ಮೈತ್ರಿ ಅಭ್ಯರ್ಥಿ ಪ್ರಜ್ವಲ್ ಪರ ಸ್ವರೂಪ್ ಮತಯಾಚನೆ

ಮೈತ್ರಿ ಅಭ್ಯರ್ಥಿ ಪ್ರಜ್ವಲ್ ಪರ ಸ್ವರೂಪ್ ಮತಯಾಚನೆ
Published on

ಹಾಸನ: ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರವಾಗಿ ಶಾಸಕ ಸ್ವರೂಪ್ ಪ್ರಕಾಶ್ ಗುರುವಾರ ಹಾಸನ ತಾಲೂಕಿನ ವಿವಿಧ ಭಾಗಗಳಲ್ಲಿ ಅಬ್ಬರದ ಪ್ರಚಾರ ನಡೆಸಿದರು.
ಹಾಸನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಹೂವಿನಹಳ್ಳಿ ಕಾವಲು, ಹರಳಹಳ್ಳಿ, ಕುಪ್ಪಳ್ಳಿ, ಹಂದಿನಕೆರೆ, ಹೂವಿನಹಳ್ಳಿ, ಕಿಂಡಿಪುರ ಕೊಪ್ಪಲು, ಹೊಸೂರು ಕೊಪ್ಪಲು, ಕಿಂಡಿಪುರ, ಹೊಸೂರು, ನಂಜದೇವರ ಕಾವಲು, ಕೋರಹಳ್ಳಿ, ಅಗಲಹಳ್ಳಿ, ಉದ್ದೂರು ಕೊಪ್ಪಲು, ಅಗಲಹಳ್ಳಿ ಕೊಪ್ಪಲು, ಉದ್ದೂರು, ಮಲ್ಲೇನಹಳ್ಳಿ, ಜನಿವಾರ, ಅರೆಕಲ್ಲು ಹೊಸಳ್ಳಿ ಸೇರಿದಂತೆ 30ಕ್ಕೂ ಹೆಚ್ಚು ಗ್ರಾಮಗಳಲ್ಲಿ ಪ್ರಜ್ವಲ್ ರೇವಣ್ಣ ಪರ ಮತಯಾಚನೆ ಮಾಡಿದರು.
ಮನೆ ಮನೆಗೆ ತೆರಳಿ ಕರಪತ್ರ ವಿತರಿಸುವ ಮೂಲಕ ಪ್ರಜ್ವಲ್ ರೇವಣ್ಣ ಪರ ಮತಯಾಚನೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಸ್ವರೂಪ್, ಏ.26ರಂದು ನಡೆಯಲಿರುವ ಲೋಕಸಭಾ ಚುನಾವಣೆ ಮತದಾನದ ಹಿನ್ನೆಲೆಯಲ್ಲಿ ಹೂವಿನಹಳ್ಳಿ ಕಾವಲಿನ ಸುತ್ತಮುತ್ತಲ ಗ್ರಾಮಗಳಲ್ಲಿ ಬಿಜೆಪಿ - ಜೆಡಿಎಸ್ ಮೈತ್ರಿ ಅಭ್ಯರ್ಥಿ ಪರ ಪ್ರಚಾರ ಆರಂಭಿಸಿದ್ದೇವೆ. ಜೆಡಿಎಸ್ ನಾಯಕರು ಹಾಸನ ಜಿಲ್ಲೆಯಲ್ಲಿ ಮಾಡಿರುವ ಕೆಲಸಗಳನ್ನು ಆಧರಿಸಿ ಜಿಲ್ಲೆಯ ಜನರ ಬಳಿ ಪ್ರಜ್ವಲ್ ಪರ ಮತ ಕೇಳುತ್ತಿದ್ದೇವೆ. ಉತ್ತಮ ಜನಸ್ಪಂದನೆ ವ್ಯಕ್ತವಾಗಿದ್ದು, ಈ ಬಾರಿ ಮತ್ತೆ ಪ್ರಜ್ವಲ್ ರೇವಣ್ಣ ಅವರು ಸಂಸದರಾಗಿ ಆಯ್ಕೆ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಕನಿಷ್ಠ 20 ಸಾವಿರಕ್ಕೂ ಅಧಿಕ ಮತಗಳನ್ನು ಹೆಚ್ಚುವರಿಯಾಗಿ ನೀಡಿ ಪ್ರಜ್ವಲ್ ರೇವಣ್ಣ ಅವರನ್ನು ಗೆಲ್ಲಿಸಲು ಪಣ ತೊಟ್ಟಿದ್ದೇವೆ. ಜಿಲ್ಲೆಯ ಜನರು ಕೂಡ ಪ್ರಜ್ವಲ್ ರೇವಣ್ಣ ಅವರ ಪರ ಒಲವು ತೋರಿದ್ದಾರೆ. ಈ ಬಾರಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರಿಗೆ ಮತದಾನ ಮಾಡಬೇಕು ಎಂದು ಮನವಿ ಮಾಡಿದರು.
ಈ ವೇಳೆ ಒಕ್ಕಲಿಗರ ಸಂಘದ ನಿರ್ದೇಶಕ ರಘು ಗೌಡ, ತಾ.ಪ. ಮಾಜಿ ಅಧ್ಯಕ್ಷ ಅಣ್ಣಪ್ಪ, ಆಗಲಹಳ್ಳಿ ಯೋಗೇಶ್, ಎತ್ತಿನಕಟ್ಟೆ ಬಾಲಕೃಷ್ಣ, ಉದ್ಯಮಿ ಮಂಜಣ್ಣ, ನಗರಸಭಾ ಸದಸ್ಯ ರಫೀಕ್, ಹೊಸೂರು ರಘು, ರವಿ, ಸೋಮು ಮಣಚನಹಳ್ಳಿ, ಸಂತೋಷ್ ಹಾಗೂ ಗ್ರಾಮಸ್ಥರು ಹಾಗೂ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net