

ಚಾಮರಾಜನಗರ: ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಜಾರಿ ಸಂಬಂಧ ಉಪವರ್ಗೀಕರಣ ಕೈಗೊಳ್ಳಲು ಅವಶ್ಯವಿರುವ ದತ್ತಾಂಶಗಳನ್ನು ಸಂಗ್ರಹಿಸಲು ಮೇ 5 ರಿಂದ 17ರವರೆಗೆ ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸಲಿದ್ದು, ಈ ಕಾರ್ಯವನ್ನು ಸಮೀಕ್ಷಾದಾರರು ಅತ್ಯಂತ ಹೊಣೆಗಾರಿಕೆ ಹಾಗೂ ಗಂಭೀರತೆಯಿಂದ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ತಿಳಿಸಿದರು.
ನಗರದ ಹಳೇ ಕೆಡಿಪಿ ಸಭಾಂಗಣದಲ್ಲಿ ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಕಲ್ಪಿಸುವ (ಉಪ ವರ್ಗೀಕರಣ) ಸಂಬಂಧ ದತ್ತಾಂಶ ಸಂಗ್ರಹಣೆಗಾಗಿ ಸಮೀಕ್ಷೆ ನಡೆಸಲು ಸೋಮವಾರ ಆಯೋಜಿಸಿದ್ದ ಜಿಲ್ಲಾ ಹಾಗೂ ತಾಲೂಕು ಮಟ್ಟದ ಸಮನ್ವಯ ಸಮಿತಿ ಸಭೆ ಹಾಗೂ ಮಾಸ್ಟರ್ ಟ್ರೈನರ್ ತರಬೇತಿಯಲ್ಲಿ ಅವರು ಮಾತನಾಡಿದರು.
ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಜಾರಿ ಮಾಡಲು ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಏಕವ್ಯಕ್ತಿ ವಿಚಾರಣಾ ಆಯೋಗವನ್ನು ನೇಮಿಸಿ ಒಳಮೀಸಲಾತಿಯನ್ನು ವರ್ಗಿಕರಿಸಲು ಸೂಚಿಸಿರುವ ಹಿನ್ನೆಲೆಯಲ್ಲಿ ಉಪವರ್ಗೀಕರಣ ಕೈಗೊಳ್ಳಲು ಅವಶ್ಯವಿರುವ ದತ್ತಾಂಶಗಳನ್ನು ಸಂಗ್ರಹಿಸಲು ಸಮೀಕ್ಷೆ ಕೈಗೊಳ್ಳಲಾಗುತ್ತಿದೆ. ಈ ಸಮೀಕ್ಷಾ ಕಾರ್ಯವು ಅತ್ಯಂತ ಮಹತ್ವದ್ದಾಗಿದ್ದು ನಿಯೋಜಿತ ಸಮೀಕ್ಷಾದಾರರು ಮುತುವರ್ಜಿಯಿಂದ ಸಮೀಕ್ಷಾ ಕೆಲಸವನ್ನು ಮಾಡಬೇಕು ಎಂದರು.
ಪರಿಶಿಷ್ಟಜಾತಿ ಕುಟುಂಬದ ಸಮಗ್ರ ಸಮೀಕ್ಷೆ ಕೈಗೊಂಡು ಸಾಮಾಜಿಕ, ಶೈಕ್ಷಣಿಕ ಮತ್ತ ಆರ್ಥಿಕ ಸ್ಥಿತಿ ಗತಿಗಳ ಬಗ್ಗೆ ವಿಶ್ಲೇಷಿಸಿ ಒಳಮೀಸಲಾತಿ ವರ್ಗೀಕರಣ ಮಾಡಿ ಸರ್ಕಾರಕ್ಕೆ ಶಿಫಾರಸು ಮಾಡುವ ಜವಾಬ್ದಾರಿಯನ್ನು ಆಯೋಗವು ಹೊಂದಿದೆ. ಪರಿಶಿಷ್ಟ ಜಾತಿಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಔದ್ಯೋಗಿಕ ಸ್ಥಿತಿಗತಿಗಳ ಕುರಿತು ಸಮೀಕ್ಷೆ ಮುಖಾಂತರ ಸಮಗ್ರ ಅಂಕಿ ಅಂಶಗಳನ್ನು ಸಂಗ್ರಹಿಸುವುದು ಸಮೀಕ್ಷೆಯ ಉದ್ದೇಶವಾಗಿದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಸಮೀಕ್ಷೆಯನ್ನು ಮೊಬೈಲ್ ಆಪ್ ಮೂಲಕ ಕೈಗೊಳ್ಳಲಾಗುತ್ತದೆ. ಮೇ 5 ರಿಂದ 17ರವರೆಗೆ ಮೊದಲ ಹಂತದಲ್ಲಿ ಸಮೀಕ್ಷೆದಾರರು ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸಲಿದ್ದಾರೆ. ಮೇ 19 ರಿಂದ 21ರವರೆಗೆ ಸಮೀಕ್ಷೆ ಬ್ಲಾಕ್ ಗಳಲ್ಲಿ ವಿಶೇಷ ಶಿಬಿರಗಳನ್ನು ಕೈಗೊಂಡು ಮನೆ ಮನೆ ಭೇಟಿಯ ಅವಧಿಯಲ್ಲಿ ಬಿಟ್ಟು ಹೋದ ಪರಿಶಿಷ್ಟ ಜಾತಿ ಕುಟುಂಬಗಳ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ ಎಂದು ಹೇಳಿದರು.
ಸಮೀಕ್ಷೆದಾರರು ಎಲ್ಲ ಮನೆಗಳಿಗೆ ಭೇಟಿ ನೀಡಿ ಪರಿಶಿಷ್ಟಜಾತಿಗೆ ಸೇರಿದ ಕುಟುಂಬಗಳನ್ನ ಗುರುತಿಸಬೇಕು. ಕುಟುಂಬಗಳ ಎಲ್ಲ ಸದಸ್ಯರ ಮಾಹಿತಿಯನ್ನು ಸೂಚಿಸಲಾಗಿರುವ ಮಾರ್ಗಸೂಚಿಗಳನ್ವಯ ನಿಗದಿತ ನಮೂನೆಯಲ್ಲಿರುವ ಅಂಶಗಳಿಗೆ ಮೊಬೈಲ್ ಆಪ್ ಮೂಲಕ ಮಾಹಿತಿ ದಾಖಲಿಸಬೇಕು. ಯಾವುದೇ ಕುಟುಂಬಗಳನ್ನು ಕೈಬಿಡದಂತೆ ಜಾಗರೂಕತೆ ವಹಿಸಬೇಕು. ಯಾವ ದಿನದಂದು ಯಾವ ಯಾವ ಮನೆಗಳನ್ನು ಸಮೀಕ್ಷೆಗೆ ಒಳಪಡಿಸಲಾಗುತ್ತದೆ ಎಂಬ ಮಾಹಿತಿಯನ್ನ ಆದಷ್ಟು ಮುಂಚಿತವಾಗಿಯೇ ತಿಳಿಸಬೇಕು ಎಂದರು.
ಸಮೀಕ್ಷೆ ವೇಳೆ ಕುಟುಂಬವನ್ನು ಭೇಟಿ ಮಾಡಿದಾಗ ಸ್ನೇಹಮಯ ಹಾಗೂ ಸೌಜನ್ಯ ಪೂರ್ವಕ ನಡತೆ, ತಾಳ್ಮೆಯಿಂದ ಸಮೀಕ್ಷೆಗೆ ಬೇಕಾಗುವ ಮಾಹಿತಿಯನ್ನು ಪಡೆಯಬೇಕು. ಸಮೀಕ್ಷೆ ಬ್ಲಾಕಿನ ಅಧಿಕೃತ ಭಾಗವಾಗಿರುವ ಯಾವುದೇ ಮನೆಯನ್ನು ಬಿಡಬಾರದು. ಗ್ರಾಮಲೆಕ್ಕಿಗರು, ಪಂಚಾಯತ್ ಅಭಿವೃದ್ದಿ ಅಧಿಕಾರಿ, ಬಿಲ್ ಕಲೆಕ್ಟರ್, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಇತರರ ನೆರವನ್ನು ಪಡೆಯಬಹುದು. ಯಾವುದೇ ಗೊಂದಲವಿದ್ದರೂ ತರಬೇತಿ ಅವಧಿಯಲ್ಲಿ ಪರಿಹರಿಸಿಕೊಂಡು ಸೂಚಿಸಿರುವ ನಿಗದಿತ ಅವಧಿಯೊಳಗೆ ಸಮೀಕ್ಷಾ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ಇದೇ ವೇಳೆ ಸಮೀಕ್ಷಾ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಉಪವಿಭಾಗಾಧಿಕಾರಿ ಬಿ.ಆರ್. ಮಹೇಶ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮುನಿರಾಜು, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ಎಂ.ವಿ. ಸುಧಾ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರರಾಜೇ ಅರಸ್, ತಹಶೀಲ್ದಾರ್‌ಗಳಾದ ಬಸವರಾಜು, ರಮೇಶ್ ಬಾಬು, ಗುರುಪ್ರಸಾದ್, ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.