

ಮೈಸೂರು: ರಾಜ್ಯದ 150 ಇಂಜಿನಿಯರಿಂಗ್ ಕಾಲೇಜು ಮತ್ತು 50ಕ್ಕೂ ಹೆಚ್ಚು ಪ್ರತಿಷ್ಠಿತ ಖಾಸಗಿ, ಡೀಮ್ಡ್ ವಿಶ್ವವಿದ್ಯಾಲಯಗಳಿಗೆ ಪ್ರವೇಶಕ್ಕಾಗಿ ಸಂಯೋಜಿತ ಕಾಮೆಡ್-ಕೆ ಯುಗೇಟ್ ಮತ್ತು ಯುನಿ ಗೇಜ್ ಪ್ರವೇಶ ಪರೀಕ್ಷೆ ಮೇ 28ರಂದು ನಡೆಯಲಿದೆ.
ಪ್ರವೇಶ ಪರೀಕ್ಷೆಯನ್ನು ಕರ್ನಾಟಕ ಅನುದಾನರಹಿತ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಸಂಘದೊಂದಿಗೆ ಸಂಯೋಜಿತವಾಗಿರುವ ಕಾಲೇಜುಗಳು, ಬಿಇ, ಬಿ-ಟೆಕ್ ತರಗತಿ ಒದಗಿಸುವ ಯುನಿ-ಗೇಜ್ ಸದಸ್ಯ ವಿಶ್ವವಿದ್ಯಾಲಯಗಳಿಗೆ ನಡೆಸಲಾಗುತ್ತದೆ. ಭಾರತದಾದ್ಯಂತ 150ಕ್ಕೂ ಹೆಚ್ಚು ನಗರಗಳಲ್ಲಿ 400 ಪರೀಕ್ಷಾ ಕೇಂದ್ರಗಳೊಂದಿಗೆ ಪರೀಕ್ಷೆಯನ್ನು ಆನ್‌ಲೈನ್‌ನಲ್ಲಿ ಜರುಗಲಿದೆ. ಈ ವರ್ಷ 1 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವ ನಿರೀಕ್ಷೆಯಿದೆ ಎಂದು ‘ಕಾಮೆಡ್-ಕೆ’ಯ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಕುಮಾರ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆಸಕ್ತ ಅರ್ಜಿದಾರರು www.comedk.org, www.unigauge.com ಜಾಲತಾಣದಲ್ಲಿ ನೋಂದಾಯಿಸಿಕೊಳ್ಳಬಹುದು. ನೋಂದಣಿ ಪ್ರಕ್ರಿಯೆಯು ಫೆ.15ರಿಂದ ಏ.24ರವರೆಗೆ ಆನ್‌ಲೈನ್‌ನಲ್ಲಿ ಲಭ್ಯವಿರಲಿದೆ ಎಂದು ಮಾಹಿತಿ ನೀಡಿದರು.
ಕಳೆದ 50 ವರ್ಷಗಳಿಂದ ದೇಶದಲ್ಲಿ ಕರ್ನಾಟಕ ಉನ್ನತ ಶಿಕ್ಷಣದಲ್ಲಿ ಅಗ್ರಸ್ಥಾನದಲ್ಲಿದೆ. ವೈವಿಧ್ಯಮಯ ಕಾಲೇಜುಗಳು, ಅತ್ಯುತ್ತಮ ಶಿಕ್ಷಣ ಮತ್ತು ಪದವಿಯ ನಂತರ ಹೆಚ್ಚಿನ ಉದ್ಯೋಗ ನಿಯೋಜನೆ ದರದಿಂದಾಗಿ ಇಂಜಿನಿಯರಿಂಗ್‌ನಲ್ಲಿ ವೃತ್ತಿಜೀವನವನ್ನು ಬಯಸುವವರಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ. ರಾಜ್ಯವು ಉನ್ನತ ಶಿಕ್ಷಣದ ಮೇಲೆ ಹೆಚ್ಚು ಗಮನಹರಿಸಿದ್ದು, ಜಾಗತಿಕ ಬೇಡಿಕೆಯಿರುವ ನುರಿತ ವೃತ್ತಿಪರರ ದೊಡ್ಡ ಸಮೂಹವನ್ನು ರೂಪಿಸಲು ಕಾರಣವಾಗಿದೆ ಎಂದು ಹೇಳಿದರು.
ಕಾಮೆಡ್-ಕೆ ಈ ವರ್ಷ ಕಾಮೆಡ್ ಕರೇಸ್ ಅನ್ನು ಪ್ರಾರಂಭಿಸಿದೆ. ಇದರಲ್ಲಿ ಭಾಗವಹಿಸುವ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಕೌಶಲವರ್ಧಕ ಕೋರ್ಸ್‌ಗಳ ಮೂಲಕ ಉದ್ಯೋಗಕ್ಕೆ ಸಿದ್ಧರಾಗಲು ಸಹಾಯ ಮಾಡುತ್ತದೆ. ಕಾಮೆಡ್ ಕರೇಸ್ ಕರ್ನಾಟಕದಲ್ಲಿ 8 ಇನ್ನೋವೇಷನ್ ಹಬ್ ಸ್ಥಾಪಿಸಿದೆ. ಅವುಗಳಲ್ಲಿ 4 ಬೆಂಗಳೂರಿನಲ್ಲಿದ್ದರೆ, ಉಳಿದವು ಮೈಸೂರು, ಕಲಬುರಗಿ, ಮಂಗಳೂರು, ಬೆಳಗಾವಿಯಲ್ಲಿವೆ. ಪ್ರತಿ ಹಬ್ ಅನ್ನು 5000 ಚದರ ಅಡಿ ವಿಸ್ತೀರ್ಣದ ಅತ್ಯಾಧುನಿಕ ಕೇಂದ್ರದಲ್ಲಿ ಇರಿಸಲಾಗಿದೆ ಎಂದು ತಿಳಿಸಿದರು.