ಮೇ 30ರಂದು ಹೋರಾಟದ ನಡುಗೆ ಹಾಸನದ ಕಡೆಗೆ ಎಂಬ ಬೃಹತ್ ಪ್ರತಿಭಟನೆ

ಮೇ 30ರಂದು ಹೋರಾಟದ ನಡುಗೆ ಹಾಸನದ ಕಡೆಗೆ ಎಂಬ ಬೃಹತ್ ಪ್ರತಿಭಟನೆ
Published on

ಹಾಸನ: ಲೈಂಗಿಕ ಹಗರಣ ಮತ್ತು ಅತ್ಯಾಚಾರ ಪ್ರಕರಣದ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ ಮೇ 31ರಂದು ಬರುವುದಾಗಿ ಹೇಳಿರುವುದು ಪೂರ್ವ ನಿಯೋಜಿತ ಮತ್ತು ಸ್ಕ್ರಿಪ್ಟ್ ಹೇಳಿಕೆಯಾಗಿದೆ ಎಂದು ಹಿರಿಯ ದಲಿತ ಮುಖಂಡ ಎಚ್.ಕೆ. ಸಂದೇಶ್ ಹೇಳಿದರು.
ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್‌ನ್ನು ಬಂಧಿಸಬೇಕು.ಸಂತ್ರಸ್ತ ಮಹಿಳೆಯರಿಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ವಿವಿಧ ಸಂಘಟನೆಗಳ ಸಂಯುಕ್ತ ಆಶಯದಲ್ಲಿ ಮೇ 30ರಂದು ಹೋರಾಟದ ನಡುಗೆ ಹಾಸನದ ಕಡೆಗೆ ಎಂಬ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದ್ದು, ಈ ಪ್ರತಿಭಟನೆಯಲ್ಲಿ 10ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರತಿಭಟನೆ ನಗರದ ಹೇಮಾವತಿ ಪ್ರತಿಮೆಯಿಂದ ಹೊರಟು ಮೆರವಣಿಗೆ ಎನ್.ಆರ್. ವೃತ್ತದ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ಸಮೀಪ ಹೊಸ್ ಬಸ್ ನಿಲ್ಧಾಣ ರಸ್ತೆಯಲ್ಲಿ ಬಗಿರಂಗ ಸಭೆಯನ್ನು ಹಮ್ಮಿಕೊಳ್ಳಲಾಗಿದೆ. ಈಗಾಗಲೇ ರಾಜ್ಯದ ನಾನಾ ಜಿಲ್ಲೆಗಳಿಂದ ಹಲವು ಸಂಘಟನೆಗಳು ಸ್ವಯಂ ಪ್ರೇರಿತವಾಗಿ ಪತ್ರಿಕಾಗೋಷ್ಠಿ ನಡೆಸುವ ಮೂಲಕ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ, ಪ್ರತಿಭಟನೆಗೆ ಆಗಮಿಸುತ್ತಿದ್ದಾರೆ. ಇದೊಂದು ಜಿಲ್ಲೆಯಲ್ಲಿ ಐತಿಹಾಸಿಕ ಪ್ರತಿಭಟನೆಯಾಗಲಿದೆ ಎಂದರು.
ಈ ಪ್ರತಿಭಟನೆಗೆ ಸಾಹಿತಿಗಳು, ಬುದ್ಧಿಜೀವಿಗಳು, ಚಿಂತಕರು, ಹೋರಾಟಗಾರರು ಸೇರಿದಂತೆ ಹಲವರು ಆಗಮಿಸಲಿದ್ದಾರೆ. ಅದೇ ರೀತಿ ಜಿಲ್ಲೆಯಲ್ಲಿಯೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಮೂಲಕ ಪ್ರತಿಭಟನೆಯನ್ನು ಯಶಸ್ಸಿಗೊಳಿಸಬೇಕು ಎಂದು ಮನವಿ ಮಾಡಿದರು.
ಪ್ರಜ್ವಲ್ ರೇವಣ್ಣ ಅವರು ಹರಿಬಿಟ್ಟಿರುವ ವಿಡಿಯೋದಿಂದ ಯಾವುದೇ ಕಾರಣಕ್ಕೂ ಪ್ರತಿಭಟನೆಯನ್ನು ಹಿಂಪಡೆಯುವುದಿಲ್ಲ. ಈಗಾಗಲೇ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದು, ಇದಕ್ಕೆ ಈಗಾಗಲೇ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈ ಹಿಂದೆಯೂ ಕೂಡ ಅವರು ಎಸ್‌ಐಟಿ ಮುಂದೆ ಬರುವುದಾಗಿ ತಪ್ಪಿಸಿಕೊಂಡಿದ್ದಾರೆ. ಮೇ 31ರಂದು ಕೂಡ ಅವರು ಬರುವುದು ಅನುಮಾನ ಇದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ದಲಿತ ಮುಖಂಡರಾದ ಸೋಮಶೇಖರ್, ಎಸ್.ಎನ್. ಮಲ್ಲಪ್ಪ, ವಿಜಯ ಕುಮಾರ್ , ರಾಜಶೇಖರ್, ಪೃಥ್ವಿ ಹಾಜರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net