

ಚಿತ್ರದುರ್ಗ: ಚಿತ್ರದುರ್ಗ-ದಾವಣಗೆರೆ ರಾಷ್ಟ್ರೀಯ ಹೆದ್ದಾರಿ ಜೆಎಂಐಟಿ ಸಮೀಪ ಬಳಿ ಕಳೆದ 12 ವರ್ಷಗಳಿಂದ ಮೇಲು ಅಥವಾ ಕೆಳಸೇತುವೆ ಇಲ್ಲದೆ ರಸ್ತೆದಾಟಲು ಜನರು ಪರದಾಡುವಂತಾಗಿದೆ ಎಂದು ಕರ್ನಾಟಕ ಸರ್ವೋದಯ ಮಂಡಳಿ ಜಿಲ್ಲಾಧ್ಯಕ್ಷ ಡಾ.ಎಚ್.ಕೆ.ಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಸ್ಥಳದಲ್ಲಿ ಆಗಿರುವ ಅಪಘಾತಗಳಲ್ಲಿ ಹಲವರು ಪ್ರಾಣ ತೆತ್ತಿದ್ದಾರೆ, ಗಾಯಗೊಂಡಿದ್ದಾರೆ. ಮೇಲು ಅಥವಾ ಕೆಳ ಸೇತುವೆ ನಿರ್ಮಿಸುವಂತೆ ಒತ್ತಾಯಿಸಿ ಹಲವು ಬಾರಿ ಸಲ್ಲಿಸಿದ ಮನವಿ, ಹೋರಾಟಗಳಿಂದ ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಸರಿಸಿದ್ದಾರೆ.
ಜೆಎಂಐಟಿ ಮತ್ತಿತರರ ಕಾಲೇಜು ವಿದ್ಯಾರ್ಥಿಗಳು, ಜನರು ರಸ್ತೆ ದಾಟಲು ಒಂದು ಕಿಲೋಮೀಟರ್ ಕ್ರಮಿಸಬೇಕಿದ್ದು, ಹೇಗಾದರೂ ಸರಿ ಎಂದು ರಸ್ತೆ ದಾಟಲು ಪ್ರಯತ್ನಿಸಿದ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಆದರೂ ಸಂಬಂಧಿಸಿದ ರಾ.ಹೆ. ಪ್ರಾಧಿಕಾರ ಅಧಿಕಾರಿಗಳು ನಿರ್ಲಕ್ಷೃ ವಹಿಸಿದ್ದಾರೆ ಎಂದು ಹೇಳಿಕೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.