ಮೇ 27 ರಂದು ಚಾಮುಲ್ ಮುಂಭಾಗ ಪ್ರತಿಭಟನೆ

22rajesh1
Published on

ಚಾಮರಾಜನಗರ: ಚಾ.ನಗರ ಹಾಲು ಒಕ್ಕೂಟದಲ್ಲಿ ಮೂಲ ಬಂಡವಾಳವೇ ಇಲ್ಲದೇ ಸಾಲಮಾಡಿ ಐಸ್‌ಕ್ರೀಂ ಘಟಕವನ್ನು ನಿರ್ಮಾಣ ಮಾಡಲು ಮುಂದಾಗಿರುವುದನ್ನು ಖಂಡಿಸಿ ಮೇ 27 ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಹೇಳಿದರು.

ನಗರದ ಪ್ರವಾಸಿಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾ ರೈತ ಸಂಘದ ಪದಾಧಿಕಾರಿಗಳು ಹಾಗೂ ರೈತ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ನಗರದ ಪ್ರವಾಸಿಮಂದಿರದಲ್ಲಿ ಬೆಳಗ್ಗೆ 11 ಗಂಟೆಗೆ ಸಮಾವೇಶಗೊಂಡು ಮೆರವಣಿಗೆಯಲ್ಲಿ ಜಿಲ್ಲಾಡಳಿತ ಭವನ ತಲುಪಿ ಚಾಮುಲ್ ವಿರುದ್ಧ ಧರಣಿ ನಡೆಸಲಾಗುತ್ತದೆ. ಜಿಲ್ಲಾಧಿಕಾರಿಗಳು ಸ್ಥಳಕ್ಕಾಗಮಿಸಿ ನಮ್ಮ ಹಕ್ಕೊತ್ತಾಯಗಳನ್ನು ತಿಳಿದು ಬಗೆಹರಿಸಬೇಕು. ಚಾಮುಲ್ ವ್ಯವಸ್ಥಾಪಕ ನಿರ್ದೇಶಕರನ್ನು ಕರೆಸಿ, ಸಾಲ ಮಾಡಿ ಐಸ್‌ಕ್ರಿಂ ಘಟಕ ಮಾಡುವುದಿಲ್ಲ ಎಂದು ಮುಚ್ಚಳಿಕೆ ಪತ್ರ ಕೊಡಿಸುವವರಿಗೆ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದರು.

ರೈತರು ಡೇರಿಗೆ ಪೊರೈಕೆ ಮಾಡುತ್ತಿರುವ ಹಾಲಿನ ಮೇಲೆಯೇ ಬ್ಯಾಂಕ್ ಸಾಲ ಪಡೆದುಕೊಂಡು ಪ್ರತಿ ತಿಂಗಲೂ ಬಡ್ಡಿ ಪಾವತಿ ಮಾಡುತ್ತಿರುವ ಚಾಮುಲ್ ಮತ್ತೇ ಸಾಲ ಮಾಡಿ ಐಸ್‌ಕ್ರಿಂ ಘಟಕ ಸ್ಥಾಪನೆಗೆ ಮುಂದಾಗಿದೆ. ಸುಮಾರು 50 ಕೋಟಿ ರೂ. ವೆಚ್ಚದಲ್ಲಿ ಐಸ್‌ಕ್ರಿಂ ಘಟಕ ಸ್ಥಾಪನೆ ಮಾಡುವ ಮೂಲಕ ರೈತರ ತಲೆ ಮೇಲೆ ಮತ್ತೆ 50 ಕೋಟಿ ರೂ. ಸಾಲದ ಹೊರೆ ಹೊರಿಸಲು ಮುಂದಾಗಿದೆ. ಅಲ್ಲದೇ ಚಾಮುಲ್‌ನಲ್ಲಿ ವ್ಯಾಪಕ ಭ್ರಷ್ಟಚಾರ ನಡೆಯುತ್ತಿದ್ದು, ಗುತ್ತಿಗೆನೌಕರರ ನೇಮಕಾತಿಯಲ್ಲಿ, ರೈತರಿಂದ ಖರೀದಿಸುವ ಹಾಲಿನಲ್ಲಿ ಭ್ರಷ್ಟಚಾರ ಮಾಡುತ್ತಿದೆ. ಇದನ್ನು ಖಂಡಿಸಿ ನಿರಂತರ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಗುಂಡ್ಲುಪೇಟೆಯಿಂದ ಮಾಡ್ರಳ್ಳಿ ಪಾಪಣ್ಣ, ರೈತ ಮುಖಂಡ ಅಂಬಳೆ ಕುಮಾರಸ್ವಾಮಿ, ಕರಿಯಪ್ಪ, ಹಳ್ಳದ ಮಾದಹಳ್ಳಿ ಯೋಗೇಶ್, ಮೂಡಹಳ್ಳಿ ಸ್ವಾಮಿ, ಸಿದ್ದಲಿಂಗಸ್ವಾಮಿ, ವಿರೇಶ್, ಭೀಮನ ಬೀಡು ಚಂದ್ರು, ರಾಣಿ, ನಂಜನಗೂಡು ರತ್ನಮ್ಮ ಹಾಗೂ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net