

ಮೈಸೂರು: ನಾವು ನಿರಾಶರಾಗಬೇಕಿಲ್ಲ. ನಮ್ಮ ಪಕ್ಷಕ್ಕೆ ಉತ್ತಮ ಭವಿಷ್ಯ ಇದೆ. ಮೈಕೊಡವಿ ಹೋರಾಟ ಮಾಡೋಣ, ಪಕ್ಷ ಕಟ್ಟೋಣ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕರೆನೀಡಿದರು.
ಸಾ.ರಾ. ಸಭಾಂಗಣದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಜೆಡಿಎಸ್ ಕಾರ್ಯಕರ್ತರ, ಮುಖಂಡರ ಸಭೆಯಲ್ಲಿ ಮಾತನಾಡಿ, ಜೆಡಿಎಸ್‌ಗೆ ಪುಟಿದೇಳುವ, ಫಿನಿಕ್ಸ್ ಪಕ್ಷಿಯಂತೆ ಮೇಲೆದ್ದು ಬರುವ ಶಕ್ತಿ ಇದೆ. ಅನೇಕ ಸಂದರ್ಭದಲ್ಲಿ ಅದು ಸಾಬೀತಾಗಿದೆ. ಮಿತ್ರಪಕ್ಷ ಬಿಜೆಪಿ ಜತೆ ಸೇರಿ ಅಧಿಕಾರಕ್ಕೆ ಬಂದೇ ಬರುತ್ತವೆ ಎಂದು ಕಾರ್ಯಕರ್ತರಿಗೆ ವಿಶ್ವಾಸ ತುಂಬಿದರು.
ಪಕ್ಷ ಸಂಘಟನೆ ಚೆನ್ನಾಗಿದ್ದರೆ ನಾವು ಯಾವುದೇ ಚುನಾವಣೆ ಗೆಲ್ಲಬಹುದು. ಕಾರ್ಯಕರ್ತರ ಪರಿಶ್ರಮದಿಂದ ಪಕ್ಷ ಅನೇಕ ಯಶಸ್ಸು ಗಳಿಸಿದೆ. ಸದಸ್ಯತ್ವ ನೋಂದಣಿ ಸಮರೋಪಾದಿಯಲ್ಲಿ ಮಾಡುವ ಮೂಲಕ ಜಿಪಂ, ತಾಪಂ ಚುನಾವಣೆಗಳಿಗೆ ಈ ಜಿಲ್ಲೆಯಿಂದಲೇ ರಣಕಹಳೆ ಮೊಳಗಿಸೋಣ. ಜೆಡಿಎಸ್ ವ್ಯಕ್ತಿ ಆಧಾರಿತ ಪಕ್ಷವಲ್ಲ. ಕಾರ್ಯಕರ್ತರು, ರೈತರು ಕಟ್ಟಿರುವ ಪಕ್ಷ. ಎಚ್.ಡಿ.ದೇವೇಗೌಡರ ಶ್ರಮ, ದೂರದೃಷ್ಟಿಯಿಂದ ಪಕ್ಷ ಈಗಲೂ ಸಶಕ್ತವಾಗಿದೆ ಎಂದರು.
ಎಚ್.ಡಿ.ದೇವೇಗೌಡರು ಜಾತಿ, ಧರ್ಮ ಮೀರಿ ಅಂಬೇಡ್ಕರ್ ಆಶಯದಂತೆ ಎಲ್ಲ ಸಮಾಜದ ಮುಖಂಡರನ್ನು ಗುರುತಿಸಿ ದೊಡ್ಡ ನಾಯಕರನ್ನಾಗಿ ಬೆಳೆಸಿದರು. ಅದನ್ನು ಸ್ಮರಿಸಿಕೊಳ್ಳುವ ಹೃದಯ ವೈಶಾಲ್ಯತೆ ಅನೇಕರಿಗೆ ಇಲ್ಲ. ಅದರ ಬಗ್ಗೆ ನನಗೆ ಚಿಂತೆ ಇಲ್ಲ. ಆದರೆ, ಪಕ್ಷ ನಿಷ್ಠೆಯಿಂದ ಪಕ್ಷಕ್ಕಾಗಿ ದುಡಿಯುತ್ತಿರುವವರಿಗೆ ಮನ್ನಣೆ ಯಾವತ್ತೂ ಇದೆ ಎಂದು ನುಡಿದರು.
ರಾಜ್ಯದಲ್ಲಿ ಇರುವಂತಹ ಕೆಟ್ಟ ಸರ್ಕಾರವನ್ನು ನಾನು ಬೇರೆ ಯಾವ ರಾಜ್ಯದಲ್ಲೂ ನೋಡಿಲ್ಲ. ಐದು ಗ್ಯಾರಂಟಿ ಯೋಜನೆ ಕೊಟ್ಟು ಜನರ ಮೇಲೆ ಬರೆಯ ಮೇಲೆ ಬರೆ ಎಳೆಯುತ್ತಿದೆ. ಇಂದು ಮಧ್ಯರಾತ್ರಿಯಿಂದ ಬಸ್ ದರ ಶೇ.15ರಷ್ಟು ಜಾಸ್ತಿಯಾಗಲಿದೆ. ಕಾಂಗ್ರೆಸ್‌ಗೆ ಮಧ್ಯರಾತ್ರಿ ಎಂದರೆ ಬಹಳ ಇಷ್ಟ. ದರದ ಮೇಲೆ ದರ ಏರಿಸುತ್ತಾ ಹೋದರೆ 2000 ರೂ. ಕೊಡೋದು ದೊಡ್ಡ ವಿಷಯವೇ? ನಾನೇ ಸಿಎಂ ಆಗಿದ್ದಿದ್ದರೆ 2000 ರೂ. ಬದಲು 5000 ರೂ. ಕೊಡುತ್ತಿದ್ದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.
ರಾಜ್ಯ ಸರ್ಕಾರವು ಭ್ರಷ್ಟಾಚಾರದಲ್ಲಿ ಮುಳುಗಿದೆ. 5 ಕೋಟಿ ರೂ., 10 ಕೋಟಿ ರೂ. ಎಂದು ಒಂದೇ ಸಲ ಬಿಡುಗಡೆ ಮಾಡುತ್ತೇವೆ ಎಂದು ಹೇಳುತ್ತಾರೆ. ಆಮೇಲೆ 5 ಪರ್ಸೆಂಟ್, 10 ಪರ್ಸೆಂಟ್ ಡಿಮಾಂಡ್ ಮಾಡುತ್ತಿದ್ದಾರೆ. ಮುಸ್ಲಿಮರು ನಮ್ಮವರು ಎಂದು ಈ ಸರ್ಕಾರ ಹೇಳುತ್ತದೆ. ಆದರೆ, ಅದೇ ಮುಸ್ಲಿಂ ಗುತ್ತಿಗೆದಾರರಿಂದ ಸುಲಿಗೆ ಮಾಡುತ್ತಿದೆ. ಗುತ್ತಿಗೆದಾರನೊಬ್ಬ ದಯಾಮರಣ ಕೊಡಿ ಎಂದು ಸಿಎಂಗೆ ಪತ್ರ ಬರೆದಿದ್ದಾರೆ. ಇದಕ್ಕೆ ಏನು ಉತ್ತರ ಕೊಡುತ್ತೀರಿ ಸಿದ್ದರಾಮಯ್ಯನವರೇ? ಎಂದು ಪ್ರಶ್ನಿಸಿದರು.
ವಾಲ್ಮೀಕಿ ನಿಗಮದ ಚಂದ್ರಶೇಖರ್ ಎನ್ನುವ ಅಧಿಕಾರಿ ಆತ್ಮಹತ್ಯೆ ಮಾಡಿಕೊಳ್ಳದೆ ಇದ್ದಿದ್ದರೆ ಸಿಎಂ ರಾಮಾಯಣ ಬಯಲಿಗೆ ಬರುತ್ತಿರಲಿಲ್ಲ. ಅಧಿಕಾರಿಗಳು, ಗುತ್ತಿಗೆದಾರರು ನಿರಂತರವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರಾಜ್ಯದ ವಿವಿಧೆಡೆ ಬಾಣಂತಿಯರು ಆಸ್ಪತ್ರೆಯಲ್ಲೇ ಜೀವ ಕಳೆದುಕೊಳ್ಳುತ್ತಿದ್ದಾರೆ. ಸಿಎಂಗೆ ಕಿಂಚಿತ್ತಾದರೂ ದುಃಖ ಬೇಡವೇ ಎಂದು ಕಿಡಿಕಾರಿದರು.
ಕಿರುಕುಳಕ್ಕೆ ಹೆದರಬೇಡಿ: ಈ ಸರ್ಕಾರವು ಜೆಡಿಎಸ್ ಕಾರ್ಯಕರ್ತರು, ಮುಖಂಡರನ್ನು ಹೆದರಿಸಿ ಕಿರುಕುಳ ನೀಡುತ್ತಿದೆ. ನನಗೂ ಕಿರುಕುಳ ನೀಡುತ್ತಿದೆ. ಯಾರೂ ಹೆದರಬೇಡಿ. ನಿಮ್ಮ ಜತೆ ನಾನಿದ್ದೇನೆ. ನಿಮಗೆ ಕಿರುಕುಳ ನೀಡಿದರೆ ನನಗೆ ಕಿರುಕುಳ ನೀಡಿದಂತೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯರಾದ ಸಿ.ಎನ್.ಮಂಜೇಗೌಡ, ವಿವೇಕಾನಂದ, ಮಾಜಿ ಶಾಸಕರಾದ ಕೆ.ಮಹದೇವು, ಅಶ್ವಿನ್‌ಕುಮಾರ್, ಮುಖಂಡರಾದ ಪ್ರೇಮಕುಮಾರಿ, ಪ್ರೇಮಾಶಂಕರೇಗೌಡ, ಚೆಲುವೇಗೌಡ ಇತರರಿದ್ದರು.
ಜೆಡಿಎಸ್ ಕೋರ್ ಸಮಿತಿಯ ಅಧ್ಯಕ್ಷ, ಶಾಸಕ ಜಿ.ಟಿ.ದೇವೇಗೌಡ ಗೈರಾಗಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿದ ಎಚ್.ಡಿ.ಕುಮಾರಸ್ವಾಮಿ ಅವರು, ಜಿ.ಟಿ.ದೇವೇಗೌಡರು ಈ ಸಭೆಯಲ್ಲಿ ಇಲ್ಲದೆ ಇರಬಹುದು. ಆದರೆ, ಅವರ ಮನಸ್ಸು ಇಲ್ಲೇ ಇದೆ ಎನ್ನುವುದನ್ನು ನಾನು ಬಲ್ಲೆ. ನಮ್ಮ ಈ ಸಮಸ್ಯೆ ಬಗೆಹರಿಸಲಾಗದ ದೊಡ್ಡ ಸಮಸ್ಯೆಯಲ್ಲ. ಅದನ್ನು ನಾವು ಕೂತು ಬಗೆಹರಿಸಿಕೊಳ್ಳುತ್ತೇವೆ ಎಂದು ಹೇಳಿದರು.
ಜೆಡಿಎಸ್ ಒಂದು ಕುಟುಂಬ. ಮನೆ ಎಂದ ಮೇಲೆ ಸಣ್ಣಪುಟ್ಟ ಸಮಸ್ಯೆ ಇದ್ದೇ ಇರುತ್ತದೆ. ಅದನ್ನು ನಾವು ಸರಿ ಮಾಡಿಕೊಳ್ಳುತ್ತೇವೆ. ನಾವು ಸಂಘಟಿತವಾಗಿ ಕೆಲಸ ಮಾಡಬೇಕು. ಸದಸ್ಯತ್ವ ನೋಂದಣಿ ದೊಡ್ಡ ಪ್ರಮಾಣದಲ್ಲಿ ಮಾಡಬೇಕು ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಹೇಳಿದರು.
ಇನ್ನೂ 20-25 ವರ್ಷದ ನಂತರ ಯೋಚನೆ ಮಾಡಬೇಕಾದ ವಿಷಯವನ್ನು ಈಗಲೇ ಏಕೆ ಯೋಚನೆ ಮಾಡುತ್ತಿದ್ದೀರಿ. ಮೈಸೂರು ನಗರ, ಈ ಭಾಗಕ್ಕೆ ರಾಜಮನೆತನ ಕೊಟ್ಟಿರುವ ಕೊಡುಗೆಗಿಂತ ದೊಡ್ಡ ಕೊಡುಗೆ ನೀವು ಕೊಟ್ಟಿದ್ದೀರಾ? ಈ ವಿಷಯದ ಬಗ್ಗೆ ಸಂಕೋಚ ಬೇಡವೇ? ಅಸಹ್ಯ ಅನಿಸುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.
ಕಾಂಗ್ರೆಸ್ ಸರ್ಕಾರವು ಜನವಿರೋಧಿ ಕೆಲಸಗಳಲ್ಲೇ ನಿರಂತರವಾಗಿ ತೊಡಗಿದೆ. ಜನರ ಕಷ್ಟಕಾರ್ಪಣ್ಯಗಳಿಗೆ ಸ್ಪಂದನೆ ಮಾಡುತ್ತಿಲ್ಲ. ಬದಲಾಗಿ ಸಹಕಾರ ಸಂಸ್ಥೆಗಳಲ್ಲಿ ಅಧಿಕಾರ ದುರುಪಯೋಗ ಮಾಡಿಕೊಂಡು ವ್ಯವಸ್ಥೆಯನ್ನು ಹಾಳು ಮಾಡುತ್ತಿದೆ. ಇಂತಹ ಸರ್ಕಾರದ ವಿರುದ್ಧ ಜನರಿಗೆ ಆಕ್ರೋಶ ಇದೆ. ನಾವು ಜನಪರವಾಗಿ ದನಿಯೆತ್ತಿ ಹೋರಾಟ ನಡೆಸಬೇಕಿದೆ ಎಂದು ಶಾಸಕ ಜಿ.ಡಿ.ಹರೀಶ್‌ಗೌಡ ಹೇಳಿದರು.
ಮೈಸೂರು ಭಾಗದಲ್ಲಿ ಬೆಳೆಯಲಾಗುವ ತಂಬಾಕು ಖರೀದಿಗೆ ಕಂಪನಿಗಳು ನಿರ್ಲಕ್ಷ್ಯ ವಹಿಸಿದ್ದವು. ನಮ್ಮ ಪಕ್ಷದ ನಾಯಕರೆಲ್ಲರೂ ಸೇರಿ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ದೆಹಲಿಗೆ ತೆರಳಿ ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಹಾಗೂ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡಿ ಅಹವಾಲು ಸಲ್ಲಿಸಿದ್ದವು. ಅದರ ಫಲವಾಗಿ ಪ್ರತಿ ಕೆಜಿ ತಂಬಾಕಿಗೆ 240ರಿಂದ 260 ರೂ. ದರದಲ್ಲಿ ಖರೀದಿ ಮಾಡಲು ಕಂಪನಿಗಳು ಮುಂದೆ ಬಂದಿವೆ. ಇಂತಹ ಪ್ರಯತ್ನಗಳೊಂದಿಗೆ ಪಕ್ಷವನ್ನು ಕಟ್ಟೋಣ ಎಂದರು.