ಮೇ 9ರಂದು ಪ್ರತಿಭಟನೆ

Published on

ಅರಕಲಗೂಡು: ಕೇಂದ್ರ ಮತ್ತು ರಾಜ್ಯ ಸರ್ಕಾರ ಮಾಡಿರುವ ಬೆಲೆ ಏರಿಕೆ ವಿರುದ್ಧ ಮೇ 9 ರಂದು ತಾಲೂಕು ಕಚೇರಿ ಮುಂಭಾಗ ಉಗ್ರಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಕರ್ನಾಟಕ ರಾಜ್ಯ ರೈತ ಸಂಘ ಕಾರ್ಯಧ್ಯಕ್ಷ ಭುವನೇಶ್ ತಿಳಿಸಿದರು.

ರಾಸಾಯನಿಕ ರಸಗೊಬ್ಬರ ಮತ್ತು ಬಿತ್ತನೆ ಬೀಜಗಳ ಬೆಲೆ ಏರಿಕೆಯಾಗಿದೆ. ರೈತರಿಗೆ ವ್ಯವಸಾಯ ಮಾಡಲು ಜಮೀನಿಗೆ ಹೋಗಲು ಬಂಡಿ ರಸ್ತೆ ಹಾಗೂ ಕಾಲುದಾರಿಗಳನ್ನು ಇಲ್ಲಿಯವರೆಗೂ ಬಿಡಿಸಿಲ್ಲ. ಅರಕಲಗೂಡಿಗೆ ಏತ ನೀರಾವರಿ ಆಗಿರುವ ಹೋಬಳಿಯ ಕೆರೆ ಕಟ್ಟೆಗಳಿಗೆ ನೀರು ತುಂಬಿಸಬೇಕು. ಉಳಿದ ಏತ ನೀರಾವರಿ ಕಾಮಗಾರಿ ತುರ್ತಾಗಿ ಆಗಬೇಕಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಅರಣ್ಯ ಇಲಾಖೆಯಲ್ಲಿ ಗಿಡ ನೆಟ್ಟಿರುವ ರೈತರಿಗೆ ಇದುವರೆಗೂ ಹಣ ಹಾಕಿಲ್ಲ. ತಾಲೂಕಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು, ಕ್ರಮಕೈಗೊಂಡಿಲ್ಲ. ಅಲ್ಲದೆ, ಸರ್ಕಾರಿ, ಕೆರೆ-ಕಟ್ಟೆಗಳನ್ನು ಸರ್ವೇ ಮಾಡಿರುವ ಮತ್ತು ಮಾಡದಿರುವ ಕೆರೆಗಳ ಒತ್ತುವರಿ ಬಿಡಿಸಿಲ್ಲ. ಕೊಣನೂರಿನ ದೊಡ್ಡ ಕೆರೆ ಏರಿ ಬಿರುಕುಬಿಟ್ಟು ವರ್ಷವಾದರೂ ಇಲ್ಲಿಯವರೆಗೂ ದುರಸ್ತಿಪಡಿಸಿಲ್ಲ ಎಂದು ದೂರಿದರು.

ಕೃಷಿ ಇಲಾಖೆಯಲ್ಲಿ ರೈತರಿಗೆ ಸಿಗಬೇಕಾದ ಸವಲತ್ತುಗಳು ಪ್ರಾಮಾಣಿಕ ರೈತರಿಗೆ ಸಿಗದೆ ಶ್ರೀಮಂತರ ಪಾಲಾಗುತ್ತಿದೆ. ಕಳಪೆ ಬೀಜ, ಕೀಟನಾಶಕ ಮತ್ತು ಗೊಬ್ಬರಗಳನ್ನು ಮಾರಾಟ ಮಾಡುತ್ತಿದ್ದರೂ ಕೃಷಿ ಇಲಾಖೆ ಕಣ್ಣು ಮುಚ್ಚಿ ಕುಳಿತಿದೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿ ಕೊರತೆ ಇದೆ. ಮೈಕ್ರೋ ಫೈನಾನ್ಸ್‌ಗಳ ಕಿರುಕುಳ ತಪ್ಲಿಲ್ಲ. ಇವೆಲ್ಲದರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸುವಂತೆ ಮನವಿ ಮಾಡಿದರು.

ರೈತ ಸಂಘದ ಮುಖಂಡರಾದ ಎಚ್.ಇ.ಜಗದೀಶ್, ಹೊಂಬೇಗೌಡ, ಮುನ್ನ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net