ಮೇಳೈಸಿದ ವಿಶೇಷ ಮಕ್ಕಳ ಸಂಭ್ರಮ

21
Published on

ಮೈಸೂರು: ನಗರದ ದಸರಾ ವಸ್ತುಪ್ರದರ್ಶನದ ಪಿ.ಕಾಳಿಂಗರಾವ್ ಗಾನಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ಅಂಗವಿಕಲರ ದಿನಾಚರಣೆ ಕಾರ್ಯಕ್ರಮ ಕಳೆಗಟ್ಟಿತ್ತು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಅಂಗವಿಕಲರಿಗಾಗಿ ಸೇವೆ ಸಲ್ಲಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿಶೇಷ ಮಕ್ಕಳ ಸಾಂಸ್ಕೃತಿಕ ಕಲೆಗಳ ಪ್ರದರ್ಶನ ಕಣ್ಮನ ಸೆಳೆಯಿತು. ಇದರೊಂದಿಗೆ ಈ ಮಕ್ಕಳ ಸಂಭ್ರಮ ಇಲ್ಲಿ ಮೇಳೈಸಿತ್ತು.

ನಡೆಯಲಾಗದ ಮಕ್ಕಳು ವ್ಹೀಲ್‌ಚೇರ್‌ನಲ್ಲಿಯೇ ಕುಳಿತು ಹಾಡಿಗೆ ಮೈ ಕೈ ಕುಣಿಸಿದರೆ, ಅವರಿಗೆ ಪಾಲಕರು ಮತ್ತು ಶಿಕ್ಷಕಿಯರು ವ್ಹೀಲ್‌ಚೇರ್ ತಳ್ಳುತ್ತಾ ನೃತ್ಯಕ್ಕೆ ನೆರವು ನೀಡಿದರು. ಪ್ರಕೃತಿ ಸೊಬಗನ್ನು ಅಭಿವ್ಯಕ್ತಿಗೊಳಿಸಲು ಮಕ್ಕಳು ವಿಭಿನ್ನ ವೇಷತೊಟ್ಟು ವೇದಿಕೆಗೆ ಆಗಮಿಸಿ ಪರಿಸರ ಪ್ರೇಮ ಮೆರೆದರು. ಭರತನಾಟ್ಯ, ಫ್ಯೂಷನ್ ಸಂಗೀತಕ್ಕೆ ವಿಶೇಷ ಚಿಣ್ಣರು ಹೆಜ್ಜೆ ನರ್ತಿಸಿದರು.

ವಿವಿಧ ವಿಶೇಷ ಶಾಲೆಯ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು. ಅಲ್ಲದೆ, ಈ ಮಕ್ಕಳು ವೇಷಭೂಷಣ ಧರಿಸಿ ಚಲನಚಿತ್ರ ಗೀತೆಗಳು, ಭಾವಗೀತೆಗಳು, ಹಿಂದಿ ಚಿತ್ರಗೀತೆಗಳಿಗೆ ನೃತ್ಯ ಪ್ರದರ್ಶಿಸಿದರು.
ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮಾತನಾಡಿ, ಅಂಗವಿಕಲರಿಗೆ ಶೇ.5ರಷ್ಟು ಅನುದಾನ ಮೀಸಲಿಡಲಾಗಿದೆ. ಅದು ಅವರ ಕೆಲಸಗಳಿಗಾಗಿಯೇ ಬಳಕೆ ಮಾಡಬೇಕು. ಜತೆಗೆ, ಎಲ್ಲ ಅಂಗವಿಕಲರು ಸಹ ಅನುದಾನವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಈ ಬಾರಿ ಚುನಾವಣಾ ಆಯೋಗದಲ್ಲಿ ಅಂಗವಿಕಲರಿಗೆ ಸಾಲಿನಲ್ಲಿ ನಿಲ್ಲುವ ಪ್ರಕ್ರಿಯೆ ಇರುವುದಿಲ್ಲ. ನೇರವಾಗಿ ಹೋಗಿ ಮತದಾನ ಮಾಡಬಹುದು ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಬಿ.ಎಸ್.ಮಂಜುನಾಥಸ್ವಾಮಿ ಮಾತನಾಡಿ, ಕೆಲವು ದಿನಗಳ ಹಿಂದೆ ನಡೆದ ಸಾಂಸ್ಕೃತಿಕ ಹಾಗೂ ಕ್ರೀಡಾ ಕಾರ್ಯಕ್ರಮದಲ್ಲಿ ಅಂಗವಿಕಲ ಮಕ್ಕಳು ಭಾಗವಹಿಸಿ ನಮ್ಮಲ್ಲಿ ಯಾವುದೇ ರೀತಿಯ ಕೊರತೆ ಇಲ್ಲ ಅನ್ನುವುದನ್ನು ಆಟ ಆಡುವುದರ ಮೂಲಕ ತೋರಿಸಿ ಕೊಟ್ಟಿದ್ದರು ಎಂದು ತಿಳಿಸಿದರು.

ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸ್‌ಗೌಡ ಮಾತನಾಡಿ, ಅಂಗವಿಕಲರು ಸಹ ಯಾರಿಗಿಂತಲೂ ಕಡಿಮೆ ಇಲ್ಲ. ಈ ವಿಶೇಷರು ಸಹ ಸಾಧನೆ, ಗುರಿ ಮುಟ್ಟಬಹುದು. ಇಂತಹ ಅನೇಕ ಉದಾಹರಣೆಗಳು ದೊರೆಯುತ್ತವೆ ಎಂದರು. ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಆರ್.ಮಾಲಿನಿ, ಭೂಸೇನಾ ದಳದ ಅಧಿಕಾರಿ ಸುಬೇಧರ್ ಭಗತ್‌ಸಿಂಗ್ ಉಪಸ್ಥಿತರಿದ್ದರು.

ಎಲ್ಲರೂ ಗೈರು:
ಜನಪ್ರತಿನಿಧಿಗಳೆಲ್ಲ ಗೈರಾಗಿದ್ದರು. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಸಂಸದರು, ನಿಗಮ-ಮಂಡಳಿಯ, ಮೇಯರ್, ಉಪಮೇಯರ್ ಬಂದಿರಲಿಲ್ಲ. ಆಮಂತ್ರಣ ಪತ್ರಿಕೆಯಲ್ಲಿ 36 ಹೆಸರಿತ್ತು. ಈ ಪೈಕಿ ಡಿಸಿ, ಎಡಿಸಿ, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರನ್ನು ಹೊರತುಪಡಿಸಿ ಉಳಿದವರೆಲ್ಲರೂ ಗೈರಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net