ಮೇ 12ರವರೆಗೆ ಕಡಲೆ ಖರೀದಿ

deepa cholan
Published on

ಧಾರವಾಡ: 2019- 20ನೇ ಸಾಲಿನ ಹಿಂಗಾರಿನಲ್ಲಿ ಬೆಳೆದ ಕಡಲೆಯನ್ನು ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ 13 ಖರೀದಿ ಕೇಂದ್ರಗಳಲ್ಲಿ ಏ. 30ರ ವರೆಗೆ ರೈತರಿಂದ ನೋಂದಾಯಿಸಿಕೊಂಡು ಮೇ 12ರವರೆಗೆ ಖರೀದಿ ಮಾಡಲಾಗá-ವುದು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.

ತಮ್ಮ ಕಚೇರಿ ಸಭಾಂಗಣದಲ್ಲಿ ಕಡಲೆ ಖರೀದಿ ಕುರಿತು ಗುರುವಾರ ಏರ್ಪಡಿಸಿದ್ದ ರೈತ ಮುಖಂಡರ, ಕೃಷಿ ಉತ್ಪನ್ನ ಮಾರಾಟ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಹಿಂಗಾರಿನ ಕಡಲೆಕಾಳು ಉತ್ಪನ್ನವನ್ನು ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆಯ ಯೋಜನೆ ಅಡಿ ಖರೀದಿಸಲು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿಯನ್ನು ಏಜೆನ್ಸಿಯಾಗಿ ಗುರುತಿಸಲಾಗಿದೆ. ಎಫ್​ಎಕ್ಯೂ ಗುಣಮಟ್ಟದ ಕಡಲೆ ಕಾಳು ಉತ್ಪನ್ನಕ್ಕೆ ಪ್ರತಿ ಕ್ವಿಂಟಾಲ್​ಗೆ 4875 ರೂ. ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ಹುಬ್ಬಳ್ಳಿ, ಧಾರವಾಡ ಎಪಿಎಂಸಿ ಮುಖ್ಯ ಮಾರುಕಟ್ಟೆ ಪ್ರಾಂಗಣಗಳು, ಜಿಲ್ಲೆಯ ಹೆಬ್ಬಳ್ಳಿ, ಉಪ್ಪಿನಬೆಟಗೇರಿ, ನೂಲ್ವಿ, ಹೆಬಸೂರ, ಕುಂದಗೋಳ, ಯಲಿವಾಳ, ಯರಗುಪ್ಪಿ, ಅಣ್ಣಿಗೇರಿ, ನವಲಗುಂದ, ಮೊರಬ, ತಿರ್ಲಾಪುರ ಗ್ರಾಮ ಸೇರಿ 13 ಸ್ಥಳಗಳಲ್ಲಿ ಖರೀದಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ರೈತರ ನೋಂದಣಿಗೆ ಏ. 30ರವರೆಗೆ ಅವಕಾಶವಿದ್ದು, ಮೇ 12ರವರೆಗೆ ಖರೀದಿ ಪ್ರಕ್ರಿಯೆ ನಡೆಸಲಾಗುವುದು ಎಂದರು.

ಜಂಟಿ ಕೃಷಿ ನಿರ್ದೇಶಕ ಐ.ಬಿ. ರಾಜಶೇಖರ ಮಾತನಾಡಿ, ಜಿಲ್ಲೆಯಲ್ಲಿ 18,088 ನೋಂದಾಯಿತ ಕಡಲೆ ಬೆಳೆಗಾರರಿದ್ದಾರೆ. 1.6 ಲಕ್ಷ ಕ್ವಿಂಟಾಲ್ ಖರೀದಿ ಗುರಿ ಹೊಂದಲಾಗಿದೆ. 8,885 ರೈತರಿಂದ 2,533 ಕ್ವಿಂಟಾಲ್ ಖರೀದಿಸಿದ್ದು, ಉಳಿದ ರೈತರು ಏ. 30ರವರೆಗೆ ನೋಂದಾಯಿಸಬೇಕು ಎಂದರು. ಜಿಪಂ ಸಿಇಒ ಡಾ. ಬಿ.ಸಿ. ಸತೀಶ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ರಾಜ್ಯ ಸಹಕಾರ ಮಾರಾಟ ಮಹಾಮಂಡಳ ವ್ಯವಸ್ಥಾಪಕ ಸಚಿನ್ ಪಾಟೀಲ, ಕೃಷಿ ಉತ್ಪನ್ನ ಮಾರಾಟ ಇಲಾಖೆ ಉಪನಿರ್ದೇಶಕ ಪ್ರಭಾಕರ ಅಂಗಡಿ, ಇತರರಿದ್ದರು.

ಬೇಗ ವ್ಯಾಪಾರ ಮುಗಿಸಲು ಸೂಚನೆ: ಹುಬ್ಬಳ್ಳಿಯ ಅಮರಗೋಳ ಎಪಿಎಂಸಿ ಪ್ರಾಂಗಣದ ಸಗಟು ತರಕಾರಿ ಮಾರುಕಟ್ಟೆಗೆ ಗುರುವಾರ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬೆಳಗ್ಗೆ 7ರಿಂದ 10 ಗಂಟೆವರೆಗೂ ಕಿಕ್ಕಿರಿದು ತುಂಬುವ ತರಕಾರಿ ಮಾರುಕಟ್ಟೆಯಲ್ಲಿ ಯಾವುದೇ ಅಂತರ ಕಾಯ್ದುಕೊಳ್ಳದೇ ವಹಿವಾಟು ನಡೆಸುತ್ತಿದ್ದರಿಂದ ಕಳೆದ ಒಂದು ವಾರದಿಂದ ತರಕಾರಿ ಮಾರಾಟವನ್ನು ಎಪಿಎಂಸಿಯ ವಿವಿಧ ರಸ್ತೆಗಳಿಗೆ ಹಂಚಲಾಗಿತ್ತು.

ಆಗ ಒಂದಿಷ್ಟು ಜನಸಂದಣಿ ಒಂದೇ ಕಡೆ ಸೇರುವುದು ಕಡಿಮೆಯಾಗಿತ್ತು. ಆದರೂ, ತರಕಾರಿಗಾಗಿ ಜನ ಮುಗಿಬೀಳುವುದು ನಿಂತಿಲ್ಲ. ಜನರ ಮಧ್ಯೆ ಪರಸ್ಪರ ಅಂತರ ಕಾಯ್ದುಕೊಳ್ಳುತ್ತಿಲ್ಲ. ಈ ಎಲ್ಲ ಹಿನ್ನೆಲೆಯಲ್ಲಿ ಪೊಲೀಸ್ ಆಯುಕ್ತ ಆರ್. ದಿಲೀಪ್, ಎಸಿಪಿ ಗೋವಿಂದರಾಜ್ ಹಾಗೂ ನವನಗರ ಠಾಣೆ ಇನ್ಸ್​ಪೆಕ್ಟರ್ ಪ್ರಭು ಸೂರಿನ್ ಇತರ ಸಿಬ್ಬಂದಿ ತರಕಾರಿ ಮಾರುಕಟ್ಟೆಯಲ್ಲಿ ಕೆಲಕಾಲ ನಿಂತು ಆಗು-ಹೋಗುಗಳನ್ನು ಗಮನಿಸಿದರು. ಐದಾರು ರಸ್ತೆಗೆ ತರಕಾರಿ ಮಾರುಕಟ್ಟೆ ಹಂಚಿಕೆ ಮಾಡಿದ್ದರೂ ವರ್ತಕರು, ಚಿಲ್ಲರೆ ವ್ಯಾಪಾರಸ್ಥರು, ಜನರು ಮಾತ್ರ ಗುಂಪು ಗೂಡುವುದು ನಿಂತಿಲ್ಲ. ಪೊಲೀಸರು ತಿಳಿ ಹೇಳುವ ಕೆಲಸ ಮಾಡುತ್ತಿದ್ದಾರೆ. ತರಕಾರಿ ಮಾರಾಟ ವಹಿವಾಟು ಆದಷ್ಟು ಬೇಗ ಮುಗಿಸುವಂತೆ ಹಿರಿಯ ಪೊಲೀಸ್ ಅಧಿಕಾರಿಗಳು ವ್ಯಾಪಾರಸ್ಥರಿಗೆ ಸೂಚಿಸಿದರು.

ಕಾಳುಕಡಿ ವ್ಯಾಪಾರ: ಹುಬ್ಬಳ್ಳಿ ಎಪಿಎಂಸಿಯಲ್ಲಿ ಕಳೆದ ನಾಲ್ಕೈದು ದಿನದಿಂದ ಕಾಳು ಕಡಿ ವ್ಯಾಪಾರವೂ ಪುನಾರಂಭವಾಗಿದೆ. ಕಡಲೆ, ಸೋಯಾಬೀನ್, ಗೋಧಿ, ಜೋಳ ಸೇರಿ ವಿವಿಧ ಬೆಳೆಗಳನ್ನು ರೈತರು ತಂದು ಮಾರಾಟ ಮಾಡುತ್ತಿದ್ದಾರೆ.

ಹುಬ್ಬಳ್ಳಿಯಲ್ಲಿ ಕಡಲೆ ಖರೀದಿ 13ರಿಂದ: ಹುಬ್ಬಳ್ಳಿ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದಲ್ಲಿ ಕಡಲೆ ಖರೀದಿ ಕೇಂದ್ರ ಆರಂಭಿಸಲಾಗಿದ್ದು, ಏ. 13ರಿಂದ ಖರೀದಿ ಆರಂಭಿಸಲಾಗುವುದು ಎಂದು ಸಹಕಾರ ಮಾರಾಟ ಮಹಾಮಂಡಳದ ವ್ಯವಸ್ಥಾಪಕ ಸಚಿನ್ ಪಾಟೀಲ ತಿಳಿಸಿದ್ದಾರೆ. ಸದ್ಯ ನೋಂದಣಿ ಪ್ರಕ್ರಿಯೆ ಮುಂದುವರಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net