ಮೇಲ್ಜಾತಿಗಳ ವಿರೋಧಕ್ಕೆ ಮಣಿಯದೆ ಜಾತಿಗಣತಿ ಜಾರಿಗೊಳಿಸಲಿ

VV DIGITAL
Published on

 ಮೈಸೂರು: ಜಾತಿ ಜನಗಣತಿ ವರದಿ ಅನುಷ್ಠಾನ ಸಂಬಂಧ ರಾಜ್ಯ ಸರ್ಕಾರ ಮೇಲ್ಜಾತಿಗಳ ವಿರೋಧಕ್ಕೆ ಮಣಿಯದೇ ಅನುಷ್ಠಾನಕ್ಕೆ ತರಬೇಕು ಎಂದು ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಎನ್.ಭಾಸ್ಕರ್ ಆಗ್ರಹಿಸಿದ್ದಾರೆ

ಈ ವರೆಗೆ ಜನಸಂಖ್ಯೆಯಲ್ಲಿ ಬಲಾಢ್ಯರೆಂದು ಬಿಂಬಿಸಿಕೊಂಡ ಒಕ್ಕಲಿಗ ಮತ್ತು ಲಿಂಗಾಯತ ಜಾತಿಗಳು ಎಲ್ಲ ಅಧಿಕಾರವನ್ನು ಅನುಭವಿಸುತ್ತ ಬಂದಿವೆ. ಜಾತಿ ಜನಗಣತಿಯಲ್ಲಿ ಅವರ ನಿಜ ಸ್ವರೂಪ ಬಯಲಾಗುತ್ತಿದ್ದಂತೆಯೇ ಪ್ರಬಲ ವಿರೋಧಕ್ಕೆ ಮುಂದಾಗಿದ್ದಾರೆ. ಈ ವಿರೋಧಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಣೆ ಹಾಕಬಾರದು. ಅಹಿಂದ ಜನಗಳ ಹಿತಕ್ಕಾಗಿ ಈ ವರದಿಯನ್ನು ಅನುಷ್ಠಾನ ಮಾಡಬೇಕು ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ

10 ವರ್ಷಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಚ್.ಕಾಂತರಾಜು ಆಯೋಗವನ್ನು ರಚಿಸಿ ಅಂದಾಜು 160 ಕೋಟಿ ರೂ. ಹಣವನ್ನು ವಿನಿಯೋಗಿಸಿ ಈ ಸಮೀಕ್ಷೆ ಮಾಡಿಸಲಾಗಿದೆ. ಸಾವಿರಾರು ಶಿಕ್ಷಕರು ಮನೆ ಮನೆಗೆ ತೆರಳಿ ನಿಖರವಾದ ದತ್ತಾಂಶ ಸಂಗ್ರಹಿಸಿದ್ದಾರೆ. ಈ ವರೆಗೆ ನಡೆದಿರುವ ಜನಗಣತಿಯಲ್ಲಿ ಶೇ.100 ಸಮೀಕ್ಷೆ ಸಾಧ್ಯವಾಗಿಲ್ಲ ಎಂಬುದನ್ನು ದಾಖಲೆಗಳು ಹೇಳುತ್ತಿವೆ. ಇದನ್ನು ಒಪ್ಪದ ಮನಸ್ಸುಗಳು ವಿರೋಧಿಸುತ್ತಿವೆ ಎಂದು ತಿಳಿಸಿದ್ದಾರೆ.

ಮೇ 2ರಂದು ನಡೆಯವ ಸಚಿವ ಸಂಪುಟ ಸಭೆಯಲ್ಲಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವರದಿಯನ್ನು ಸ್ವೀಕರಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು. ರಾಜಕೀಯ ಕಾರಣಕ್ಕೆ ಈ ವರದಿಯನ್ನು ವಿರೋಧಿಸುವುದನ್ನು ಬಿಜೆಪಿ ಮತ್ತು ಜೆಡಿಎಸ್ ನಾಯಕರು ನಿಲ್ಲಿಸಬೇಕೆಂದು ಆಗ್ರಹಿಸಿದ್ದಾರೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜಾತಿಯೊಳಗೆ ಒಳ ಮೀಸಲಾತಿ ಕಲ್ಪಿಸುವ ಸಂಬಂಧ ಸರ್ಕಾರ ಈಗಾಗಲೇ ಮಹತ್ವದ ತೀರ್ಮಾನ ಮಾಡಿದೆ. ಎಲ್ಲ ಜಾತಿಯ ಜನರಿಗೂ ನ್ಯಾಯ ಕಲ್ಪಿಸಲು ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಏಕಸದಸ್ಯತ್ವ ಆಯೋಗ ರಚಿಸಿ, ಮತ್ತೊಮ್ಮೆ ಎಸ್‌ಸಿ-ಎಸ್‌ಟಿ ಕುಟುಂಬಗಳ ಸಮೀಕ್ಷೆ ಮುಂದಾಗಿರುವುದು ಸಾಮಾಜಿಕ ನ್ಯಾಯಕ್ಕೆ ಬದ್ಧರಾಗಿರುವ ಸರ್ಕಾರದ ಐತಿಹಾಸಿಕ ತೀರ್ಮಾನವಾಗಿದೆ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net