ಮೇಲ್ದರ್ಜೆಗೇರದ ಪ್ರಾಥಮಿಕ ಆರೋಗ್ಯ ಕೇಂದ್ರ

Published on

ಹನೂರು: ಹನೂರು ತಾಲೂಕಾಗಿ ರಚನೆಯಾಗಿ 6 ವರ್ಷವೇ ಕಳೆದಿದೆ. ಆದರೆ ಕ್ಷೇತ್ರದ ಜನತೆಯ ಬಹು ನಿರೀಕ್ಷಿತ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸುವ ಕನಸು ನನಸಾಗದೆ ಉಳಿದಿದೆ. ಆದ್ದರಿಂದ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ಕಾರ್ಯವಾಗಬೇಕು ಎಂದು ಸಾರ್ವಜನಿಕರಿಂದ ಒತ್ತಾಯ ಕೇಳಿಬಂದಿದೆ.

ಜಿಲ್ಲೆಯಲ್ಲಿಯೇ ಹೆಚ್ಚು ವಿಸ್ತೀರ್ಣವನ್ನು ಹೊಂದಿರುವ ಹನೂರು ದೊಡ್ಡ ತಾಲೂಕಾಗಿದೆ. ಇಲ್ಲಿ ಸುಮಾರು 2.50 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆಯನ್ನು ಒಳಗೊಂಡಿದ್ದು, ಪಟ್ಟಣದಲ್ಲೇ ಸುಮಾರು 13 ಸಾವಿರ ಜನಸಂಖ್ಯೆ ಇದೆ. ತಾಲೂಕು ರಚನೆಯಾಗಿ 6 ವರ್ಷವೇ ಕಳೆದಿದೆ. ಆದರೆ ಕೇಂದ್ರಸ್ಥಾನದಲ್ಲಿ ಇರಬೇಕಾದ ತಾಲೂಕು ಆಸ್ಪತ್ರೆಯ ಬದಲಾಗಿ ಇನ್ನೂ ಗ್ರಾಮ ಮಟ್ಟದಲ್ಲಿಯೇ ಇರುವ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವಿದೆ. ಆದರೆ ಈ ಆಸ್ಪತ್ರೆಯಲ್ಲಿ ಅಗತ್ಯ ವೈದ್ಯ ಸಿಬ್ಬಂದಿ, ಕಟ್ಟಡ ಹಾಗೂ ಇನ್ನಿತರೆ ಮೂಲ ಸೌಕರ್ಯಗಳ ಕೊರತೆ ಇರುವುದರಿಂದ ಜನರಿಗೆ ಸಮರ್ಪಕವಾಗಿ ಆರೋಗ್ಯ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ತಾಲೂಕು ರಚನೆಯಾದಾಗಿನಿಂದಲೂ ಕ್ಷೇತ್ರದ ಜನತೆ ಈ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವಂತೆ ಒತ್ತಾಯಿಸುತ್ತಲೇ ಬಂದಿದ್ದಾರೆ. ಆದರೆ ಈವರೆಗೂ ಜನರ ಬೇಡಿಕೆಯ ಕನಸು ಈಡೇರಿಲ್ಲ.

ಪ್ರಾಥಮಿಕ ಚಿಕಿತ್ಸೆಗಷ್ಟೇ ಸೀಮಿತ

ಮಲೆಮಹದೇಶ್ವರ ಬೆಟ್ಟಕ್ಕೆ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಹನೂರು ಮ.ಬೆಟ್ಟದ ಮಾರ್ಗದಲ್ಲಿ ಅಪಘಾತ ಪ್ರಕರಣಗಳು ಹೆಚ್ಚುತ್ತಿದ್ದು, ಸಾವು, ನೋವುಗಳು ಸಂಭವಿಸುತ್ತಿದೆ. ಈ ವೇಳೆ ಜೀವವನ್ನು ಉಳಿಸಿಕೊಳ್ಳಬೇಕಾದರೆ ಗಾಯಾಳುಗಳನ್ನು ಹನೂರಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದರೆ ಪ್ರಾಥಮಿಕ ಚಿಕಿತ್ಸೆಯಷ್ಟೇ ದೊರೆಯುತ್ತದೆ. ಇದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಕಾಮಗೆರೆಯ ಖಾಸಗಿ ಆಸ್ಪತ್ರೆ ಇಲ್ಲವೇ ಕೊಳ್ಳೇಗಾಲ, ಚಾ.ನಗರ ಹಾಗೂ ಮೈಸೂರು ಆಸ್ಪತ್ರೆಗಳಿಗೆ ಕರೆದೊಯ್ಯಬೇಕಾಗಿದೆ. ಈ ವೇಳೆ ಮಾರ್ಗ ಮಧ್ಯದಲ್ಲಿ ಗಾಯಾಳುಗಳು ಮೃತಪಟ್ಟಿರುವ ಘಟನೆಗಳು ಸಹ ಜರುಗಿದೆ. ಹಾಗಾಗಿ ಸಮರ್ಪಕ ಆರೋಗ್ಯ ಸೇವೆ ಸಿಗಬೇಕಾದರೆ ಹನೂರಿನ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವುದು ಅಗತ್ಯವೂ ಅನಿವಾರ್ಯವೂ ಆಗಿದ್ದು, ಸಾರ್ವಜನಿಕರಿಂದ ಈ ಬಗ್ಗೆ ತೀವ್ರ ಒತ್ತಾಯ ಕೇಳಿ ಬಂದಿದೆ.

ಕಿರಿದಾದ ಕೊಠಡಿಯಲ್ಲೇ ಚಿಕಿತ್ಸೆ

ಪ್ರಸ್ತುತ ಇರುವ ಆಸ್ಪತ್ರೆಯಲ್ಲಿ ಹೆರಿಗೆಗೆ ಪ್ರತ್ಯೇಕ ಕಟ್ಟಡವಿದೆ. ಆದರೆ ಅಲ್ಲಿ ಅಗತ್ಯ ಮೂಲ ಸೌಕರ್ಯಗಳಿಲ್ಲ. ಇನ್ನೊಂದು ಕಟ್ಟಡದಲ್ಲಿ 2 ದೊಡ್ಡದಾದ ಹಾಲ್ ಇದ್ದು, ಆರೋಗ್ಯ ಸಂಬಂಧಿತ ತಪಾಸಣಾ ಶಿಬಿರ ಹಾಗೂ ಸಭೆಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದರ ಒಂದು ಕೊಠಡಿಯಲ್ಲಿ ತಾಲೂಕು ಆರೋಗ್ಯ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ಮುಖ್ಯವಾಗಿ ಆಗಮಿಸುವ ರೋಗಗಳಿಗೆ ಕಟ್ಟಡವೊಂದರಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದರಲ್ಲಿ ಸದ್ಯ ಆಸ್ಪತ್ರೆಯಲ್ಲಿ ಇರುವ ಒಬ್ಬರು ವೈದ್ಯರು ಚಿಕ್ಕದಾದ ಕೊಠಡಿಯಲ್ಲೇ ರೋಗಿಗಳನ್ನು ತಪಾಸಣೆ ನಡೆಸಲಾಗುತ್ತಿದ್ದು, ಅಲ್ಲಿಯೇ ಚುಚ್ಚುಮದ್ದು ಹಾಗೂ ಇನ್ನಿತರ ಚಿಕಿತ್ಸೆ ನೀಡಬೇಕಾದ ಅನಿವಾರ್ಯತೆ ಇದೆ. ಜತೆಗೆ ತುರ್ತು ಚಿಕಿತ್ಸೆ ಹಾಗೂ ಒಳರೋಗಿಗಳಿಗೆ ಚಿಕಿತ್ಸೆ ನೀಡಲು ಕೊಠಡಿಯೊಂದರಲ್ಲಿ 4 ಹಾಸಿಗೆಗಳನ್ನು ಮಾತ್ರ ಇರಿಸಲಾಗಿದೆ. ಇನ್ನು ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಸ್ಥಳಾವಕಾಶ ಇಲ್ಲದ ಕಾರಣ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆಯರನ್ನು ನೆಲದ ಮೇಲೆಯೇ ಮಲಗಿಸಬೇಕಾದ ಸ್ಥಿತಿ ಇದೆ. ಹಾಗಾಗಿ ಈ ಆಸ್ಪತ್ರೆಯಲ್ಲಿ ಮೂಲ ಸೌಕರ್ಯ ಇಲ್ಲವಾಗಿದೆ.

ಆರೋಗ್ಯ ಸೇವೆ ಅಷ್ಟಕ್ಕಷ್ಟೇ:

ತಾಲೂಕಿನಲ್ಲಿ ಸುಮಾರು 300ಕ್ಕೂ ಹೆಚ್ಚು ಗ್ರಾಮಗಳಿದ್ದು, ಹನೂರು ಸೇರಿದಂತೆ ಲೊಕ್ಕನಹಳ್ಳಿ, ಒಡೆಯರಪಾಳ್ಯ, ಪಿ.ಜಿ ಪಾಳ್ಯ, ಲೊಕ್ಕನಹಳ್ಳಿ, ಬಂಡಳ್ಳಿ, ರಾಮಾಪುರ, ಕೂಡಲೂರು, ಮಿಣ್ಯಂ, ಮಾರ್ಟಳ್ಳಿ, ಮಲೆ ಮಹದೇಶ್ವರ ಬೆಟ್ಟ, ಕೌದಳ್ಳಿ, ಪೊನ್ನಾಚಿ ಸೇರಿದಂತೆ 13 ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಇದರ ವ್ಯಾಪ್ತಿಯಲ್ಲಿ 32 ಉಪ ಆರೋಗ್ಯ ಕೇಂದ್ರಗಳಿವೆ. ಆದರೆ ಅಗತ್ಯ ಸಿಬ್ಬಂದಿ ಹಾಗೂ ಮೂಲ ಸೌಕರ್ಯ ಕೊರತೆಯಿಂದ ಆರೋಗ್ಯ ಸೇವೆ ಅಷ್ಟಕ್ಕಷ್ಟೇ. ಇದರಿಂದ ಜನರು ಹೈರಾಣರಾಗಿದ್ದಾರೆ. ಹಾಗಾಗಿ ಹನೂರಿನಲ್ಲಿನ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿದರೆ ಜನರಿಗೆ ಅನುಕೂಲವಾಗಲಿದೆ.

ಭರವಸೆ ನೀಡಿದ್ದ ಹಿಂದಿನ ಸಿಎಂ ಕ್ಷೇತ್ರದ ಹಿಂದಿನ ಶಾಸಕ ಆರ್.ನರೇಂದ್ರ ಅವರು ಹನೂರಿನ ಆಸ್ಪತ್ರೆಯನ್ನು 100 ಹಾಸಿಗೆಯುಳ್ಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದರು. 2022, ಡಿ.13 ರಂದು ಹನೂರಿನಲ್ಲಿ ಆಯೋಜಿಸಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಸಮಾರಂಭದಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹನೂರು ಹಾಗೂ ಯಳಂದೂರಿನ ಆಸ್ಪತ್ರೆಯನ್ನು 100 ಹಾಸಿಗೆಯುಳ್ಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವುದಾಗಿ ಭರವಸೆ ನೀಡಿದ್ದರು. ಇದರಿಂದ ತಾಲೂಕಿನ ಜನತೆ ಕೊಂಚ ನಿಟ್ಟುಸಿರು ಬಿಟ್ಟಿದ್ದರು. ಆದರೆ ಇದರಲ್ಲಿ ಕಳೆದ ತಿಂಗಳು ಯಳಂದೂರು ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಕಾರ್ಯವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಂಕುಸ್ಥಾನೆ ನೆರವೇರಿಸಿದರು. ಆದರೆ ಹನೂರಿಗೆ ಮಾತ್ರ ಈ ಭಾಗ್ಯ ಕೂಡಿ ಬರಲಿಲ್ಲ. ಇದರಿಂದ ಕ್ಷೇತ್ರದ ಜನರಲ್ಲಿ ನಿರಾಸೆ ಉಂಟು ಮಾಡಿದೆ. ಆದ್ದರಿಂದ ಜನವರಿ ತಿಂಗಳ 2ನೇ ವಾರದಲ್ಲಿ ಮ.ಬೆಟ್ಟದಲ್ಲಿ ನಡೆಯುವ ಕ್ಯಾಬಿನೆಟ್ ಸಭೆಯಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಹನೂರಿನ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಅಗತ್ಯತೆಯನ್ನು ಗಮನಕ್ಕೆ ತರುವುದರ ಮೂಲಕ ಜಾರಿಗೆ ತರುವ ಕಾರ್ಯವಾಗಬೇಕು ಎಂದು ಕ್ಷೇತ್ರದ ಜನತೆ ಒತ್ತಾಯಿಸಿದ್ದಾರೆ.

ಹನೂರು ತಾಲೂಕು ಹೆಸರಿಗಷ್ಟೇ ಸೀಮಿತ. ಹೆಚ್ಚು ಗ್ರಾಮೀಣ ಪ್ರದೇಶದಿಂದ ಕೂಡಿರುವ ಇಲ್ಲಿ ತಾಲೂಕು ಆಸ್ಪತ್ರೆ ಇಲ್ಲ. ಇದರಿಂದ ಚಿಕಿತ್ಸೆಗಾಗಿ ಇತರೆಡೆಗೆ ತೆರಳಬೇಕಾದ ಸ್ಥಿತಿ ಇದೆ. ಬಡವರು ತುಂಬ ತೊಂದರೆ ಅನುಭವಿಸುತ್ತಿದ್ದಾರೆ. ಹಾಗಾಗಿ ಉತ್ತಮ ಆರೋಗ್ಯ ಸೇವೆ ಸಿಗುತ್ತಿಲ್ಲ. ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವುದಾಗಿ ಹಿಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರು ಭರವಸೆ ನೀಡಿದ್ದರು. ಆದರೆ ಈ ಕಾರ್ಯವಾಗಲಿಲ್ಲ. ಆದ್ದರಿಂದ ಮ.ಬೆಟ್ಟದಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಹನೂರು ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವುದರ ಮೂಲಕ ಜನರಿಗೆ ಅನುಕೂಲ ಕಲ್ಪಿಸಬೇಕಿದೆ. ಸುದೇಶ್, ಪಪಂ ಸದಸ್ಯ ಹನೂರು ಹನೂರು ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಸಂಬಂಧ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಈ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ. ಜತೆಗೆ ಮ.ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಯುವ ಹಿನ್ನೆಲೆ ಈ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಕುರಿತು ಪ್ರಥಮ ಆದ್ಯತೆ ನೀಡಿ ಜಿಲ್ಲಾಡಳಿತಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಬಹುಶಃ ಅನುಮೋದನೆಯಾಗುವ ನಿರೀಕ್ಷೆಯಲ್ಲಿದ್ದೇವೆ. ಡಾ. ಚಿದಂಬರಂ ಡಿಎಚ್‌ಒ ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net