

ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕಕ್ಕೆ ಸಿಗಬೇಕಿರುವ ಮಹಾದಾಯಿ ನೀರು ನೀಡಲು ಅನಗತ್ಯ ಅಡ್ಡಿ ಮಾಡುತ್ತಿರುವ ಗೋವಾ ಸರ್ಕಾರದ ವಿರುದ್ಧ ಸರ್ವೋಚ್ವ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲಾಗುವುದು ಎಂದು ರೈತ ಸೇನಾ ಕರ್ನಾಟಕ ರಾಜ್ಯ ಅಧ್ಯಕ್ಷ ವೀರೇಶ ಸೊಬರದಮಠ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾದಾಯಿ (ಪಶ್ಚಿಮಘಟ್ಟ) ಅಭಯಾರಣ್ಯವನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಲು ಬಾಂಬೆ ಉಚ್ಚ ನ್ಯಾಯಾಲಯ ಗೋವಾ ಸರ್ಕಾರಕ್ಕೆ ಆದೇಶಿಸಿದೆ. ಇದರಿಂದ ರಾಜ್ಯಕ್ಕೆ ನೀರು ನೀಡುವ ಯೋಜನೆಗೆ ತಡೆಯಾಗಲಿದೆ. ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗುವುದು ಎಂದರು.
ಗೋವಾದಲ್ಲಿ ಸಾಕಷ್ಟು ನದಿಗಳಿವೆ. ಅಲ್ಲಿ ಹುಲಿಗಳಿವೆ. ಮಹಾದಾಯಿ ಅಭಯಾರಣ್ಯವನ್ನೇ ಟೈಗರ್ ಕಾರಿಡಾರ್ ಎಂದು ಘೋಷಿಸುವುದು ಸರಿಯಲ್ಲ. ಗೋವಾದಲ್ಲಿ ಅರಣ್ಯ ಸಂಪತ್ತು ನಾಶ ಮಾಡಿ ರೆಸಾರ್ಟ್ ನಿರ್ಮಿಸಿ ವಿದೇಶಿಯರಿಗಾಗಿ ಮೋಜು-ಮಸ್ತಿ ಚಟುವಟಿಕೆ ನಡೆಸುವುದರ ವಿರುದ್ಧವೂ ನ್ಯಾಯಾಲಯದಲ್ಲಿ ದೂರು ದಾಖಲಿಸುವ ಎಚ್ಚರಿಕೆ ನೀಡಿದರು.
ಈಗಾಗಲೇ ಸರ್ವೋಚ್ಚ ನ್ಯಾಯಾಲಯ ಕರ್ನಾಟಕದ ಪಾಲಿನ 5.5 ಟಿಎಂಸಿ ನೀರಿನ ಪೈಕಿ 3.9 ಟಿಎಂಸಿ ಕುಡಿಯುವ ನೀರು ಪೂರೈಸಲು ಆದೇಶಿಸಿದೆ. ಇದರ ವಿರುದ್ಧ ಬಾಂಬೆ ಉಚ್ಚ ನ್ಯಾಯಾಲಯ ಟೈಗರ್ ಕಾರಿಡಾರ್ ಘೋಷಣೆಗೆ ಆದೇಶ ನೀಡಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದ ಸೊಬರದಮಠ, ನ್ಯಾಯಾಧೀಕರಣದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಸುಮ್ಮನಿದ್ದ ಗೋವಾ ಸರ್ಕಾರ, ಈಗ ಕರ್ನಾಟಕದ ಪಾಲಿನ ನೀರು ನೀಡಲು ಅನಗತ್ಯ ಅಡ್ಡಿ ಮಾಡುತ್ತಿದೆ ಎಂದರು.
ನಗರದಲ್ಲಿನ ಕರ್ನಾಟಕ ನೀರಾವರಿ ನಿಗಮದ ಕಚೇರಿ ಎದುರು ಹಗರಣಗಳ ತನಿಖೆಗೆ ಆಗ್ರಹಿಸಿ ಆ.16ರಿಂದ ಅನಿರ್ದಿಷ್ಟ ಧರಣಿ ನಡೆಸಲಾಗುವುದು. ನಿಗಮದಲ್ಲಿ 16,000 ಕೋಟಿ ರೂ. ಅವ್ಯವಹಾರ ನಡೆದಿದ್ದು, ಪ್ರಸ್ತುತ ಲೋಕಾಯುಕ್ತ ತನಿಖೆ ನಡೆದಿದೆ. ಮಲಪ್ರಭಾ ಬಲದಂಡೆ 120 ಕಿ.ಮೀ. ಉದ್ದದ ಕಾಲುವೆ ನಿರ್ಮಾಣದಲ್ಲಿ 2186.30 ಕೋಟಿ ರೂ. ಮೊತ್ತದ ಯೋಜನೆಯಲ್ಲಿ ನಡೆದಿರುವ ಕುರಿತು ತನಿಖೆ ನಡೆಸಲು ಆಗ್ರಹಿಸಲಾಗುವುದು ಎಂದರು.
ಮಲ್ಲಣ್ಣ ಅಲೇಕಾರ, ಇತರರು ಇದ್ದರು.