕೊಂಡರೆ ಅತಿ ಧರ್ಮೀಯ, ಮತಾಂಧ ಶಕ್ತಿಗಳಿಗೆ ಕಡಿವಾಣ ಹಾಕಬಹುದು. ಮೂಲ ರಾಮಾಯಣ ಹಾಗೂ ಕುವೆಂಪು ಅವರ ಶ್ರೀ ರಾಮಾಯಣ ದರ್ಶನದ ಆಶಯಗಳಲ್ಲಿ ಬಹಳಷ್ಟು ವ್ಯತ್ಯಾಸಗಳನ್ನು ಕಾಣಬಹುದಾಗಿದೆ. ಆ ವ್ಯತ್ಯಾಸ ಪ್ರಜ್ಞಾಪೂರ್ವಕವಾಗಿ ಜಗತ್ತಿಗೆ ಕುವೆಂಪು ಅವರು ನೀಡಿದ ಕಾಣ್ಕೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ಗಾಂಧೀವಾದದ ಪ್ರಭಾವದಿಂದ ಅಂಬೇಡ್ಕರ್ ಅವರ ವಿಚಾರಗಳು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪಡೆಯಬೇಕಾದ ಸ್ಥಾನ ಪಡೆಯಲಿಲ್ಲ. ಆದರೆ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯವು ಏನೆಲ್ಲಾ ಅಂತರಗಳಿದ್ದವು ಆ ಅಂತರಗಳಿಗೆ ಮೈತ್ರಿಯ, ಕಾರುಣ್ಯದ ಮಹಾ ಹೊದಿಕೆಯನ್ನು ತೊಡಿಸಿದ ಕಾರಣಕ್ಕೆ ವಿಶ್ವದ ಮಹತ್ವದ ಕೃತಿಯಾಗಿದೆ ಎಂದರು.
ಜ ಹೊ ನಾರಾಯಣಸ್ವಾಮಿ ಅವರ ಮಗಳು ಹಾಗೂ ಕವಯತ್ರಿ ಜ.ನಾ. ತೇಜಶ್ರೀ ಮಾತನಾಡಿ, ಜಹೊನಾ ಅವರ ನೆನಪಿನ ಮಾಲಿಕೆಯ ಐದನೇ ಕಾರ್ಯಕ್ರಮದಲ್ಲಿ ಪ್ರತಿ ಬಾರಿಯಂತೆ ಕುವೆಂಪು ಅವರ ಆಶಯಗಳನ್ನು ಕೇಂದ್ರವಾಗಿ ಇಟ್ಟುಕೊಂಡು ರೂಪಿಸಲಾಗುತ್ತಿದೆ. ಅದುವೇ ಜ ಹೊ ನಾ ಅವರಿಗೆ ಸರಿಯಾದ ನೆನಪಿನ ಅರ್ಪಣೆ ಎಂದು ಅಭಿಪ್ರಾಯಪಟ್ಟರು.
ರಾಮು ಮೈಸೂರು ಅವರ ನೆನಪಿನಲ್ಲಿ ರಾಮು ಕವನ ವಾಚನ ಹಾಗು ಮಾತುಕತೆಯಲ್ಲಿ ಭಾಗವಹಿಸಿದ ಎ. ರಾಮಮೂರ್ತಿ ಅವರು ಮಾತನಾಡಿ, ನಾಡು ಕಂಡ ಶ್ರೇಷ್ಠ ಕವಿಗಳಲ್ಲಿ ರಾಮು ಕೂಡ ಒಬ್ಬರು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಅಭಿಪ್ರಾಯಪಟ್ಟರಲ್ಲದೇ ರಾಮು ಅವರ ಕವನವನ್ನು ವಾಚಿಸಿದರು.
ಡಾ. ಭವ್ಯಾ ನವೀನ್ ಮಾತನಾಡಿ, ರಾಮು ಅವರು ಅಜ್ಞಾತವಾಗಿ ಉಳಿದುಬಿಡುವ ಆಯ್ಕೆ ಮಾಡಿಕೊಂಡಿದ್ದು ಒಂದು ಮಾದರಿ. ಅವರ ಕವಿತೆಗಳಲ್ಲಿ ಆ ಅಜ್ಞಾತವು ಸಾಮಾನ್ಯ ಕವಿತೆಗಳಿಗಿಂತ ಭಿನ್ನವಾದ ನೆಲೆಯನ್ನು ಕಾಣಬಹುದು ಎಂದ ಅವರು, ಜಹೊನಾ ಅವರ ಮನೆಯ ಹೆಸರಾದ ‘ಮಾನವ’ ನಾನು ಓದುವ ಕಾಲಕ್ಕೆ ಗಮನ ಸೆಳೆದಿತ್ತು. ನಂತರದ ದಿನಗಳಲ್ಲಿ ಸಾಹಿತ್ಯದ ಕಾರ್ಯಕ್ರಮ ಅಂತ ಓಡಾಡುವಾಗ ಸಿಗುತ್ತಿದ್ದರು. ಕಿರಿಯರನ್ನು ಪ್ರೋತ್ಸಾಹ ನೀಡುತ್ತಾ, ಸಮಕಾಲೀನರಿಗೆ ಹೆಗಲಾಗುತ್ತಾ ಇದ್ದ ಅವರ ನಡೆಯು ಇಂದಿಗೂ ನಮಗೆ ಮಾದರಿಯಾಗಬೇಕು ಎಂದರು.
ಕಾರ್ಯಕ್ರಮದ ಆರಂಭದಲ್ಲಿ ಪ್ರದೀಪ್ ಹಾಗು ಸೌಜನ್ಯಾ ಅವರು ಕುವೆಂಪು ಕೃತಿಗಳ ಆಧಾರಿತವಾಗಿ ನೀಡಿದ ರಂಗಾಭಿನಯ ಗಮನ ಸೆಳೆಯಿತು. ಡಾ ನಿತ್ಯಾಂನಂದ ಶೆಟ್ಟಿ ಅವರು ರಾಮು ಅವರ ಕವನ ವಾಚಿಸಿದರು.
ಕಾರ್ಯಕ್ರಮದಲ್ಲಿ ಕೃಪಾಕರ - ಸೇನಾನಿ ಸೇರಿದಂತೆ ಹಾಸನದ ಸಾಹಿತ್ಯ ಹಾಗು ವೈಚಾರಿಕ ಆಸಕ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net