‘ಮೆಲ್ಲಹಳ್ಳಿ ವಲಯ ಮಟ್ಟದ ಪ್ರತಿಭಾ ಕಾರಂಜಿ’

17
Published on

ಮೈಸೂರು: ಶಿಕ್ಷಕರು ಮಕ್ಕಳಿಗೆ ಬರೀ ಪಠ್ಯ ವಸ್ತುವನ್ನು ಕಲಿಸಲು ಸೀಮಿತವಾಗದೆ, ಮಕ್ಕಳಿಗೆ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರಗಳನ್ನು ಸಹ ಕಲಿಸುವ ಮೂಲಕ ಅವರಲ್ಲಿರುವ ಸುಪ್ತ ಪ್ರತಿಭೆ ವಿಕಾಸಕ್ಕೂ ಸಹಕರಿಸಬೇಕು ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ನಿರ್ದೇಶಕ ಟಿ.ಸತೀಶ್ ಜವರೇಗೌಡ ಹೇಳಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಮೈಸೂರು ತಾಲೂಕಿನ ಮೆಲ್ಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ‘ಮೆಲ್ಲಹಳ್ಳಿ ವಲಯ ಮಟ್ಟದ ಪ್ರತಿಭಾ ಕಾರಂಜಿ’ ಉದ್ಘಾಟಿಸಿ ಮಾತನಾಡಿದರು.
ಪ್ರತಿ ಮಕ್ಕಳಲ್ಲಿ ಒಂದಲ್ಲ ಒಂದು ರೀತಿಯ ಪ್ರತಿಭೆಯಿರುತ್ತದೆ. ಅದು ಅರಳಲು ಶಿಕ್ಷಕರು ಪೂರಕ ವಾತಾವರಣ ಕಲ್ಪಿಸಬೇಕು. ಶಾಲಾ ಮತ್ತು ಕಾಲೇಜುಗಳಲ್ಲಿ ನಡೆಯುವ ಸಾಂಸ್ಕೃತಿಕ ಸ್ಪರ್ಧೆಗಳು ಕಲಿಕೆ ಚೈತನ್ಯಶೀಲತೆ ತುಂಬುತ್ತವೆ. ವಿದ್ಯಾರ್ಥಿಗಳು ತಮ್ಮಲ್ಲಿನ ವಿಶೇಷವಾದ ಪ್ರತಿಭೆಯನ್ನು ಅಭಿವ್ಯಕ್ತಿಗೊಳಿಸಲು ಸೂಕ್ತ ವೇದಿಕೆಯನ್ನೂ ಕಲ್ಪಿಸುತ್ತಿವೆ ಎಂದರು.
ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಹೋಬಳಿ ಕಾರ್ಯದರ್ಶಿ ಕುಮಾರ್ ಮಾತನಾಡಿ, ಸೋಲು ಗೆಲುವಿನ ಬಗ್ಗೆ ಚಿಂತಿಸದೆ ವಿದ್ಯಾರ್ಥಿಗಳು ಎಲ್ಲ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು. ಸ್ಪರ್ಧಾ ಮನೋಭಾವದಿಂದ ಪಾಲ್ಗೊಳ್ಳುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬೇಕು ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗರತ್ನಾ ಚಂದ್ರಕುಮಾರ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಮಂಚಪ್ಪ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಶಂಕರ್, ನೀಲಾ, ಮೆಲ್ಲಹಳ್ಳಿ ಕ್ಲಸ್ಟರ್ ಸಿಆರ್‌ಪಿ ದೀಪು, ನಿಕಟಪೂರ್ವ ಸಿಆರ್‌ಪಿ ಲೋಕೇಶ್ ಪೂರಿಗಾಲಿ, ಮುಖ್ಯಶಿಕ್ಷಕಿ ಪಿ.ಎನ್.ವೀಣಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net