

ಆನೇಕಲ್: ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ತೊಂದರೆ ಆಗುವುದಿಲ್ಲ. ಆದರೂ ಅದು ವಿನಾಕಾರಣ ಈ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತದೆ. ಇದು ಸರಿಯಲ್ಲ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಸೋಲೂರು ಬಳಿ ತಮಿಳುನಾಡು ಗಡಿಯ ಗುಮ್ಮಳಾಪುರ ಬಳಿ ಬುಧವಾರ ಪ್ರತಿಭಟನೆ ಮಾಡಿ ಮಾತನಾಡಿದರು. ರಾಜ್ಯದ ಗಡಿ ಅತ್ತಿಬೆಲೆ ಸಮೀಪದ ತಮಿಳುನಾಡಿನ ಮೂಕಂಡಪಲ್ಲಿ ಬಳಿ ತಮಿಳುನಾಡಿನ ರೈತ ಸಂಘಟನೆಗಳು ಬುಧವಾರ ಪ್ರತಿಭಟನೆಗೆ ಮುಂದಾಗಿರುವ ವಿಷಯ ತಿಳಿದು, ಅವರಿಗೆ ಕರ್ನಾಟಕದ ಶಕ್ತಿ ತಿಳಿಸುವ ಉದ್ದೇಶದಿಂದ ಗುಮ್ಮಳಾಪುರದಲ್ಲಿ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಸೋಲೂರು ಗಡಿ ಬಳಿ ಭದ್ರತೆ: ಕನ್ನಡಪರ ಸಂಘಟನೆಗಳು ಮೊದಲ ಬಾರಿಗೆ ತಮಿಳುನಾಡಿನ ಗುಂಬಳಾಪುರ ಹಾಗೂ ಕರ್ನಾಟಕದ ಸೋಲೂರು ಮಧ್ಯದಲ್ಲಿ ಪ್ರತಿಭಟಿಸಲು ಮುಂದಾಗುವ ಮಾಹಿತಿ ತಿಳಿದು ಚೆಕ್‌ಪೋಸ್ಟ್ ಬಳಿ ಪೊಲೀಸರು ಭದ್ರತೆ ಏರ್ಪಡಿಸಿದ್ದರು. ಪ್ರತಿಭಟನಾಕಾರರು ಬರುತ್ತಿದ್ದಂತೆಯೇ ಅವರನ್ನು ತಡೆದರು. ಬಳಿಕ ಕರ್ನಾಟಕ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಬಿಡುಗಡೆ ಮಾಡಿದರು.