

ಮೈಸೂರು: ‘ಪ್ಲಾಸ್ಟಿಕ್ ಮಾಲಿನ್ಯ ತಡೆ’ ಧ್ಯೇಯ ವಾಕ್ಯದಡಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಎರಡು ದಿನ ಆಯೋಜಿಸಿದ್ದ ಪರಿಸರ ಸ್ನೇಹಿ ‘ಮೈಗ್ರೀನ್-2023’ ವಸ್ತು ಪ್ರದರ್ಶನಕ್ಕೆ ಸಾರ್ವಜನಿಕರ ಮೆಚ್ಚುಗೆಯೊಂದಿಗೆ ಭಾನುವಾರ ತೆರೆ ಬಿತ್ತು.
ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಮೈಸೂರು ಕೇಂದ್ರ, ಮೈಸೂರು ಬಿಲ್ಡರ್ಸ್ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ವಸ್ತು ಪ್ರದರ್ಶನದಲ್ಲಿ ಪರಿಸರಕ್ಕೆ ಪೂರಕವಾದ ಕಟ್ಟಡ ನಿರ್ಮಾಣ, ವಾಹನ ಸೇರಿದಂತೆ ದಿನ ಬಳಕೆ ಪದಾರ್ಥಗಳ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.
ಪರಿಸರ ಸ್ನೇಹಿ ಕಟ್ಟಡ ನಿರ್ಮಾಣ ಪದಾರ್ಥಗಳು, ನವೀಕರಿಸಿದ ಉತ್ಪನ್ನಗಳು, ತಂತ್ರಜ್ಞಾನ, ಸಾವಯವ ಆಹಾರ ಪದಾರ್ಥಗಳು, ಪರಿಸರ ಸ್ನೇಹಿ ಜೀವನಶೈಲಿ ಅನುಕರಣೀಯ ಉತ್ಪನ್ನಗಳು ಗಮನ ಸೆಳೆದವು. ನವೀಕರಿಸಿದ ಮರದ ಉತ್ಪನ್ನಗಳು, ಪರಿಸರ ಸ್ನೇಹಿ ಕಟ್ಟಡ ತಂತ್ರಜ್ಞಾನ ಮತ್ತು ಉತ್ಪನ್ನಗಳು, ಸೋಲಾರ್ ವಾಟರ್ ಹೀಟರ್, ಸೋಲಾರ್ ಲೈಟ್‌ಗಳು, ಮೈಕೋಗ್ರಿಡ್ ಕುಡಿಯುವ ನೀರಿನ ಸಂಸ್ಕರಣೆಯ ವಿಧಾನಗಳು ಮತ್ತು ಉತ್ಪನ್ನಗಳು, ಕೊಳಚೆ ನೀರಿನಿಂದ ಸಂಸ್ಕರಿಸಿದ ಮತ್ತು ಮರು ಉಪಯೋಗ, ನವೀಕರಿಸಬಹುದಾದ ಇಂಧನ ಮೂಲಗಳ ಮಾಹಿತಿ, ಕರಕುಶಲ ವಸ್ತುಗಳು, ವಿದ್ಯುತ್‌ಚಾಲಿತ ವಾಹನ, ಸಸಿಗಳು, ಬೀಜಗಳು, ಸಾವಯವ ಆಹಾರ ಪದಾರ್ಥಗಳು, ಹಣ್ಣು ಮತ್ತು ತರಕಾರಿಗಳ ಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.