ಮೈನವಿರೇಳಿಸಿದ ಜೋಡೆತ್ತಿನ ಗಾಡಿ ಓಟದ ಸ್ಪರ್ಧೆ

18 ckm 1 web
Published on

ಚಿಕ್ಕಮಗಳೂರು: ಧೂಳೆಬ್ಬಿಸಿಕೊಂಡು ಮಿಂಚಿನಂತೆ ಸಾಗಿದ ಎತ್ತುಗಳು, ಓಡುವ ರಭಸದಲ್ಲಿ ಟ್ರ್ಯಾಕ್ ಬದಲಿಸಿದ ಪಾಲಳ್ಳಿಯ ಸಂಗ್ರಾಮ ಸಿಂಚನ ಜೋಡಿ, ಗುರಿ ತಲುಪಿದ ನಂತರ ಬೈಕ್ ಮೇಲೆರಗಿದ ಎತ್ತುಗಳು, ದಿಕ್ಕಾಪಾಲಾಗಿ ಓಡುತ್ತಿದ್ದ ಪ್ರೇಕ್ಷಕರು, ಪ್ರಥಮ ಬಾರಿಗೆ ಸ್ಪರ್ಧೆಗಿಳಿದ 92 ಜೋಡಿಗಳು...

ಮುಗುಳವಳ್ಳಿ ಗ್ರಾಮದ ಗೌರಿ ಗಣೇಶ ಜಾತ್ರಾ ಮಹೋತ್ಸವದ ಅಂಗವಾಗಿ ಆರದವಳ್ಳಿ ರಸ್ತೆಯಲ್ಲಿ ದೋಸ್ತಿ ದರ್ಬಾರ್ ತಂಡ ಭಾನುವಾರ ಆಯೋಜಿಸಿದ್ದ ದ್ವಿತೀಯ ವರ್ಷದ ರಾಜ್ಯ ಮಟ್ಟದ ಜೋಡೆತ್ತಿನಗಾಡಿ ಓಟದ ಸ್ಪರ್ಧೆಯಲ್ಲಿ ಕಂಡುಬಂದ ದೃಶ್ಯಗಳು. ಆರಂಭಿಕವಾಗಿ ಸ್ಪರ್ಧೆಗಿಳಿದ ಜೋಡಿಗಳು ಎಲ್ಲೂ ದಿಕ್ಕು ತಪ್ಪದೆ ಅಂಕಣದೊಳಗೆ ಸಾಗಿದರೂ ಹತ್ತಾರು ಗಾಡಿಗಳ ನಂತರ ಮಂಡ್ಯ ಪಾಲಳ್ಳಿಯ ಸಂಗ್ರಾಮ ಸಿಂಚನ ಜೋಡೆತ್ತುಗಳು ಗುರಿ ಮುಟ್ಟುವ ತವಕದಲ್ಲಿ ಧೂಳೆಬ್ಬಿಸಿಕೊಂಡು ಸಾಗುವಾಗ ಬ್ಯಾರಿಕೇಡ್ ಮುರಿದುಕೊಂಡು ಟ್ರ್ಯಾಕ್ ಬದಲಿಸಿ ಸ್ಪರ್ಧೆಯಿಂದ ಹೊರಗುಳಿಯಬೇಕಾಯಿತು. ಈ ರಾಸುಗಳ ಮೇಲೆ ಬಾಜಿ ಕಟ್ಟಿದವರ ಮುಖ ಸಪ್ಪೆಯಾಗಿ ಕಿಸೆಯಿಂದ ನೋಟು ಬದಲಿಸಿದ ದೃಶ್ಯವೂ ಕಂಡುಬಂತು. ಓಟದ ರಭಸಕ್ಕೆ ಕೆಲವು ಕಡೆ ಗಾಡಿಯ ಚಕ್ರ ನೆಲ ಬಿಟ್ಟಿತಾದರೂ ಚಾಲಕರು ತಹಬದಿಗೆ ತರುವಲ್ಲಿ ಯಶಸ್ವಿಯಾದರು.

ಅರ್ಜುನ್, ಐರಾವತ, ಗಂಗಾ, ಚಾಂಪಿಯನ್, ಚದುರಂಗ, ಧೀರ, ವೀರ, ಹೆಬ್ಬುಲಿ, ಬಬ್ರುವಾಹನ, ಒಂಟಿಸಲಗ, ಸಿದ್ದರಾಮ, ಸಂಗ್ರಾಮ ಸಿಂಚನ ಸೇರಿದಂತೆ ವಿಭಿನ್ನ ಹೆಸರುಗಳ ಹತ್ತಾರು ಜೋಡೆತ್ತುಗಳು ಅಖಾಡಕ್ಕಿಳಿದು ಪ್ರೇಕ್ಷಕರನ್ನು ರಂಜಿಸಿದವು. ಜನರು ಬ್ಯಾರಿಕೇಡ್ ಸುತ್ತ ನಿಂತು ಸ್ಪರ್ಧಿಗಳನ್ನು ಹುರಿದುಂಬಿಸಿದರೆ ಕೆಲವರು ಎತ್ತುಗಳಿಗೆ ಚಾಟಿ ಬೀಸಿ ಗೊಟರಿಕೆ ಹಾಕಿ ಅಂತಿಮ ಗೆರೆ ತಲುಪಿಸುವ ಸಾಹಸ ಮಾಡಿದರು.

150 ಮೀಟರ್ ಕ್ರಮಿಸುವ ಸಮತಟ್ಟಾದ ಎ, ಬಿ ಅಂಕಣದಲ್ಲಿ ಆಕರ್ಷಕವಾದ ಚಾಮರ ಹಾಕಿ ಬ್ಯಾರಿಕೇಡ್ ನಿರ್ವಿುಸಿದ್ದು ಎತ್ತುಗಳ ದರ್ಬಾರ್ ಕಂಡು ಗ್ರಾಮಸ್ಥರು ಮೂಕವಿಸ್ಮಿತರಾದರು. ಹೊನಲು-ಬೆಳಕಿನಲ್ಲೂ ರೋಮಾಂಚನ ಪ್ರದರ್ಶನ ಮುಂದುವರಿಸಿದ ಸ್ಪರ್ಧಿಗಳನ್ನು ಕಂಡು ಗ್ರಾಮಸ್ಥರು ನಿಬ್ಬೆರಗಾದರು.  ಪ್ರಥಮ ಬಹುಮಾನ ಟಿವಿಎಸ್ ರೇಡಾನ್ ಬೈಕ್, ದ್ವಿತೀಯ ಬಜಾಜ್ ಪ್ಲಾಟಿನಾ ಬೈಕ್, ತೃತೀಯ 30 ಸಾವಿರ ರೂ. ನಗದು, ನಾಲ್ಕು 20 ಸಾವಿರ ರೂ., ಐದನೇ ಬಹುಮಾನ 10 ಸಾವಿರ ರೂ. ಸೇರಿದಂತೆ ವಿಜೇತರಿಕೆ ಟ್ರೋಫಿ ನೀಡಿ ಗೌರವಿಸಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net