

ಹಾಸನ: ಗರ್ಭಕೊರಳ ಕ್ಯಾನ್ಸರ್ ಕುರಿತು ಜನರಲ್ಲಿ ಅರಿವು ಮೂಡಿಸಲು ಮೇ 31ರ ಶುಕ್ರವಾರ ಬೆಳಗ್ಗೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಅವರು ಜಾಗೃತಿ ಜಾಥಕ್ಕೆ ಚಾಲನೆ ನೀಡಲಿದ್ದಾರೆ ಎಂದು ಡಾ.ಬಿ.ಕೆ.ಸೌಮ್ಯಮಣಿ ಅವರು ತಿಳಿಸಿದರು.
ದೇಶದಲ್ಲಿ ಪ್ರತಿ ನಿಮಿಷಕ್ಕೆ ಒಬ್ಬ ಮಹಿಳೆ ಗರ್ಭ ಕೊರಳ ಕ್ಯಾನ್ಸರ್‌ನಿಂದ ಸಾಯುತ್ತಿದ್ದಾರೆ. ಪ್ರತಿವರ್ಷ 1.25 ಲಕ್ಷ ಮಹಿಳೆಯರಿಗೆ ಈ ಕಾಯಿಲೆ ಹರಡುತ್ತಿದೆ. ಈ ಕಾಯಿಲೆ ತಡೆಗಟ್ಟಲು 9ರಿಂದ 14 ವರ್ಷದ ಒಳಗಿನ ಹೆಣ್ಣು ಮಕ್ಕಳಿಗೆ ಎಚ್‌ಪಿವಿ ಲಸಿಕೆ ಹಾಕಿಸಬೇಕು. ಗರ್ಭ ಕೊರಳ ಕ್ಯಾನ್ಸರ್‌ಮುಕ್ತ ಜಿಲ್ಲೆ ನಿರ್ಮಾಣಕ್ಕೆ ನಾವೆಲ್ಲರೂ ಮುಂದಾಗಬೇಕು. ಪ್ರತಿಯೊಬ್ಬ ಮಹಿಳೆಯೂ ಕೂಡ ಇದರ ಬಗ್ಗೆ ತಿಳಿವಳಿಕೆ ಪಡೆದುಕೊಳ್ಳಬೇಕು ಮತ್ತು ಪ್ರತಿ ವರ್ಷವೂ ಕೂಡ ಪರೀಕ್ಷೆ ನಡೆಸುವ ಮೂಲಕ ಕಾಯಿಲೆಯಿಂದ ಮುಕ್ತರಾಗಿ ಇರಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಕರೆ ನೀಡಿದರು.
ಡಾ. ಭಾರತಿ ರಾಜಶೇಖರ್ ಅವರು ಮಾತನಾಡಿ, ಬಹಳಷ್ಟು ದೇಶಗಳಲ್ಲಿ ಗರ್ಭ ಕೊರಳ ಕ್ಯಾನ್ಸರ್ ನಿರ್ಮೂಲನೆ ಮಾಡಲಾಗಿದೆ. ಈ ರೋಗವನ್ನು ವ್ಯಾಕ್ಸಿನ್ ಮೂಲಕ ನಿರ್ಮೂಲನೆ ಮಾಡಬಹುದು. ಕ್ಯಾನ್ಸರ್ ಪರೀಕ್ಷೆಗೆ ಒಂದರಿಂದ ಒಂದೂವರೆ ಸಾವಿರ ರೂ. ಖರ್ಚಾಗುತ್ತದೆ. ಆದರೆ ನಮ್ಮ ದೇಶದಲ್ಲಿ ಇದರ ತಿಳಿವಳಿಕೆ ಬಹಳ ಕಡಿಮೆ ಇದೆ. ಈಗಾಗಲೇ ಕೇಂದ್ರ ಸರ್ಕಾರದಿಂದ ಇದರ ಬಗ್ಗೆ ಹೆಚ್ಚು ಪ್ರಚಾರ ಮಾಡಲಾಗುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಡಾ. ವಿಶಾಲಾಕ್ಷಿ, ಡಾ.ಸಾವಿತ್ರಿ, ಡಾ.ದಿನೇಶ್, ಡಾ.ಎಚ್.ಕೆ. ಪಾಲಾಕ್ಷ ಇದ್ದರು.