

ಚಾಮರಾಜನಗರ: ತಾಲೂಕಿನ ಬದನಗುಪ್ಪೆ-ಪಣ್ಯದಹುಂಡಿ ಮೇಲ್ಸೇತುವೆಯ ಪ್ಲ್ಯಾನ್ ಅನ್ನು ಬದಲಾಯಿಸಬೇಕೆಂದು ರೈತ ಮುಖಂಡರು ಮತ್ತು ಗ್ರಾಮಸ್ಥರು ಅಧಿಕಾರಿಗಳಿಗೆ ಒತ್ತಾಯಿಸಿದರು.
ಪಣ್ಯದಹುಂಡಿ ಗ್ರಾಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ ಮತ್ತು ತಹಸೀಲ್ದಾರ್ ಗಿರಿಜಾ, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಗುರುವಾರ ಸಭೆ ನಡೆಯಿತು. ಸಭೆಯಲ್ಲಿ ರೈತರು ಮಾತನಾಡಿ, ಬದನಗುಪ್ಪೆ-ಪಣ್ಯದಹುಂಡಿ ರೈಲು ಹಳಿಯ ಮೇಲೆ ಸೇತುವೆ ನಿರ್ಮಾಣ ಮಾಡುವ ಯೋಜನೆಯಲ್ಲಿ ಮಾರ್ಪಾಡು ಮಾಡಬೇಕು. ಇಲ್ಲದಿದ್ದರೆ ಪಣ್ಯದಹುಂಡಿಯ ಗ್ರಾಮಸ್ಥರು ಬದನಗುಪ್ಪೆವರೆಗೂ ಬಂದು ಬಳಸಿಕೊಂಡು ಹೋಗಬೇಕಾಗಿದೆ. ಅಲ್ಲದೇ, ಪಣ್ಯದಹುಂಡಿ ಗ್ರಾಮದಲ್ಲಿ ಬಸ್ ನಿಲ್ದಾಣ ಮಾಡಬೇಕು. ಮೇಲ್ಸೇತುವೆ ನಿರ್ಮಾಣದ ಕುರಿತು ರೈತರಿಗೆ ಸರಿಯಾದ ಮಾಹಿತಿಯನ್ನೇ ನೀಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಸೇತುವೆ ನಿರ್ಮಾಣ ಸಂಬಂಧ ಭೂ ಸ್ವಾಧೀನ ಪ್ರಕ್ರಿಯೆ ಪಾದರ್ಶಕವಾಗಿ ನಡೆದಿಲ್ಲ. ಬದನಗುಪ್ಪೆ ಮತ್ತು ಪಣ್ಯದಹುಂಡಿ ಭೂಮಿ ಖರೀದಿ ದರದಲ್ಲಿ ವ್ಯತ್ಯಾಸವಿದೆ. ಇದರಿಂದ ಅಕ್ಕ-ಪಕ್ಕದ ಗ್ರಾಮಗಳ ರೈತರಿಗೆ ದರ ತಾರತಮ್ಯ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ರೈತರ ಮನವಿ ಆಲಿಸಿದ ಅಧಿಕಾರಿಗಳು ಮತ್ತೊಮ್ಮೆ ಸಭೆ ಕರೆಯುವುದಾಗಿ ತಿಳಿಸಿದರು.
ಸಭೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಬಸವಣ್ಣ, ಕುಮಾರ್, ವಿಜಯ ಕುಮಾರ, ಶಿವಲಿಂಗೇಗೌಡ, ಪಣ್ಯದಹುಂಡಿ ಚಿನ್ನಸ್ವಾಮಿ, ದೇವರಾಜು , ಮುರುಳಿ , ಬದನಗುಪ್ಪೆ ಗ್ರಾ.ಪಂ. ಅಧ್ಯಕ್ಷ ಮಲ್ಲೇಶ್, ಬಸವಣ್ಣ, ನಾಗರಾಜಮೂರ್ತಿ, ಕುಮಾರ, ಹೆಗ್ಗೋಠಾರದ ಮಾದಪ್ಪ, ನಾಗರಾಜಮೂರ್ತಿ ಇತರರು ಇದ್ದರು.