ಮೇ 21 ಮತ್ತು 22 ರಂದು ಗ್ರಾಮಾಂತರ ಬಸವ ಜಯಂತ್ಯುತ್ಸವ

shree channabasava swami, virakta matha,chn
Published on

ಚಾಮರಾಜನಗರ: ನಗರದ ಶ್ರೀಸಿದ್ದಮಲ್ಲೇಶ್ವರ ವಿರಕ್ತಮಠದ ವತಿಯಿಂದ ಮೇ 21 ಮತ್ತು 22 ರಂದು ಗ್ರಾಮಾಂತರ ಬಸವ ಜಯಂತ್ಯುತ್ಸವ ಹಾಗೂ ಪೂಜ್ಯದ್ವಯರ ಸಂಸ್ಮರಣೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಮಠದ ಪೀಠಾಧ್ಯಕ್ಷ ಶ್ರೀಚನ್ನಬಸವ ಸ್ವಾಮೀಜಿ ತಿಳಿಸಿದರು.

ನಗರದ ಶ್ರೀಸಿದ್ದಮಲ್ಲೇಶ್ವರ ಮಠದ ಆವರಣದಲ್ಲಿ ಮೇ 21 ರಾತ್ರಿ 8 ಗಂಟೆಯಿಂದ ವಚನಗಾಯನ, ಭಕ್ತಿಗೀತೆಗಳ ಗಾಯನ ಹಾಗೂ ಗ್ರಾಮಾಂತರ ಭಜನೆ ಕಾರ್ಯಕ್ರಮವಿರುತ್ತದೆ. ಮೇ 22 ರಂದು ಬೆಳಗ್ಗೆ 5 ಗಂಟೆಗೆ ಪೂಜ್ಯರ ಗದ್ದುಗೆಗೆ ಬಿಲ್ವಾರ್ಚನೆ ಹಾಗೂ ಮಹಾಮಂಗಳಾರತಿ ನಡೆಯಲಿದೆ. ಬೆಳಗ್ಗೆ 6 ಗಂಟೆಗೆ ಷಟ್‌ಸ್ಥಲ ಧ್ವಜಾರೋಹಣ, ಬೆಳಗ್ಗೆ 7 ಗಂಟೆಗೆ ಇಷ್ಠಲಿಂಗಪೂಜೆ ಹಾಗೂ ಬೆಳಗ್ಗೆ 10 ಗಂಟೆಗೆ ಪ್ರವಚನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಮಂಗಳವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಗ್ರಾಮಾಂತರ ಬಸವ ಜಯಂತೋತ್ಸವದಲ್ಲಿ ಬದನಗುಪ್ಪೆ ಗ್ರಾಮದ ಶ್ರೀಗುರುಮಲ್ಲೇಶ್ವರ ನಾಟಕ ಮಂಡಳಿಯವರ ವತಿಯಿಂದ ರಾತ್ರಿ 8 ಗಂಟೆಗೆ ಪ್ರಭುಲಿಂಗಲೀಲೆ ನಾಟಕ ಏರ್ಪಡಿಸಲಾಗಿದೆ. ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಮಠಗಳ ಮಠಾಧೀಶರು, ರಾಜಕಾರಣಿಗಳು, ಸಮಾಜದ ಎಲ್ಲಾ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಾಹಿತಿಗಳು, ಶ್ರೀಮಠದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ನಿರಂತರ ಪ್ರಸಾದ ವ್ಯವಸ್ಥೆ:

ಈ ಬಾರಿಯ ಗ್ರಾಮಾಂತರ ಬಸವ ಜಯಂತ್ಯುತ್ಸವದಲ್ಲಿ 2 ದಿನಗಳ ಕಾಲವೂ ನಿರಂತರ ದಾಸೋಹ ವ್ಯವಸ್ಥೆಯನ್ನು ಏರ್ಪಡಿಸಲಾಗಿದ್ದು, ವಿಶ್ವಗುರು ಶ್ರೀಬಸವಣ್ಣನವರ ಭಾವಚಿತ್ರ ಮೆರವಣಿಗೆ ಕಾರ್ಯಕ್ರಮ ಇರುವುದಿಲ್ಲ ಎಂದು ಶ್ರೀ ಚನ್ನಬಸವ ಸ್ವಾಮೀಜಿ ತಿಳಿಸಿದರು. ಇತ್ತೀಚೆಗೆ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ ಶ್ರೀಬಸವೇಶ್ವರರ ಜಯಂತಿ ಕಾರ್ಯಕ್ರಮದಲ್ಲಿ ಮೆರವಣಿಗೆ ಆಯೋಜನೆ ಮಾಡಿದ್ದರಿಂದ, ಹೆಚ್ಚಿನ ಸಂಖ್ಯೆಯಲ್ಲಿ ಅಂದೇ ಭಕ್ತರು ಭಾಗವಹಿಸಿದ ಕಾರಣದಿಂದ ಮೆರವಣಿಗೆ ಕಾರ್ಯಕ್ರಮ ಇರುವುದಿಲ್ಲ. 2 ದಿನವೂ ನಿರಂತರವಾಗಿ ದಾಸೋಹ ವ್ಯವಸ್ಥೆ ಇದ್ದು, ಸುಮಾರು 10-15 ಸಾವಿರ ಜನರು ಭಾಗವಹಿಸುವ ಸಾಧ್ಯತೆ ಇದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net