ಮೈಕ್ರೋ ಫೈನಾನ್ಸ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ರೈತರ ಪ್ರತಿಭಟನೆ

mysore
Published on

ಮೈಸೂರು: ಮೈಕ್ರೋ ಫೈನಾನ್ಸ್ ಹಾವಳಿ ಖಂಡಿಸಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಯಿತು.

ಮೈಕ್ರೋ ಫೈನಾನ್ಸ್ ಕಿರುಕುಳದಿಂದ ನಂಜನಗೂಡಿನಲ್ಲಿ ಇಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರದ ವಿರುದ್ಧ ವಿವಿಧ ಘೋಷಣೆ ಕೂಗಿದರು.

ಸಂಘದ ಅಧ್ಯಕ್ಷ ಹಳ್ಳಿಕೆರೆ ಹುಂಡಿ ಭಾಗ್ಯರಾಜ್ ಮಾತನಾಡಿ, ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ಮಿತಿಮೀರಿದೆ. ವಸೂಲಾತಿ ವೇಳೆ ನಿಯಮ ಪಾಲಿಸುತ್ತಿಲ್ಲ. ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದು, ರೈತರು ಮಹಿಳೆಯರು, ಯುವಕರು ಆತ್ಮಹತ್ಯೆ ಹಾದಿ ಹಿಡಿಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು

ಸಿಎಂ ತವರು ಜಿಲ್ಲೆಯಲ್ಲಿ ಎರಡು ಆತ್ಮಹತ್ಯೆಯ ಪ್ರಕರಣಗಳು ಸೋಮವಾರ ದಾಖಲಾಗಿವೆ. ಆದ್ದರಿಂದ ಲೋಕಸಭಾ ಸದಸ್ಯರು, ಮಂತ್ರಿಗಳು ಮೊದಲು ಕೇಂದ್ರ ಸರ್ಕಾರದ ಹಣಕಾಸು ಸಚಿವರೊಂದಿಗೆ ಚರ್ಚೆ ಮಾಡಿ ಮೈಕ್ರೋ ಫೈನಾನ್ಸ್‌ಗಳ ಮಿತಿಮೀರಿದ ವರ್ತನೆಗೆ ಕಡಿವಾಣ ಆಗಬೇಕು. ವಸೂಲಾತಿಗೆ ಸ್ಪಷ್ಟ ನಿಖರ ನಿಯಮ ರೂಪಿಸಬೇಕು ಎಂದು ಆಗ್ರಹಿಸಿದರು.

ನಿಯಮ ಉಲ್ಲಂಘಿಸುವ ಮೈಕ್ರೋ ಫೈನಾನ್ಸ್ ಕಂಪನಿಗಳನ್ನು ರಾಜ್ಯದಿಂದ ಗಡಿಪಾರು ಮಾಡುವ ನಿಯಮವನ್ನು ರೂಪಿಸಬೇಕು. ಇಲ್ಲವಾದರೆ ರೈತ ಸಂಘಟನೆಗಳು ಮೈಕ್ರೋ ಫೈನಾನ್ಸ್ ಕಂಪನಿಗಳ ಕಚೇರಿಗೆ ಬೀಗ ಜಡಿಯುವ ಚಳವಳಿ ನಡೆಸಲಿದೆ ಎಂದು ಎಚ್ಚರಿಸಿದರು.

ಸಂಘಟನೆಯ ಮುಖಂಡರಾದ ಕೆರೆಹುಂಡಿ ರಾಜಣ್ಣ, ಹತ್ತಳ್ಳಿ ಸ್ವಾಮಿ, ಬಿ.ಎ.ಶಿವಶಂಕರ್, ಹಾಡ್ಯ ರವಿ, ಎಂ ವಿ ಕೃಷ್ಣಪ್ಪ, ನಂಜನಗೂಡು ತಾಲೂಕು ಅಧ್ಯಕ್ಷ ಅಂಬಳೆ ಮಹದೇವಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಸುನಹಳ್ಳಿ ಮಂಜೇಶ್, ಜಿಲ್ಲಾ ಉಪಾಧ್ಯಕ್ಷ ಮುದ್ದಳ್ಳಿ ಚಿಕ್ಕ ಸ್ವಾಮಿ, ಸೇನಾಪತಿ ಹಳ್ಳಿ ಶಾಂತರಾಜು, ಬಿದರಳ್ಳಿ ಮಾದಪ್ಪ, ಬೆಳ್ತೂರು ನಂಜಪ್ಪ, ಅಂಬಳೆ ಶಾಂತಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net