ಮೇಕೆದಾಟು ಸರ್ಕಾರದ ನಿರ್ಧಾರವೇನು?

1
Published on

ಚನ್ನಪಟ್ಟಣ: ಮೇಕೆದಾಟು ಯೋಜನೆ ಜಾರಿಗೊಳಿಸುತ್ತೇವೆ ಅಥವಾ ಸಾಧ್ಯವಿಲ್ಲ ಎಂಬುದನ್ನು ಬಿಜೆಪಿಯವರು ರಾಜ್ಯದ ಜನತೆಗೆ ತಿಳಿಸಲಿ. ಮುಂದೆ ಕಾಂಗ್ರೆಸ್‌ಗೆ ಜನತೆ ಆಶೀರ್ವಾದ ಮಾಡಲಿದ್ದು ಈ ಯೋಜನೆಯನ್ನು ಜಾರಿಗೊಳಿಸಲು ಮೊದಲ ಆದ್ಯತೆ ನೀಡಲಿದ್ದೇವೆ ಎಂದು ಮಾಜಿ ಸಚಿವ ಚೆಲುವರಾಯಸ್ವಾಮಿ ತಿಳಿಸಿದರು.

ತಾಲೂಕಿನ ಕೆಂಗಲ್ ದೇವಾಲಯ ಸಮೀಪವಿರುವ ಕಲ್ಯಾಣ ಮಂಟಪದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಜನತೆಯ ಹಿತದೃಷ್ಟಿಯಿಂದ ಹಾಗೂ ಪ್ರಾವಾಣಿಕ ವಿಷಯದ ಹಿನ್ನೆಲೆಯಲ್ಲಿ ಮೇಕೆದಾಟು ಯೋಜನೆ ಹೋರಾಟ ಕೈಗೆತ್ತಿಕೊಂಡಿದೆ. ಆದರೆ, ಹೋರಾಟವನ್ನು ಹತ್ತಿಕ್ಕಲು ಜನತೆಯ ದಿಕ್ಕು ತಪ್ಪಿಸಲು ನಡೆಯುತ್ತಿರುವ ಹುನ್ನಾರಗಳನ್ನು ರಾಜ್ಯದ ಜನತೆ ಗಮನಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೋರಾಟ ನಡೆಸುವುದು ಬೇಡ ಎಂದಾದರೆ, ಸರ್ಕಾರ ಈ ಯೋಜನೆ ಜಾರಿ ಬಗ್ಗೆ ಸ್ಪಷ್ಟ ನಿರ್ಧಾರ ಪ್ರಕಟಿಸಲಿ. ಸಿಎಂ ಮುಂದಿನ ಬಜೆಟ್‌ನಲ್ಲಿ ಈ ಯೋಜನೆಯನ್ನು ಮಂಡನೆ ಮಾಡುತ್ತೇವೆ ಎಂದು ಭರವಸೆ ನೀಡಲಿ. ಇದುವರೆಗೂ ಯೋಜನೆ ಜಾರಿ ಬಗ್ಗೆ ಸರ್ಕಾರ ಬದ್ಧತೆ ಪ್ರದರ್ಶಿಸಿಲ್ಲ ಎಂದು ಆರೋಪಿಸಿದರು.

ಜೆಡಿಎಸ್ ವಿರುದ್ಧ ಆಕ್ರೋಶ

ಜೆಡಿಎಸ್ ನಾಯಕ ಎಚ್.ಡಿ.ಕುವಾರಸ್ವಾಮಿ ಬಗ್ಗೆ ವಾಗ್ದಾಳಿ ನಡೆಸಿದ ಚೆಲುವರಾಯಸ್ವಾಮಿ, ಈ ಹೋರಾಟವನ್ನು ಕಾಂಗ್ರೆಸ್‌ನವರು ಹೈಜಾಕ್ ಮಾಡಿದ್ದಾರೆ ಎಂದು ಎಚ್‌ಡಿಕೆ ಹೇಳುತ್ತಾರೆ. ಒಂದು ವೇಳೆ ಇದೇ ಹೋರಾಟವನ್ನು ಅವರು ನಡೆಸಿದ್ದರೆ ಜನಪರ ಹೋರಾಟ, ನಾವು ನಡೆಸಿದರೆ ರಾಜಕೀಯ ಜಾತ್ರೆನಾ ಎಂದು ಪ್ರಶ್ನಿಸಿದರು.

ಹೋರಾಟವನ್ನು ಹತ್ತಿಕ್ಕಲು ಬಿಜೆಪಿಯವರಿಗಿಂತ ಕುವಾರಸ್ವಾಮಿ ಅವರಿಗೇ ಹೆಚ್ಚಿನ ಆಸಕ್ತಿ ಇದೆ. ಅವರಿಗೆ ಮಂಡ್ಯದವರ ಮೇಲೆ ಸಿಟ್ಟಿದೆ. ಮಂಡ್ಯದ ಜನ ಹೋರಾಟಕ್ಕೆ ಕೈಜೋಡಿಸುತ್ತಿರುವುದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿಯೇ ಹೋರಾಟಕ್ಕೆ ಬ್ರೇಕ್ ಹಾಕಲು ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿದರು.

ಜೆಡಿಎಸ್ ಹಾಗೂ ಬಿಜೆಪಿಯ ಯೋಗೇಶ್ವರ್‌ಗೆ ಈ ಯೋಜನೆ ಬೇಕಾಗಿಲ್ಲ. ರಾಜಕೀಯ ದುರುದ್ದೇಶದಿಂದ ಅಪಸ್ಪರ ಎತ್ತುತ್ತಿದ್ದಾರೆ ಎಂದರು.

ಮಾಜಿ ಶಾಸಕ ನರೇಂದ್ರಸ್ವಾಮಿ, ರಮೇಶ್‌ಬಾಬು ಬಂಡಿಸಿದ್ದೇಗೌಡ, ಕೆ.ಬಿ.ಚಂದ್ರಶೇಖರ್ ಮುಖಂಡ ರವಿ ಗಾಣಿಗ, ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ್, ಬೆಂಗಳೂರು ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಬೆಂಗ ರುವೀರ್ ಗೌಡ, ಮುಖಂಡರಾದ ಇಕ್ಬಾಲ್ ಹುಸೇನ್, ಗಾಣಕಲ್ ನಟರಾಜು ಸೇರಿದಂತೆ ಮಂಡ್ಯ ಜಿಲ್ಲೆಯ ಕೈ ನಾಯಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net