ಮೇಲುಕೋಟೆಯಲ್ಲಿ ವಿಶೇಷ ಅಲಂಕಾರ

5mlk1
Published on

ಮೇಲುಕೋಟೆ: ಮೇಲುಕೋಟೆ ಶ್ರೀ ಚೆಲುವನಾರಾಯಣಸ್ವಾಮಿಗೆ ವಿಜಯದಶಮಿ ನಿಮಿತ್ತ ಬುಧವಾರ ಮಹಾರಾಜ ಅಲಂಕಾರ ಮಾಡಲಾಗಿತ್ತು. ಸಹಸ್ರಾರು ಭಕ್ತರು ದೇವರ ದರ್ಶನ ಮಾಡಿ ಧನ್ಯತೆ ಮೆರೆದರು.


ದೇವರಿಗೆ ಶಂಖ, ಚಕ್ರ, ಗದೆ, ಪದ್ಮ, ಕತ್ತಿ, ಬಿಲ್ಲುಬಾಣ ಮುಂತಾದ ದಿವ್ಯಾಯುಧಗಳನ್ನು ಧರಿಸಿ ಮೈಸೂರು ಪೇಟ, ಜರತಾರಿ ರೇಷ್ಮೆಪಂಚೆಯೊಂದಿಗೆ ಭವ್ಯವಾಗಿ ಅಲಂಕಾರ ಮಾಡಲಾಗಿತ್ತು.


ಜಯಘೋಷ ಹಾಕುತ್ತಾ ಭಕ್ತರು ಸ್ವಾಮಿಯನ್ನು ಕಣ್ತುಂಬಿಕೊಂಡರು. ಬೆಳಗಿನಿಂದಲೇ ಸಹಸ್ರಾರು ಸಂಖ್ಯೆಯ ಭಕ್ತರು ತಂಡೋಪತಂಡವಾಗಿ ದೇಗುಲಕ್ಕೆ ಆಗಮಿಸಿ ಪೂಜಾ ಕೈಂಕರ್ಯಗಳನ್ನು ವೀಕ್ಷಿಸಿದರು.


ಬೆಟ್ಟದ ಮೇಲಿರುವ ಯೋಗಾನರಸಿಂಹ ಸ್ವಾಮಿಗೂ ಪಾರಂಪರಿಕ ಶೈಲಿಯಲ್ಲಿ ಮಹಾರಾಜರ ಅಲಂಕಾರ ಮಾಡಲಾಗಿತ್ತು.
ಭಕ್ತರಿಗೆ ಅನ್ನದಾನ : ಯತಿರಾಜದಾಸರ್ ಗುರುಪೀಠದಲ್ಲಿ ಸ್ಥಾನಾಚಾರ್ಯ ಶ್ರೀನಿವಾಸ ನರಸಿಂಹನ್ ನೇತೃತ್ವದಲ್ಲಿ 2 ಸಾವಿರಕ್ಕೂ ಅಧಿಕ ಭಕ್ತರಿಗೆ ಅನ್ನದಾನ ಮಾಡಲಾಯಿತು. ಇದೇ ವೇಳೆ ಆಂಧ್ರದ ಚಿನ್ನಜೀಯರ್ ಮಠದಲ್ಲೂ ಅನ್ನ ಸಂತರ್ಪಣೆ ನಡೆಯಿತು.


ಸಂಭ್ರಮ ಮರೆತ ಜಿಲ್ಲಾಡಳಿತ:
ಚೆಲುವನಾರಾಯಣಸ್ವಾಮಿ ಸನ್ನಿಧಿಯಲ್ಲಿ ನಡೆಯುವ ವಿಜಯದಶಮಿ-ದಸರಾ ಉತ್ಸವವನ್ನೇ ಜಿಲ್ಲಾಡಳಿತ ಮರೆತಿದೆ ಎಂದು ಭಕ್ತರು ಬೇಸರ ವ್ಯಕ್ತಪಡಿಸಿದ್ದಾರೆ. ಸರ್ಕಾರ ಅನುದಾನ ಬಿಡುಗಡೆಮಾಡಿ ನಂಜನಗೂಡು, ಚಾಮರಾಜನಗರ, ಶ್ರೀರಂಗಪಟ್ಟಣದಲ್ಲಿ ದಸರಾ ಆಯೋಜಿಸುತ್ತಾ ಬಂದಿದೆ. ಆದರೆ ಮೈಸೂರು ಅರಸರ ಕುಲದೈವ ಚೆಲುವನಾರಾಯಣನ ಸನ್ನಿಧಿಯ ವಿಜಯದಶಮಿ-ದಸರಾ ನಿರ್ಲಕ್ಷ್ಯ ಮಾಡಲಾಗಿದೆ. ಸರ್ಕಾರ ಮೇಲುಕೋಟೆ ವಿಜಯದಶಮಿಯನ್ನೂ ಜನಾಕರ್ಷಣೆ ಉತ್ಸವವಾಗಿ ರೂಪಿಸಿದರೆ ಪ್ರವಾಸೋದ್ಯಮವೂ ಅಭಿವೃದ್ಧಿಯಾಗಲು ಸಾಧ್ಯವಿದೆ ಎಂದು ಭಕ್ತರು ಸಲಹೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net