

ಹಾಸನ: ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜನ್ಮ ದಿನಾಚರಣೆ ಅಂಗವಾಗಿ ನಗರದಲ್ಲಿ ಸೋಮವಾರ ನಡೆದ ಈದ್ ಮಿಲಾದ್ ಹಬ್ಬದ ಮೆರವಣಿಗೆಯಲ್ಲಿ ಸಂಸದ ಶ್ರೇಯಸ್ ಪಟೇಲ್ ಮತ್ತು ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್ ಅವರು ಭಾಗವಹಿಸಿ ಸ್ಟೆಪ್ ಹಾಕುವ ಮೂಲಕ ಗಮನ ಸೆಳೆದರು.
ನಗರದ ಪ್ರಮುಖ ಬೀದಿಗಳಲ್ಲಿ ನಡೆದ ಮೆರವಣಿಗೆಯಲ್ಲಿ ಮುಸಲ್ಮಾನ್ ಬಾಂಧವರಿಗೆ ಶುಭಾಶಯ ಕೋರಿ ಮೆರವಣಿಗೆ ಯುದ್ದಕ್ಕೂ ಕುಣಿದು ಕುಪ್ಪಳಿಸಿದರು.
ಬಳಿಕ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶ್ರೇಯಸ್ ಪಟೇಲ್, ಮುಸಲ್ಮಾನರ ಪ್ರಮುಖ ಧಾರ್ಮಿಕ ಹಬ್ಬಗಳಲ್ಲಿ ಒಂದಾದ ಈದ್ ಮಿಲಾದ್ ಪವಿತ್ರ ಹಬ್ಬವಾಗಿದೆ. ಪ್ರೀತಿ ಭ್ರಾತೃತ್ವದ ಸಂಕೇತವಾಗಿರುವ ಈ ಹಬ್ಬ ಆಚರಿಸುತ್ತಿರುವ ಎಲ್ಲರಿಗೂ ಈದ್ ಮಿಲಾದ್ ಹಬ್ಬದ ಶುಭಾಶಯ ಕೋರುವುದಾಗಿ ಹೇಳಿದರು.
ತಾನು ಸಂಸದನಾಗಲು ಮುಸಲ್ಮಾನರ ಕೊಡುಗೆಯು ತುಂಬಾ ಅಪಾರವಾಗಿದೆ. ಅವರಿಗೆ ತಾನೆಂದು ಋಣಿಯಾಗಿರುತ್ತೇನೆ. ಜೊತೆಗೆ ಈ ಪವಿತ್ರ ಹಬ್ಬದಲ್ಲಿ ಭಾಗವಹಿಸಿ ತನಗೆ ಮೈ ರೋಮಾಂಚನದ ಅನುಭವವಾಗಿದೆ ಎಂದರು.