ಮೇಳೈಸಿದ ಹೆಣ್ಣು ಮಕ್ಕಳ ಕಲರವ

mysore
Published on

ಮೈಸೂರು: ಮಹಿಳಾ ದಿನಾಚರಣೆ ಅಂಗವಾಗಿ ರಾಮಕೃಷ್ಣನಗರದ ರಮಾಗೋವಿಂದ ಸಭಾಂಗಣದಲ್ಲಿ ಹೆಣ್ಣುಮಕ್ಕಳ ಕಲರವ ಮೇಳೈಸಿತ್ತು. ವನಿತೆಯರಿಂದಲೇ ತುಂಬಿದ್ದ ಕಾರ್ಯಕ್ರಮದಲ್ಲಿ ಹಬ್ಬದ ವಾತಾವರಣ ಗರಿಗೆದರಿತ್ತು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸೋಮವಾರ ಆಯೋಜಿಸಿದ್ದ ಸಾಹಿತ್ಯ-ಸಂಸ್ಕೃತಿ ಸಮ್ಮಿಲನ ಕಾರ್ಯಕ್ರಮ ಸ್ತ್ರೀಶಕ್ತಿ ನಮನಕ್ಕೆ ಮತ್ತು ಸಾಂಸ್ಕೃತಿಕ ಪ್ರತಿಭೆ ಅನಾವರಣಕ್ಕೆ ವೇದಿಕೆಯಾಯಿತು.

ಗೆಳತಿಯ ಮಹಿಳಾ ಮಂಡಳಿಯಿಂದ ಗೀತಗಾಯನ, ಸಮೂಹ ನೃತ್ಯ, ರೂಪಕ, ಕೋಲಾಟ, ಶಾರದಾದೇವಿ ಮಹಿಳಾ ಸಮಾಜದಿಂದ ಜಾನಪದ ನೃತ್ಯ, ಭಕ್ತಿ ನೃತ್ಯ ಪ್ರದರ್ಶನಗೊಂಡಿತು. ಸೀರೆಯಲ್ಲಿ ನೀರೆಯ ನಡಿಗೆ, ಏಕಪಾತ್ರಾಭಿನಯ, ಪದ್ಮಿನಿ ವಲ್ಲಭ ಭಜನಾ ಮಂಡಳಿಯಿಂದ ಸೆರಗಿನ ಮಹಿಮೆ ರೂಪಕ, ಸಮೂಹ ಗೀತೆ ಗಮನ ಸೆಳೆಯಿತು.

ಸುರಭಿ ಮಹಿಳಾ ಸಮಾಜದಿಂದ ಸಮೂಹ ನೃತ್ಯ, ಭರತನಾಟ್ಯ, ವೇದವ್ಯಾಸ ಸೇವಾ ಟ್ರಸ್ಟ್‌ನಿಂದ ಸಮೂಹ ನೃತ್ಯ, ಸಮೂಹ ಗೀತೆ ಸಭಿಕರನ್ನು ರಂಜಿಸಿತು.

ಸ್ವರ ರಾಗಾಲಯ ಸಂಗೀತ ಕೇಂದ್ರ, ಗಾಯತ್ರಿ ಮಹಿಳಾ ಸಮಾಜ, ಸ್ವರಾಂಜಲಿ ಭಜನಾ ಮಂಡಳಿ, ವಜ್ರಕವಚ ಭಜನಾ ಮಂಡಳಿ ಹೀಗೆ ವಿವಿಧ ಮಂಡಳಿಗಳಿಂದ ಸಮೂಹ ಗೀತ ಗಾಯನ ಕಳೆಗಟ್ಟಿತ್ತು. ಹಬ್ಬದ ದಿನಕ್ಕಾಗಿ ಅಲಂಕಾರಗೊಂಡಂತೆ ಆಗಮಿಸಿದ್ದ ಮಹಿಳಾಮಣಿಗಳು ಇಡೀ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗಿಯಾಗಿ ಸಂಭ್ರಮಿಸಿದ್ದು ವಿಶೇಷ ಎನಿಸಿತು. ಎಂ.ಕಾವ್ಯ ಅವರಿಂದ ಮಾತನಾಡುವ ಗೊಂಬೆ ಪ್ರದರ್ಶನ ಹಾಸ್ಯ ಹೊನಲು ಹರಿಸಿತು.

ಮಹಿಳಾ ಸಾಧಕಿಯರಾದ ಹರಿಪ್ರಸಾದ್, ಅನಸೂಯಮ್ಮ, ಪರಿಮಳಾ ಮೂರ್ತಿ, ವಿಜಯಾ ಹರನ್, ಸುಮತಿ ಸುಬ್ರಹ್ಮಣ್ಯ, ಬಿ.ಕೆ.ಮೀನಾಕ್ಷಿ ಅವರನ್ನು ಸನ್ಮಾನಿಸಲಾಯಿತು.

ಪ್ರಾಸ್ತಾವಿಕವಾಗಿ ಮಾತನಾಡಿ ಕಸಾಪ ಜಿಲ್ಲಾಧ್ಯಕ್ಷ ಮಡ್ಡಿಕೆರೆ ಗೋಪಾಲ್ ಅವರು, ಮಹಿಳೆ ಅಬಲೆ ಅಲ್ಲ, ಅವಳು ಪುರುಷರಿಗಿಂತ ಸಬಲೆ. ವನಿತೆಯರು ಎಲ್ಲ ಕ್ಷೇತ್ರಗಳಲ್ಲೂ ಹೆಜ್ಜೆ ಗುರುತು ಮೂಡಿಸುವ ಮೂಲಕ ಯಶಸ್ಸಿ ಗಳಿಸಿದ್ದಾರೆ. ಇದು ಆಕೆಯ ಶಕ್ತಿ, ಸಾಮರ್ಥ್ಯ ಮತ್ತು ಪ್ರತಿಭೆಗೆ ಸಾಕ್ಷಿ ಎಂದರು.

ವಿಜ್ಞಾನ ಲೇಖಕಿ ಡಾ.ಎಸ್.ಸುಧಾ ರಮೇಶ್, ಸಾಹಿತಿ ಡಾ.ಕೆ.ಲೀಲಾ ಪ್ರಕಾಶ್, ಪ.ಮಲ್ಲೇಶ್ ಪುತ್ರಿ ಸವಿತಾ, ವಿಜ್ಞಾನ ಲೇಖಕ ಎಸ್.ರಾಮಪ್ರಸಾದ್, ವಿಪ್ರ ಮುಖಂಡ ಡಾ.ಕೆ.ರಘುರಾಮ್ ವಾಜಪೇಯಿ, ಸ್ನೇಹ ಸಿಂಚನ ಟ್ರಸ್ಟ್‌ನ ಅಧ್ಯಕ್ಷೆ ಮ.ನ.ಲತಾಮೋಹನ್, ಕಸಾಪ ಮೈಸೂರು ಮಹಿಳಾ ಘಟಕದ ಅಧ್ಯಕ್ಷೆ ಡಾ.ರತ್ನಾ ಹಾಲಪ್ಪಗೌಡ, ಗೆಳತಿ ಮಹಿಳಾ ಮಂಡಳಿಯ ವಿಜಯಾ ಸುದರ್ಶನ್, ಸಮಾಜ ಸೇವಕಿ ಸುಶೀಲಾ ಶ್ಯಾಮಸುಂದರ್ ಇನ್ನಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net