

ಮೇಲುಕೋಟೆ: ಏ.7ರಂದು ರಾತ್ರಿ ಜರುಗಲಿರುವ ಚೆಲುವನಾರಾಯಣಸ್ವಾಮಿ ವೈರಮುಡಿ ಉತ್ಸವವನ್ನು ವೈಭವಯುತವಾಗಿ ನಡೆಸಲು ಸರ್ಕಾರ 10 ಕೋಟಿ ರೂ. ಮಂಜೂರು ಮಾಡಿದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು.
ಮೇಲುಕೋಟೆಯಲ್ಲಿ ಆಯೋಜಿಸಿದ್ದ ಅಧಿಕಾರಿಗಳ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿ, ವೈರಮುಡಿ ಬ್ರಹ್ಮೋತ್ಸವ ಕಾರ್ಯಕ್ರಮಗಳು ಮಾ.31ರ ಮೊದಲ ತೆಪ್ಪೋತ್ಸವದಿಂದ ಆರಂಭವಾಗಿ ಏ.14ರವರೆಗೆ ನಡೆಯಲಿದೆ. ಬ್ರಹ್ಮೋತ್ಸವದ ವಿಶೇಷ ಆಚರಣೆಗಾಗಿ ಸರ್ಕಾರ 10 ಕೋಟಿ ರೂ. ಅನುದಾನ ನೀಡಿದೆ. ಜಾತ್ರಾ ಮಹೋತ್ಸವ ವ್ಯವಸ್ಥೆಗೆ 1.50 ಕೋಟಿ ರೂ. ಮಾತ್ರ ಬಳಸಿ ಉಳಿದ ಅನುದಾನವನ್ನು ಮೂಲಸೌಕರ್ಯ ಅಭಿವೃದ್ಧಿಗೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ದಿವ್ಯಕ್ಷೇತ್ರದ ಅಭಿವೃದ್ಧಿಗೆ ದಾನಿಗಳು ಸಹ ಮುಂದೆ ಬಂದಿದ್ದಾರೆ. ಮೇಲುಕೋಟೆ ಅಭಿವೃದ್ಧಿಗೆ ಈಗಾಗಲೇ ಯೋಜನೆ ಸಿದ್ಧಪಡಿಸಲಾಗಿದೆ. ಜಾತ್ರಾ ಮಹೋತ್ಸವ ಮುಗಿಯುತ್ತಿದ್ದಂತೆ ಮತ್ತೊಮ್ಮೆ ಕೈಂಕರ್ಯಪರರ ಸಭೆ ಕರೆದು ಯೋಜನೆಯ ರೂಪುರೇಷೆ ಬಗ್ಗೆ ಚರ್ಚಿಸಿ ಅಭಿವೃದ್ಧಿ ಕಾರ್ಯಗಳನ್ನು ಆರಂಭಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ವೈರಮುಡಿ ಹಾಗೂ ರಥೋತ್ಸವ ವೇಳೆ ನೂಕುನುಗ್ಗಲು ನಿಯಂತ್ರಿಸಲು ಪೊಲೀಸರು ಅಗತ್ಯ ಕ್ರಮವಹಿಸಬೇಕು. ರಾಜಬೀದಿಯಲ್ಲಿ ತೆರೆದ ಚರಂಡಿಗಳಿದ್ದು ವೈರಮುಡಿ ದರ್ಶನದ ವೇಳೆ ಭಕ್ತರು ಚರಂಡಿಯಲ್ಲಿ ಬೀಳುತ್ತಾರೆ. ನಾನೂ ಚರಂಡಿಯಲ್ಲಿ ಬಿದ್ದಿದ್ದೆ. ನನ್ನ ವಾಚ್ ಕಾಣೆಯಾಗಿತ್ತು ಎಂದು ನೆನಪು ಮೆಲುಕು ಹಾಕಿದರು.
ಈ ವರ್ಷ ಇಂತಹ ಅವ್ಯವಸ್ಥೆ ಮರುಕಳಿಸಬಾರದು. ಉತ್ಸವ ಬೀದಿಗಳಲ್ಲಿರುವ ತೆರೆದ ಚರಂಡಿಗಳ ಮೇಲ್ಭಾಗ ತಾತ್ಕಾಲಿಕವಾಗಿ ಮುಚ್ಚುವ ಕೆಲಸವನ್ನು ಗ್ರಾಮ ಪಂಚಾಯಿತಿ ಮತ್ತು ನಿರ್ಮಿತಿ ಕೆಂದ್ರ ಮಾ.31ರೊಳಗೆ ಮಾಡಬೇಕು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಜಿಲ್ಲಾ ಕೇಂದ್ರ ಮತ್ತು ಇತರ ನಗರಗಳಿಂದ ಕಳೆದ ಬಾರಿಗಿಂತ ಹೆಚ್ಚು ವಿಶೇಷ ಬಸ್ ವ್ಯವಸ್ಥೆ ಮಾಡಬೇಕು. ಕಲ್ಯಾಣಿಯಲ್ಲಿ ಸ್ನಾನ ಮಾಡುವ ಭಕ್ತರ ಸುರಕ್ಷತೆಗಾಗಿ ಎರಡು ಮೆಟ್ಟಿಲು ನಂತರ ನಿಯಂತ್ರಣ ಬಲೆ ಅಳವಡಿಸಿ ಎಂದರು.
ವಿಶೇಷ ದೀಪಾಲಂಕಾರ ಮಾಡಿ: ಊರಿಗೆಲ್ಲ್ಲ ಆಕರ್ಷಕ ದೀಪಾಲಂಕಾರ ಮಾಡಿದರೂ ವೈರಮುಡಿ ಉತ್ಸವ ನಡೆಯುವ ಉತ್ಸವ ಬೀದಿಗಳಿಗೆ ದೀಪಾಲಂಕಾರ ಇರುವುದಿಲ್ಲ. ಈ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಸ್ಥಳೀಯರು, ದೇವಾಲಯದ ಕೈಂಕರ್ಯಪರರ ಸಲಹೆಯಂತೆ ಉತ್ಸವ ಬೀದಿಗೆ ವಿಶೇಷ ದೀಪಾಲಂಕಾರ ಮಾಡಬೇಕು ಎಂದು ದೀಪಾಲಂಕಾರ ಗುತ್ತಿಗೆದಾರನಿಗೆ ಶಾಸಕರು ಖಡಕ್ ಸೂಚನೆ ನೀಡಿದರು.
ಕಳೆದ ಬಾರಿ ವೈರಮುಡಿ ಜಾತ್ರಾ ಮಹೋತ್ಸವದಲ್ಲಿ ಸಮರ್ಪಕವಾದ ಸ್ವಚ್ಛತೆ ಇಲ್ಲದಿರುವುದನ್ನು ಗಮಿಸಿದ್ದೇನೆ. ಹೆಚ್ಚು ಪೌರಕಾರ್ಮಿಕರನ್ನು ನಿಯೋಜಿಸಿಕೊಂಡು ಕಸಸಾಗಣೆಗೆ ಹೆಚ್ಚವರಿ ವ್ಯವಸ್ಥೆ ಮಾಡಿ, ಸ್ವಚ್ಛತೆ ಕಾಪಾಡಲು ಕ್ರಮ ವಹಿಸಿ, ತಾತ್ಕಾಲಿಕ ಶೌಚಗೃಹಗಳ ಬಗ್ಗೆ ಆಕ್ಷೇಪಣೆಗಳು ಬಂದಿದ್ದು, ಪಿಟ್ ತೆಗೆದು ನಿರಂತರ ನೀರಿನ ಸಂಪರ್ಕ ಆದರೆ ಮಾತ್ರ ತಾತ್ಕಾಲಿಕ ಶೌಚಗೃಹ ನಿರ್ಮಿಸಿ ಎಂದು ಗಾಮಪಂಚಾಯಿತಿ ವರಿಷ್ಠರು ಹಾಗೂ ಪಿಡಿಒಗೆ ಸಲಹೆ ನೀಡಿದರು.
ಸ್ವಚ್ಛತೆ ಹಾಗೂ ಶುದ್ಧ ಕುಡಿಯುವ ನೀರು, ತಡೆರಹಿತ ವಿದ್ಯುತ್ ಸಂಪರ್ಕ ವೈದ್ಯಕೀಯ ಸೇವೆ, ಅನ್ನ ಪ್ರಸಾದ ಭವನದಲ್ಲಿ ಪ್ರಸಾದ ವಿತರಣೆ ಅಚ್ಚುಕಟ್ಟಾಗಿರಲಿ. ಜಿಲ್ಲಾಧಿಕಾರಿಗಳ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಎಲ್ಲ ಇಲಾಖಾಧಿಕಾರಿಗಳು ಕೆಲಸ ಮಾಡಬೇಕು ಎಂದು ನಿರ್ದೇಶನ ನೀಡಿದರು.
ಸಭೆಯಲ್ಲಿ ಪಾಂಡವಪುರ ತಹಸೀಲ್ದಾರ್ ಸಂತೋಷ್, ಇಒ ಲೋಕೆಶಮೂರ್ತಿ, ದೇವಾಲಯದ ಇಒ ಶೀಲಾ, ಗ್ರಾ.ಪಂ. ಅಧ್ಯಕ್ಷೆ ಮಣಿಮುಗನ್, ಉಪಾಧ್ಯಕ್ಷ ಜಿ.ಕೆ.ಕುಮಾರ್, ಪಾರುಪತ್ತೇಗಾರರು, ಸ್ಥಾನೀಕರಾದ ಶ್ರೀ ನಿವಾಸನರಸಿಂಹನ್ ಗುರೂಜಿ, ಪರಿಚಾರಕ ಹಾಗೂ ಪಾರುಪತ್ತೇಗಾರ್ ಪಾರ್ಥಸಾರಥಿ, ಅರ್ಚಕಾದ ಬಿ.ವಿ. ಆನಂದಾಳ್ವಾರ್, ವರದರಾಜ ಭಟ್ಟರ್, ಸ್ಥಾನೀಕರಾದ ತಿರುನಾರಾಯಣ ಅಯ್ಯಂಗಾರ್, ಕರಗಂ ರಂಗಪ್ರಿಯ, ಸಂಪತಕುಮಾರನ್, ಪ್ರಸನ್ನಕುಮಾರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.